ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಶಿವಸೇನೆ, ಎಂಇಎಸ್ ಪುಂಡರು ಮತ್ತು ಮಹಾರಾಷ್ಟ್ರದ ಸಚಿವರಿಬ್ಬರು ಸಿಡಿಸಿದ ಕಿಡಿ ಈಗ ಬೆಳಗಾವಿಯ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಉಂಟುಮಾಡಿದೆ.
ಬೆಳಗಾವಿ (ಡಿ.07): ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಶಿವಸೇನೆ, ಎಂಇಎಸ್ ಪುಂಡರು ಮತ್ತು ಮಹಾರಾಷ್ಟ್ರದ ಸಚಿವರಿಬ್ಬರು ಸಿಡಿಸಿದ ಕಿಡಿ ಈಗ ಬೆಳಗಾವಿಯ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಉಂಟುಮಾಡಿದೆ. ಕನ್ನಡಿಗರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಮಹಾರಾಷ್ಟ್ರದ ಇಬ್ಬರು ಸಚಿವರು ಹಾಗೂ ಸಂಸದರ ಬೆಳಗಾವಿ ಭೇಟಿಗೆ ನಿರ್ಬಂಧ ಹೇರಿದ್ದರೂ, ಕನ್ನಡಪರ ಸಂಘಟನೆಗಳ ಆಕ್ರೋಶ ತಣಿದಿಲ್ಲ. ಮಹಾರಾಷ್ಟ್ರದ ಗಡಿ ತಗಾದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಹಲವು ಕನ್ನಡ ಪರ ಹೋರಾಟಗಾರರು ಮಂಗಳವಾರ ಹಿರೇಬಾಗೇವಾಡಿ ಟೋಲ್‌ಗೇಟ್‌ನಲ್ಲಿ ಪ್ರತಿಭಟನೆ ನಡೆಸಿದರು.
ರಸ್ತೆಗಳ ಮೇಲೆ ಉರುಳಾಡಿ, ಮಹಾರಾಷ್ಟ್ರ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಮಹಾರಾಷ್ಟ್ರ ನೋಂದಣಿಯ 5ಕ್ಕೂ ಹೆಚ್ಚು ಲಾರಿಗಳ ಮೇಲೆ ಕಲ್ಲು ತೂರಿ, ಅವುಗಳ ಗಾಜುಗಳನ್ನು ಪುಡಿಪುಡಿ ಮಾಡಿದರು. ಮಹಾರಾಷ್ಟ್ರ ನೋಂದಣಿಯ ವಾಹನಗಳನ್ನು ತಡೆದು, ಮಹಾರಾಷ್ಟ್ರ ನೋಂದಣಿಯ ಫಲಕದ ಮೇಲೆ ಕಪ್ಪುಮಸಿ ಬಳಿದರು. ಈ ಮಧ್ಯೆ, ಬೆಳಗಾವಿ, ಕಾರವಾರ, ನಿಪ್ಪಾಣಿಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿ, ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ ಎಂಇಎಸ್ ಪುಂಡರನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪೊಲೀಸರು ಬಂಧಿಸಿದರು. ಅಲ್ಲದೆ, ಬೆಳಗಾವಿ ಜಿಲ್ಲಾಧಿಕಾರಿ ಕೂಡ ಎಂಇಎಸ್ ಪುಂಡರ ಪ್ರತಿಭಟನೆಗೆ ಕ್ಯಾರೇ ಮಾಡದೆ, ಅವರ ಮನವಿ ಸ್ವೀಕರಿಸಲು ನಿರಾಕರಿಸಿ, ಖಡಕ್ ಸಂದೇಶ ರವಾನಿಸಿದರು.
undefined
ಮಹಾ ಸಚಿವರಿಗೆ ‘ಗಡಿ’ ನಿರ್ಬಂಧ: ಆದೇಶ ಹೊರಡಿಸಿದ ಬೆಳಗಾವಿ ಜಿಲ್ಲಾಧಿಕಾರಿ
ಗಡಿಯೊಳಗೆ ನುಗ್ಗಲು ಶಿವಸೇನೆ ಕಾರ್ಯಕರ್ತರ ಯತ್ನ: ಕರವೇ ಪ್ರತಿಭಟನೆ ಹಾಗೂ ಬೆಳಗಾವಿ ಭೇಟಿ ರದ್ದು ಮಾಡಿದ ಮಹಾರಾಷ್ಟ್ರ ಸಚಿವರ ನಿರ್ಧಾರ ಖಂಡಿಸಿ ಶಿವಸೇನೆಯ ಕೊಲ್ಲಾಪುರ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ಹಾಗೂ ಸಹಚರರು ಗಡಿಭಾಗದ ಕೊಗನೊಳ್ಳಿಯ ಚೆಕ್‌ಪೋಸ್ಟ್‌ನಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕದ ಗಡಿಯೊಳಗೆ ನುಗ್ಗಲು ಯತ್ನಿಸಿದರು. ಈ ವೇಳೆ, ಪೊಲೀಸರು ಅವರನ್ನು ವಶಕ್ಕೆ ಪಡೆದು, ವಾಪಸ್ ಕಳುಹಿಸಿದರು. ಅಲ್ಲದೆ, ಗಡಿಯಲ್ಲಿ ಗಲಾಟೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಇದರಿಂದ ಆಕ್ರೋಶಗೊಂಡ ಶಿವಸೇನೆಯ ಕಾರ್ಯಕರ್ತರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ, ತಮ್ಮದೇ ಸಚಿವರ ವಿರುದ್ಧ ಘೋಷಣೆ ಕೂಗಿದರು. ಜೊತೆಗೆ, ಪೊಲೀಸರ ಮೂಲಕ ಮಹಾರಾಷ್ಟ್ರ ಸಚಿವರಿಗೆ ಹೂ, ಬಳೆ, ಸೀರೆ, ಅರಿಶಿಣ ಕುಂಕುಮ ಕಳುಹಿಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರಿದ ಶಿವಸೇನೆಯ ಪುಂಡಾಟ: ಈ ಮಧ್ಯೆ, ಮಹಾರಾಷ್ಟ್ರದಲ್ಲಿ ಶಿವಸೇನೆ ಕಾರ್ಯಕರ್ತರು ಮತ್ತೆ ತಮ್ಮ ಪುಂಡಾಟ ಮೆರೆದಿದ್ದಾರೆ. ಕರವೇ ಹೋರಾಟವನ್ನು ಖಂಡಿಸಿ ಪುಣೆಯಲ್ಲಿ ಉದ್ಧವ್ ಠಾಕ್ರೆ ಬಣದ ಶಿವಸೇನಾ ಕಾರ್ಯಕರ್ತರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ 10ಕ್ಕೂ ಹೆಚ್ಚು ಬಸ್‌ಗಳ ಮೇಲೆ ‘ಜೈ ಮಹಾರಾಷ್ಟ್ರ’ ಎಂದು ಕೇಸರಿ ಹಾಗೂ ಕಪ್ಪು ಬಣ್ಣದಿಂದ ಬರೆದಿದ್ದಾರೆ. ಅಲ್ಲದೆ, ಮುಂಬೈನಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ನೀವು ಮಹಾರಾಷ್ಟ್ರದ 5 ಲಾರಿಗಳಿಗೆ ಕಲ್ಲು ಹೊಡೆದರೆ ನಾವು ಕರ್ನಾಟಕದ 50 ಬಸ್‌ಗಳನ್ನು ಒಡೆದು ಹಾಕುತ್ತೇವೆ. ಇದಕ್ಕಾಗಿ ಈಗಾಗಲೇ ಶಿವಸೇನೆ ಕಾರ್ಯಕರ್ತರು ಬೆಳಗಾವಿಯತ್ತ ಹೊರಟಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಬೆಳಗಾವಿ ಗಡಿ ಗಲಾಟೆಗೆ ಶರದ್ ಪವಾರ್ ಕೆಂಡ, ಕರ್ನಾಟಕಕ್ಕೆ ತಾಳ್ಮೆ ಪರೀಕ್ಷಿಸದಂತೆ ಎಚ್ಚರಿಕೆ!
ಬಸ್ ಸಂಚಾರ ರದ್ದು: ಈ ಎಲ್ಲಾ ಘಟನೆಗಳ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಹಾಗೂ ಕರ್ನಾಟಕದ ಗಡಿಭಾಗದಿಂದ ಮಹಾರಾಷ್ಟ್ರಕ್ಕೆ ತೆರಳುವ ಹಲವು ಬಸ್‌ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಥಣಿ, ಚಿಕ್ಕೋಡಿ, ನಿಪ್ಪಾಣಿ, ಕಾಗವಾಡದಿಂದ ಮಹಾರಾಷ್ಟ್ರಕ್ಕೆ ಹೋಗುವ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಪರಿಸ್ಥಿತಿ ಸುಧಾರಿಸುವವರೆಗೂ ಬಸ್ ಸಂಚಾರ ಸ್ಥಗಿತಗೊಳಿಸಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿರ್ಧರಿಸಿದೆ. ಆದರೆ, ಖಾಸಗಿ ವಾಹನಗಳ ಸಂಚಾರ ಎಂದಿನಂತೆಯೇ ಮುಂದುವರಿದಿದೆ.