ಕಾಡಲ್ಲೇ ಪ್ರೇಮ, ಮದುವೆಯಾದ್ರೂ ತಾಳಿ ಕಟ್ಟಲ್ಲ, ನಕ್ಸಲರ ವಿವಾಹ ರಹಸ್ಯ ಬಯಲು, ಇಲ್ಲಿದೆ ಇಂಟರೆಸ್ಟಿಂಗ್ ಲವ್ ಸ್ಟೋರಿ!!

By Kannadaprabha News  |  First Published Jan 10, 2025, 8:27 AM IST

Naxals love stories : ಕೈಯಲ್ಲಿ ಬಂದೂಕು ಹಿಡಿದು, ಮೃತ್ಯುವಿನ ನೆರಳಿನಲ್ಲಿ ಬದುಕುವ ನಕ್ಸಲೀಯರೂ ಪ್ರೀತಿ-ಪ್ರೇಮಕ್ಕೆ ಬಲಿಯಾಗಿ ಮದುವೆಯಾಗಿದ್ದಾರೆ. ಮಲೆನಾಡು ಮತ್ತು ಕರಾವಳಿಯಲ್ಲಿ ಸುಮಾರು ಎರಡು ದಶಕಗಳ ಕಾಲ ನೆಲೆಸಿದ್ದ ನಕ್ಸಲೀಯರ ಪೈಕಿ ಆರು ಮಂದಿ ವಿವಾಹವಾಗಿದ್ದು, ಕ್ರಾಂತಿ ಗೀತೆಗಳನ್ನು ಹಾಡುವ ಮೂಲಕ ವಿವಾಹವನ್ನು ಆಚರಿಸಿಕೊಂಡಿದ್ದಾರೆ.


ಆರ್.ತಾರಾನಾಥ್ ಅಟೋಕರ್

ಚಿಕ್ಕಮಗಳೂರು (ಜ.10): ಕೈಯಲ್ಲಿ ಬಂದೂಕು, ನೆತ್ತಿಯ ಮೇಲೆ ಮೃತ್ಯುವಿನ ಕರಿ ನೆರಳು, ಬೆಟ್ಟ ಗುಡ್ಡಗಳ ನಡುವೆ ಕಾಡಿನ ದಾರಿಯಲ್ಲಿ ಹಗಲು ರಾತ್ರಿ ನಿರಂತರ ಪ್ರಯಾಣ. ಯಾವ ಸಂದರ್ಭದಲ್ಲಿ ಪೊಲೀಸರು ಎದುರಾಗುತ್ತಾರೋ, ಗುಂಡಿನ ಚಕಮಕಿ ನಡೆಯುತ್ತದೆಯೋ, ಯಾರ ಪ್ರಾಣ ಪಕ್ಷಿ ಹಾರಿ ಹೋಗುತ್ತದೆಯೋ.., ಇಂತಹ ಪರಿಸ್ಥಿತಿಯನ್ನು ಎದುರಿಸುವ ನಕ್ಸಲೀಯರ ನಡುವೆ ಕೆಲವರು ಪ್ರೀತಿಯ ಬಲೆಗೆ ಬಿದ್ದು ಮದುವೆಯಾಗಿದ್ದಾರೆ.

Tap to resize

Latest Videos

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡನ್ನು ತನ್ನ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಶಿವಮೊಗ್ಗ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಕ್ರಿಯರಾಗಿದ್ದ ನಕ್ಸಲೀಯರಲ್ಲಿ ಹಲವು ಮಂದಿ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ. ಕೆಲವರು ಅನಾರೋಗ್ಯದಿಂದ ಸಮಾಜದ ಮುಖ್ಯ ವಾಹಿನಿಗೆ ಬಂದಿದ್ದಾರೆ.

ನಕ್ಸಲರ ಶರಣಾಗತಿ ಬಗ್ಗೆ ಸರ್ಕಾರ ಬೀಗುತ್ತಿದ್ದರೂ ಇನ್ನೂ ಓರ್ವ ಕುಖ್ಯಾತ ನಕ್ಸಲ್ ಸುಳಿವಿಲ್ಲ!

ಮಲೆನಾಡು ಹಾಗೂ ಕರಾವಳಿಯಲ್ಲಿ ಸುಮಾರು ಎರಡು ದಶಕಗಳ ಕಾಲ ನೆಲೆವೊರಿದ್ದ ನಕ್ಸಲೀಯರ ಪೈಕಿ ಆರು ಮಂದಿ ವಿವಾಹವಾಗಿದ್ದಾರೆ. ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಎ.ಎಸ್. ಸುರೇಶ್ ಬುಧವಾರ ಶರಣಾಗಿರುವ ಕಳಸ ತಾಲೂಕಿನ ಬಾಳೆಹೊಳೆ ವನಜಾಕ್ಷಿ ಅವರನ್ನು ವಿವಾಹವಾಗಿದ್ದಾರೆ. ಶೃಂಗೇರಿ ತಾಲೂಕಿನ ಬುಕಡಿಬೈಲಿನ ಬಿ.ಜಿ. ಕೃಷ್ಣ ಮೂರ್ತಿ, ಕಳಸದ ಸಾವಿತ್ರಿ ಅವರನ್ನು ವಿವಾಹವಾಗಿದ್ದರೆ, ರಾಯಚೂರಿನ ಅರೋಲಿ ಗ್ರಾಮದ ಜಯಣ್ಣ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕುತ್ಲೂರು ಗ್ರಾಮದ ಸುಂದರಿಯನ್ನು ವಿವಾಹವಾಗಿದ್ದಾರೆ.

ಮದುವೆ ಕಾರ್ಯ:

ನಕ್ಸಲೀಯರ ಗುಂಪಿನಲ್ಲಿರುವ ಯುವತಿ ಹಾಗೂ ಯುವಕ ಪರಸ್ಪರ ಇಚ್ಚಿಸಿದರೆ ಅವರನ್ನು ಮದುವೆ ಮಾಡುವ ಸಂಪ್ರದಾಯ ನಕ್ಸಲೀಯರು ಮುಂದುವರಿಸಿಕೊಂಡು ಬಂದಿದ್ದಾರೆ.

ಮದುವೆ ಕಾರ್ಯಕ್ಕೆ ಆಹ್ವಾನ ಪತ್ರಿಕೆ ಇಲ್ಲ, ತಂದೆ, ತಾಯಿ, ಒಡಹುಟ್ಟಿದವರಿಗೆ ಎಂಟ್ರಿ ಇಲ್ಲ. ಆದರೆ, ತಮ್ಮೊಂದಿಗೆ ಬಂದೂಕು ಹಿಡಿದು ನಕ್ಸಲ್ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಎಲ್ಲರಿಗೂ ಆಹ್ವಾನ ಇರುತ್ತಿತ್ತು. ಮದುವೆ ದಿನಾಂಕ ನಿಗದಿ ಪಡಿಸಿ ಎಲ್ಲ ದಳದವರಿಗೂ ಮಾಹಿತಿ ರವಾನೆ ಮಾಡಲಾಗುತ್ತಿತ್ತು. ಬರಲು ಆಗದೆ ಇದ್ದವರು ಹೊರತುಪಡಿಸಿ ಇನ್ನುಳಿ ದಂತೆ ಹೆಚ್ಚಿನ ಮಂದಿ ಈ ಕಾರ್ಯದಲ್ಲಿ ತೊಡಗುತ್ತಿದ್ದರು ಎನ್ನಲಾಗುತ್ತಿದೆ.ಗಂಡು, ಹೆಣ್ಣಿಗೆ ತಾಳಿ ಕಟ್ಟುತ್ತಿರಲಿಲ್ಲ, ಬದಲಿಗೆ ವಧು, ವರನನ್ನು ಒಂದೆಡೆ ಕುಳಿತುಕೊಂಡ ಮೇಲೆ ಕ್ರಾಂತಿ ಗೀತೆಗಳನ್ನು ಹಾಡಿ ಮದುವೆ ಕಾರ್ಯ ಮುಗಿಸುತ್ತಿದ್ದರು.

ಪತಿ- ಪತ್ನಿ ಒಂದೇ ದಿನ ಶರಣಾಗತಿ:

ಬೆಂಗಳೂರಿನಲ್ಲಿ ಬುಧವಾರ 6 ಮಂದಿ ನಕ್ಸಲಿಯರ ಪೈಕಿ ಪತಿ- ಪತ್ನಿ ಇಬ್ಬರು (ಜಯಣ್ಣ- ಸುಂದರಿ) ಒಂದೇ ದಿನ ಶರಣಾಗಿದ್ದಾರೆ.ಮದುವೆಯಾಗಿರುವ 6 ಮಂದಿ ನಕ್ಸಲೀಯರ ಪೈಕಿ ಕೆಲವರು ಒಂದೆರಡು ದಶಕಗಳನ್ನು ಕಾಡಿನಲ್ಲಿ ಕಳೆದಿದ್ದಾರೆ. ಇನ್ನು ಕೆಲವು ವರ್ಷಗಳು ನ್ಯಾಯಾಲಯದ ವಿಚಾರಣೆಯಲ್ಲಿ ಕಳೆಯಲಿದ್ದಾರೆ.

ಮದುವೆಯಾಗಿರುವ ನಕ್ಸಲ್ ದಂಪತಿಗಳು

  • ಬಿ.ಜಿ. ಕೃಷ್ಣಮೂರ್ತಿ - ಸಾವಿತ್ರಿ
  • ಎ.ಎಸ್. ಸುರೇಶ್ - ವನಜಾಕ್ಷಿ
  • ಜಯಣ್ಣ ಆರೋಲಿ - ಸುಂದರಿ
click me!