ಸಮವಸ್ತ್ರದಲ್ಲಿರುವಾಗ ರಸ್ತೆಯಲ್ಲಿ ಮದ್ಯ ಸೇವಿಸಿ, ಹಾಡಹಗಲೇ ಮೋಜು ಮಸ್ತಿ ಮಾಡಿದ ರಾಮನಗರ ಜಿಲ್ಲೆ ಮಾಗಡಿ ಪೊಲೀಸ್ ಠಾಣೆಯ ಇಬ್ಬರು ಎಎಸ್‌ಐ ಮತ್ತು ಪೊಲೀಸ್ ಪೇದೆಯನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಮಾಗಡಿ/ರಾಮನಗರ (ಜೂ.24): ಸಮವಸ್ತ್ರದಲ್ಲಿರುವ ಎಎಸ್‌ಐ, ಪೇದೆ ಸೇರಿದಂತೆ ನಾಲ್ವರು ಮದ್ಯ ಸೇವಿಸಿ ಮೋಜುಮಸ್ತಿ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾಗಡಿ ಪೊಲೀಸ್ ಠಾಣೆಯ ಎಎಸ್‌ಐಗಳಾದ ಮಂಜುನಾಥ್, ಗೋವಿಂದಯ್ಯ ಮತ್ತು ಪೇದೆ ನಾರಾಯಣಮೂರ್ತಿ ಮೈಮೇಲೆ ಪ್ರಜ್ಞೆ ಇಲ್ಲದಷ್ಟು ಕಂಠಪೂರ್ತಿ ಮದ್ಯ ಸೇವಿಸಿದವರು. ಇವರೊಂದಿಗೆ ಇನ್ನಿಬ್ಬರು ಮೋಜು ಮುಸ್ತಿನಲ್ಲಿ ತೊಡಗಿದ್ದರು.
ಮಾಗಡಿ ಠಾಣೆಯಿಂದ ಕೈದಿಯೊಬ್ಬನನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಬಿಡಲು ಎಎಸ್‌ಐ ಮತ್ತು ಪೇದೆ ಕಾರಿ (ಕೆಎ 42, ಎನ್ 2652)ನಲ್ಲಿ ಆಗಮಿಸಿದ್ದಾರೆ. ಮಾಗಡಿಗೆ ವಾಪಸ್ಸಾಗುವಾಗ ರಸ್ತೆ ಬದಿಯಲ್ಲಿಯೇ ಮದ್ಯ ಸೇವನೆ ಮಾಡಿದ್ದಾರೆ. ಮಾತಿನ ಮೇಲೆ ಹಿಡಿತವೇ ಸಿಗದಷ್ಟುಕುಡಿದು ತೂರಾಡುತ್ತಿದ್ದ ಮಂಜುನಾಥ್ ಕಾರಿನಲ್ಲಿಯೇ ಸಮವಸ್ತ್ರ ಕಳಚಿಟ್ಟಿದ್ದಾರೆ. ಈ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಕಾರು ಚಾಲನೊಂದಿಗೆ ಕಿರಿಕ್ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ದೃಶ್ಯಗಳನ್ನು ವ್ಯಕ್ತಿಯೊಬ್ಬ ಸೆರೆ ಹಿಡಿದಿರುವ ವಿಡಿಯೋ ವೈರಲ್ ಆಗಿದೆ.
ಬಸ್‌ಗಳಲ್ಲಿ ಸ್ತ್ರೀಯರ ‘ಶಕ್ತಿ ಪ್ರದರ್ಶನ’: ವೃದ್ಧೆಗೆ ಕಪಾಳಮೋಕ್ಷ ಮಾಡಿದ ಲೇಡಿ ಕಂಡಕ್ಟರ್
ಇಬ್ಬರು ಎಎಸ್‌ಐ, ಪೇದೆ ಅಮಾನತು: ಸಮವಸ್ತ್ರದಲ್ಲಿ ಇರುವಾಗಲೇ ಮದ್ಯ ಸೇವಿಸಿ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಇಬ್ಬರು ಎಎಸ್‌ಐ ಮತ್ತು ಓರ್ವ ಮುಖ್ಯ ಪೇದೆಯನ್ನು ಅಮಾನತ್ತು ಮಾಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ. ಎಎಸ್‌ಐಗಳಾದ ಮಂಜುನಾಥ್, ಗೋವಿಂದಯ್ಯ ಮತ್ತು ಪೇದೆ ನಾರಾಯಣಮೂರ್ತಿ ದೀರ್ಘಾವಧಿ ರಜೆಯಲ್ಲಿದ್ದರು. ನಿನ್ನೆ ಕರ್ತವ್ಯಕ್ಕೆ ಹಾಜರಾಗುವ ವೇಳೆ ಮದ್ಯ ಸೇವಿಸಿ ಅನುಚಿತವಾಗಿ ವರ್ತನೆ ತೋರಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಮೂವರನ್ನು ಅಮಾನತು ಮಾಡಲಾಗಿದೆ. ಇಂತಹ ಪ್ರಕರಣಗಳಿಂದ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಹಾಗಾಗಿ ಮೂವರು ಅಮಾನತು ಮಾಡಿ ಇಲಾಖೆ ವಿಚಾರಣೆ ನಡೆಸುತ್ತೇವೆ ಎಂದು ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.