ಎದೆ ಹಿಡ್ಕೊಂಡು ಮಾಡಾಳ್‌ ಡ್ರಾಮಾ: ಏನ್‌ ತೊಂದ್ರೆ ಇಲ್ಲ ಕರ್ಕೊಂಡು ಹೋಗಿ ಎಂದ ವೈದ್ಯರು

By Sathish Kumar KHFirst Published Mar 27, 2023, 10:34 PM IST
Highlights

ಲೋಕಾಯುಕ್ತ ಪೊಲೀಸರು ಬಂಧಿಸಿದ ಬೆನ್ನಲ್ಲೇ ತಮಗೆ ಹೃದಯ ಸಂಬಂಧಿ ನೋವಿದೆ ಎಂದು ಆಸ್ಪತ್ರೆಗೆ ತಪಾಸಣೆಗೆ ಬಂದ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಬೆಂಗಳೂರು (ಮಾ.27): ಅಕ್ರಮ ಹಣ ಸಂಪಾದನೆ ಹಾಗೂ ಲಂಚ ಸ್ವೀಕಾರ ಆರೋಪದಡಿ ಲೋಕಾಯುಕ್ತ ಪೊಲೀಸರು ಬಂಧಿಸಿರುವ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಬಂಧನದ ಬೆನ್ನಲ್ಲೇ ತನಗೆ ಎದೆನೋವಿದೆ ಎಂದು ಹೇಳಿಕೊಂಡಿದ್ದರು. ಅವರನ್ನು ಬೌರಿಂಗ್‌ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದ್ದು, ಯಾವುದೇ ಆರೋಗ್ಯ ಸಮಸ್ಯೆಯಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಲೋಕಾಯುಕ್ತ ಇಲಾಖೆಯಲ್ಲಿದ್ದ ಅಕ್ರಮ ಹಣ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ.7ರಂದು ಹೈಕೋರ್ಟ್‌ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದುಕೊಂಡು ಸಾರ್ವಜನಿಕವಾಗಿ ಓಡಾಡಿಕೊಂಡಿದ್ದರು. ಆದರೆ, ಮಧ್ಯಂತರ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಲೋಕಾಯಕ್ತ ವತಿಯಿಂದ ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಯನ್ನು ಇಂದು ವಿಚಾರಣೆ ಮಾಡಿದ ಹೈಕೋರ್ಟ್‌ ಜಾಮೀನು ಅರ್ಜಿಯನ್ನು ರದ್ದುಗೊಳಿಸಿತ್ತು.

Breaking: ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಬಂಧನ: ಲೋಕಾಯುಕ್ತ ಪೊಲೀಸರಿಂದ ವಶ

ಇಂದು ಚನ್ನಗಿರಿಯಲ್ಲಿ ಚುನಾವಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಂಟೆಗಟ್ಟಲೆ ಭಾಷಣ ಮಾಡಿ, ಕಣ್ಣೀರು ಸುರಿಸಿದ್ದ ಶಾಸಕ ಮಾಡಾಳ್‌ ವಿರುಪಾಕ್ಷಪ್ಪಗೆ ಇಂದಿನ ಹೈಕೋರ್ಟ್‌ ಆದೇಶ ಮದ್ಯಾಹ್ನ ವೇಳೆಗೆ ಶಾಕ್‌ ನೀಡಿತ್ತು. ಇನ್ನು ಬಂಧನ ಆಗುವುದು ಗ್ಯಾರಂಟಿ ಎಂದರಿತ ಶಾಸಕ ವಿರುಪಾಕ್ಷಪ್ಪ ಕಾರ್ಯಕ್ರಮದಿಂದ ಮನೆಗೆ ಆಗಮಿಸಿ, ಪೊಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ತಮ್ಮ ಖಾಸಗಿ ಕಾರಿನಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು.

ತುಮಕೂರು ಜಿಲ್ಲೆಯ ಕ್ಯಾತಸಂದ್ರ ಬಳಿ ಬಂಧನ: ಇನ್ನು ದಾವಣಗೆರೆಯ ಲೋಕಾಯುಕ್ತ ಪೊಲೀಸರು ಶಾಸಕ ವಿರುಪಾಕ್ಷಪ್ಪ ಅವರ ಚನ್ನಗಿರಿ ಮನೆಯಲ್ಲಿ ಪರಿಶೀಲನೆ ಮಾಡಿದ್ದಾಗ ನಾಪತ್ತೆ ಆಗಿರುವುದು ಬೆಳಕಿಗೆ ಬಂದಿತ್ತು. ತಕ್ಷಣವೇ ಬೆಂಗಳೂರು ಕಡೆಗೆ ಹೋಗುವ ಹೆದ್ದಾರಿಯ ಬಳಿ ಲೋಕಾಯುಕ್ತ ಪೊಲೀಸರು ಹಲವು ತಂಡಗಳಾಗಿ ಕಾದು ಕುಳಿತಿದ್ದರು. ಸುಮಾರು 20 ಜನರ ಪೊಲೀಸರ ತಂಡವೊಂದು ತುಮಕೂರು ಜಿಲ್ಲೆಯ ಕ್ಯಾತಸಂದ್ರ ಬಳಿ ಕಾಯುತ್ತಿರುವಾಗ ಮಾಡಾಳ್‌ ವಿರುಪಾಕ್ಷಪ್ಪ ಕಾರು ಆಗಮಿಸಿದೆ. ಈ ವೇಳೆ ರಸ್ತೆಯಲ್ಲಿಯೇ ಅವರನ್ನು ಸಂಜೆ 6.58ರ ವೇಳೆಗೆ ಬಂಧಿಸಿದ್ದಾರೆ.

ಎದೆನೋವು, ಆರೋಗ್ಯ ಸಮಸ್ಯೆ ಎಂದು ನಾಟಕ: ಲೋಕಾಯುಕ್ತ ಪೊಲೀಸರು ಈ ಹಿಂದೆ ಬಂಧಿಸಲು ಪ್ರಯತ್ನ ಮಾಡಿದ್ದಾಗ 6 ದಿನಗಳ ಕಾಲ ಕಣ್ತಪ್ಪಿಸಿಕೊಂಡು ಸಂಚಾರ ಮಾಡಿದ್ದ ಮಾಡಾಳ್‌ ವಿರುಪಾಕ್ಷಪ್ಪ 6 ದಿನಗಳ ನಂತರ ಹೈಕೋರ್ಟ್‌ನಲ್ಲಿ ತಮಗೆ ಎದೆನೋವು ಇದೆ ಎಂದು ಹೇಳಿ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಇಂದು ಸಂಜೆ ಪೊಲೀಸರು ಬಂಧಿಸಿದ ನಂತರವೂ ತಮಗೆ ಎದೆನೋವು ಬಂದಿದೆ ಎಂದು ಹೇಳಿಕೊಂಡಿದ್ದರು. ತಕ್ಷಣವೇ ಕೆ.ಸಿ. ಜನರಲ್‌ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು ತಪಾಸಣೆಗೆ ಮುಂದಾಗಿದ್ದಾರೆ. ಅಲ್ಲಿ ತಜ್ಞ ವೈದ್ಯರಿಲ್ಲದ ಕಾರಣ ಬೌರಿಂಗ್‌ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದ್ದಾರೆ. ತಪಾಸಣೆಯ ನಂತರ ವಿರುಪಾಕ್ಷಪ್ಪ ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲವೆಂದು ಹೇಳಿ ತಪಾಸಣೆ ಪತ್ರವನ್ನು ಕೊಟ್ಟಿದ್ದಾರೆ.

Breaking: ಶಾಸಕ ಮಾಡಾಳು ವಿರುಪಾಕ್ಷಪ್ಪ ಜಾಮೀನು ರದ್ದು: ಚುನಾವಣೆಗೆ ಮುನ್ನ ಬಂಧನ ಭೀತಿ

ಬೆಳಗ್ಗೆವರೆಗೆ ಜೈಲೇ ಗತಿ: ಅಕ್ರಮ ಹಣ ಸಂಪಾದನೆ ಹಾಗೂ ಲಂಚ ಸ್ವೀಕಾರದ ಪ್ರಕರಣದಲ್ಲಿ ಎ1 ಆರೋಪಿ ಆಗಿದ್ದರೂ ಒಂದು ದಿನವೂ ಪೊಲೀಸರ ವಶದಲ್ಲಿರದೇ ಮಾಡಾಳ್‌ ವಿರುಪಾಕ್ಷಪ್ಪ ತಪ್ಪಿಸಿಕೊಂಡು ಓಡಾಡುತ್ತಿದ್ದರು. ಇನ್ನು ಹೃದಯ ಸಮಸ್ಯೆ ಎಂದು ಜಾಮೀನು ಪಡೆದಿದ್ದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿದ ಬೌರಿಂಗ್‌ ಆಸ್ಪತ್ರೆ ವೈದ್ಯರು ವಿರುಪಾಕ್ಷಪ್ಪ ಅವರಿಗೆ ಹೃದಯದಲ್ಲಿ ಸ್ಟಂಟ್ ಅನ್ನು ಅಳವಡಿಸಲಾಗಿದೆ. ಈಗ ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ. ಒಂದು ವೇಳೆ ಆ ಸ್ಟಂಟ್ ಇಂದ ಎದೆ ನೋವು ಕಾಣಿಸಿಕೊಂಡರೆ, ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ, ಬೆಳಗ್ಗೆ ಕೋರ್ಟ್‌ಮುಂದೆ ಹಾಜರುಪಡಿಸುವವರೆಗೆ ವಿರುಪಾಕ್ಷಪ್ಪ ಅವರಿಗೆ ಜೈಲೇ ಗತಿ ಆಗಿದೆ.

click me!