
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಜೂ.10): ಈವರೆಗೆ ರಾಜ್ಯದ ಒಂಬತ್ತು ಕೇಂದ್ರ ಕಾರಾಗೃಹಗಳಲ್ಲಿ ಸಿಗುತ್ತಿದ್ದ ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳು ತಯಾರಿಸುವ ವಿವಿಧ ಉತ್ಪನ್ನಗಳು ಇನ್ನೂ ಮುಂದೆ ಪೊಲೀಸ್ ಹಾಗೂ ಸಶಸ್ತ್ರ ಮೀಸಲು ಪಡೆಗಳ (ಕೆಎಸ್‌ಆರ್‌ಪಿ) ಕ್ಯಾಂಟೀನ್‌ಗಳಲ್ಲಿ ಲಭ್ಯವಾಗಲಿವೆ. ಸದ್ಯ ಬೆಂಗಳೂರಿನ ಕೆಎಸ್‌ಆರ್‌ಪಿ ಮತ್ತು ಪೊಲೀಸ್ ಕ್ಯಾಂಟೀನ್‌ಗಳಲ್ಲಿ ಮಾತ್ರ ಮಾರಾಟಕ್ಕೆ ಸಿಗುತ್ತಿದ್ದು, ಶೀಘ್ರದಲ್ಲಿ ಉಳಿದ ಕ್ಯಾಂಟೀನ್‌ಗಳಲ್ಲಿ ಖರೀದಿಗೆ ಅವಕಾಶ ಸಿಗಲಿದೆ.
ಜೈಲು ಹಕ್ಕಿಗಳು ತಯಾರಿಸುವ ಈ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸುವ ಮೂಲಕ ಕೈದಿಗಳ ಕೈಗೆ ಹೆಚ್ಚು ಕೆಲಸ ದೊರೆಯುವ ಜೊತೆಗೆ ಕಾರಾಗೃಹ ಇಲಾಖೆಗೆ ಹೆಚ್ಚಿನ ಆದಾಯ ದೊರಕಬೇಕು ಎಂಬ ಉದ್ದೇಶದಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ),ಪೊಲೀಸ್ ಹಾಗೂ ಸಶಸ್ತ್ರ ಮೀಸಲು ಪಡೆಗಳ (ಕೆಎಸ್‌ಆರ್‌ಪಿ) ಕ್ಯಾಂಟೀನ್‌ಗಳಲ್ಲಿ ಜೈಲು ಉತ್ಪನ್ನಗಳ ಮಾರಾಟಕ್ಕೆ ಅನುಮತಿ ನೀಡಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದಂತೆ ರಾಜ್ಯದ 9 ಸೆಂಟ್ರಲ್ ಜೈಲುಗಳ ಆವರಣಗಳಲ್ಲಿ ಮಾತ್ರ ಮಾರಾಟಕ್ಕೆ ಇದ್ದ ಅವಕಾಶವನ್ನು ಇನ್ನಷ್ಟುವಿಸ್ತರಿಸಿದಂತಾಗಿದೆ.
ಸಂವಿಧಾನ ಬದಲಿಸುತ್ತೇವೆ ಎಂದಿದ್ದವರನ್ನೇ ಬದಲಾಯಿಸಿದ್ದೇವೆ: ಸಿಎಂ ಸಿದ್ದರಾಮಯ್ಯ
ಕಾರಾಗೃಹಗಳ ಕೈಗಾರಿಕೆಗಳಲ್ಲಿ ಕೈದಿಗಳಿಂದ ತಯಾರಿಸುವ ಶರ್ಟ್, ಬೇಕರಿ ತಿನ್ನಿಸುಗಳು ಹಾಗೂ ಲೇಖನ ಸಾಮಗ್ರಿಗಳು ಸೇರಿ ಇತರೆ ವಸ್ತುಗಳನ್ನು ಸಾರ್ವಜನಿಕವಾಗಿ ಜನಪ್ರಿಯಗೊಳಿಸಲು ಇಲಾಖೆಯ ಕ್ಯಾಂಟೀನ್‌ಗಳಲ್ಲಿ ಮಾರಾಟಕ್ಕೆ ಅವಕಾಶ ನೀಡುವಂತೆ ಕಾರಾಗೃಹ ಮುಖ್ಯಸ್ಥ ಮನೀಷ್ ಕರ್ಬೀಕರ್ ಮನವಿಗೆ ಸ್ಪಂದಿಸಿ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು ಸಮ್ಮತಿಸಿದ್ದಾರೆ. ಪೊಲೀಸ್ ಕ್ಯಾಂಟೀನ್‌ಗಳಲ್ಲಿ ಪ್ರತಿಕ್ರಿಯೆ ಗಮನಿಸಿ ಮುಂದಿನ ಹಂತದಲ್ಲಿ ಬಿಎಸ್‌ಎಫ್ (ಮಿಲಿಟರಿ) ಹಾಗೂ ಕೇಂದ್ರ ಸಶಸ್ತ್ರ ಮೀಸಲು ಪಡೆಯ (ಸಿಆರ್‌ಪಿಎಫ್) ಕ್ಯಾಂಟೀನ್‌ಗಳಲ್ಲಿ ಕೂಡಾ ಜೈಲು ಉತ್ಪನ್ನಗಳ ಮಾರಾಟಕ್ಕೆ ಯೋಜಿಸಲಾಗಿದೆ ಎಂದು ಮನೀಷ್ ಕರ್ಬೀಕರ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಕೈದಿಗಳ ಉತ್ಪನಗಳಿಗೆ ಬೇಡಿಕೆ ಇದೆ: ಕಾರಾಗೃಹಗಳಲ್ಲಿ ಬೇಕರಿ ತಿನ್ನಿಸುಗಳು, ಶರ್ಟ್, ಹೊದಿಕೆಗಳು, ಯೋಗ ಮ್ಯಾಟ್, ಜಮಾಖಾನಗಳು, ಟವಲ್, ಸೋಪು, ಫಿನಾಯಿಲ್ ಹಾಗೂ ಲೇಖನ ಸಾಮಾಗ್ರಿಗಳು(ಫೈಲ್, ನೋಟ್ ಪ್ಯಾಡ್‌ಗಳು) ಸೇರಿದಂತೆ ಹಲವು ವಸ್ತುಗಳನ್ನು ತಯಾರಿಸಲಾಗುತ್ತದೆ. ನಿಯಮದ ಪ್ರಕಾರ ಉತ್ಪಾದನಾ ವೆಚ್ಚ ಸೇರಿ ಒಟ್ಟಾರೆ ಶೇ.15 ರಷ್ಟುಲಾಭಕ್ಕೆ ಮಾತ್ರ ಕೈದಿಗಳು ತಯಾರಿಸುವ ಉತ್ಪನ್ನಗಳನ್ನು ಮಾರಾಟ ಮಾಡಬೇಕಿದೆ. ಹೆಚ್ಚಿನ ಲಾಭಾಂಶಕ್ಕೆ ಮಾರಾಟ ಮಾಡಲು ಅವಕಾಶವಿಲ್ಲ ಎಂದು ಮನೀಷ್ ಕರ್ಬೀಕರ್ ಹೇಳಿದರು.
ಮೊದಲ ಹಂತದಲ್ಲಿ ಬೆಂಗಳೂರಿನ ಆಡುಗೋಡಿಯ ಕೆಎಸ್‌ಆರ್‌ಪಿ ಕ್ಯಾಂಟೀನ್ ಹಾಗೂ ಪೊಲೀಸ್ ಕ್ಯಾಂಟೀನ್‌ಗಳಲ್ಲಿ ಶರ್ಟ್‌ಗಳನ್ನು ಪೂರೈಸಲಾಗಿದೆ. ಇನ್ನುಳಿದ ಕ್ಯಾಂಟೀನ್‌ಗಳಿಗೆ ಸಹ ಉತ್ಪನ್ನಗಳನ್ನು ಪೂರೈಸಲಾಗುತ್ತದೆ. ಪೊಲೀಸ್ ಕ್ಯಾಂಟೀನ್‌ಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಹ ಬಂದಿದ್ದು, 450 ರುಗಳಿಗೆ ಉತ್ತಮ ಗುಣಮಟ್ಟದ ಶರ್ಟ್ ಸಿಗುತ್ತದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಪ್ರತಿ ದಿನ 25 ಶರ್ಟ್‌ಗಳು ತಯಾರಿಸಲಾಗುತ್ತಿದೆ. ಶರ್ಟ್‌ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಜೈಲಿನಲ್ಲಿ ತಯಾರಿಕೆ ಘಟಕಗಳ ಸಂಖ್ಯೆಯನ್ನು ಸಹ ಹೆಚ್ಚಿಸಲು ನಿರ್ಧರಿಸಲಾಗಿದೆ. ಪ್ರತಿ ದಿನ 25 ಲೀಟರ್ ಫಿನಾಯಿಲ್ ಸಹ ಮಾರಾಟವಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.
ವಾಹನಗಳಲ್ಲಿ ಮಾರಾಟ ಆರಂಭಿಸುವ ಚಿಂತನೆ: ಮೊದಲು ವಿಧಾನಸೌಧ, ಎಂಎಸ್ ಬಿಲ್ಡಿಂಗ್ ಹಾಗೂ ಕಾರ್ಪೋರೇಷನ್ ಸೇರಿದಂತೆ ನಗರದ ಪ್ರಮುಖ ಸರ್ಕಾರಿ ಕಚೇರಿಗಳ ಬಳಿ ಕೈದಿಗಳು ಬೆಳೆದ ತರಕಾರಿ ಹಾಗೂ ಬೇಕರಿ ತಿನ್ನಿಸು (ಬ್ರೇಡ್, ರಸ್‌್ಕಗಳು ಹಾಗೂ ಬಿಸ್ಕೆಟ್‌ಗಳು) ಕಾರಾಗೃಹದ ಸಿಬ್ಬಂದಿ ವಾಹನದಲ್ಲಿ ಮಾರಾಟ ಮಾಡುತ್ತಿದ್ದರು. ಅದನ್ನು ಕೊರೋನಾ ಕಾಲದಲ್ಲಿ ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಮಾರಾಟಕ್ಕೆ ತೀರ್ಮಾನಿಸಲಾಗಿದೆ ಎಂದು ಎಡಿಜಿಪಿ ಹೇಳಿದರು.
ಲೇಖನ ಸಾಮಾಗ್ರಿ ಖರೀದಿಗೆ ಸರ್ಕಾರದ ಇಲಾಖೆಗಳಿಗೆ ಕೋರಿಕೆ: ಕೈದಿಗಳು ತಯಾರಿಸುವ ಫೈಲ್, ನೋಟ್ ಪ್ಯಾಡ್ ಸೇರಿದಂತೆ ಲೇಖನ ಸಾಮಗ್ರಿಗಳನ್ನು ಖರೀದಿಸುವಂತೆ ಸರ್ಕಾರದ ಇತರೆ ಇಲಾಖೆಗಳಿಗೆ ಪತ್ರ ಬರೆದು ಕೋರಿಕೆ ಸಲ್ಲಿಸಲಾಗಿದೆ. ಈಗಾಗಲೇ ಫೈಲ್‌ಗಳನ್ನು ಪೊಲೀಸ್ ಇಲಾಖೆ ಖರೀದಿಸುತ್ತಿದೆ. ಇನ್ನುಳಿದ ಇಲಾಖೆಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದು ಅವರು ತಿಳಿಸಿದರು.
ಮೆಟ್ರೋಗಾಗಿ 203 ಮರಗಳನ್ನು ಕಡಿಯಲು ಹೈಕೋರ್ಟ್ ಒಪ್ಪಿಗೆ
ಕೈದಿಗಳ ತಯಾರಿಸುವ ಉತ್ಪನ್ನಗಳು ಸಾರ್ವಜನಿಕರು ಖರೀದಿಸಲು ಮಾರುಕಟ್ಟೆವಿಸ್ತರಿಸಲಾಗುತ್ತಿದೆ. ಈ ಉತ್ಪನ್ನಗಳನ್ನು ಜನರು ಖರೀದಿಸುವಂತೆ ಕೋರುತ್ತೇನೆ. ಇದರಿಂದ ಕಾರಾಗೃಹಗಳಲ್ಲಿ ಕೈದಿಗಳ ಸುಧಾರಣೆಗೆ ಸಹಕಾರ ಹಾಗೂ ಪ್ರೋತ್ಸಾಹ ನೀಡಿದಂತಾಗುತ್ತದೆ.
-ಮನೀಷ್ ಕರ್ಬೀಕರ್, ಮುಖ್ಯಸ್ಥ, ರಾಜ್ಯ ಕಾರಾಗೃಹ ಹಾಗೂ ಸುಧಾರಣಾ ಇಲಾಖೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ