ಶರಣಾಗತಿಗೂ ಮುನ್ನ ಶಸ್ತ್ರಾಸ್ತ್ರಗಳನ್ನು ಕಾಡಿನಲ್ಲೇ ಬಚ್ಚಿಟ್ಟಿರುವ ನಕ್ಸಲರು!

Published : Jan 10, 2025, 07:20 AM IST
ಶರಣಾಗತಿಗೂ ಮುನ್ನ ಶಸ್ತ್ರಾಸ್ತ್ರಗಳನ್ನು ಕಾಡಿನಲ್ಲೇ ಬಚ್ಚಿಟ್ಟಿರುವ ನಕ್ಸಲರು!

ಸಾರಾಂಶ

ಶಸ್ತ್ರಾಸ್ತ್ರಗಳ ಕುರಿತು ಶರಣಾಗತ ನಕ್ಸಲರು ಇದೀಗ ಪೊಲೀಸರಿಗೆ ಮಾಹಿತಿ ನೀಡಿದ್ದು, ಇನ್ನೆರೆಡು ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ದಟ್ಟ ಕಾನನದಲ್ಲಿ ಹುದುಗಿಸಿಟ್ಟಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯುವ ಕಾರ್ಯ ನಡೆಯಲಿದೆ.

ಗಿರೀಶ್ ಮಾದೇನಹಳ್ಳಿ

ಬೆಂಗಳೂರು(ಜ.10):  ನೆತ್ತರ ಹೋರಾಟದ ಹಾದಿ ತೊರೆದು ಆರು ಮಂದಿ ನಕ್ಸಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಶರಣಾದರೂ ತಮ್ಮ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಿಲ್ಲ. ಭವಿಷ್ಯದಲ್ಲಿ ಕಾನೂನು ಸಂಕಷ್ಟಕ್ಕೆ ಸಿಲುಕಬಹುದೆಂಬ ಆತಂಕದಿಂದ ಶಸ್ತ್ರಾಸ್ತ್ರಗಳನ್ನು ಅವರು ಕಾಡಿನಲ್ಲೇ ಅಡಗಿಸಿಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ.

ಶಸ್ತ್ರಾಸ್ತ್ರಗಳ ಕುರಿತು ಶರಣಾಗತ ನಕ್ಸಲರು ಇದೀಗ ಪೊಲೀಸರಿಗೆ ಮಾಹಿತಿ ನೀಡಿದ್ದು, ಇನ್ನೆರೆಡು ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ದಟ್ಟ ಕಾನನದಲ್ಲಿ ಹುದುಗಿಸಿಟ್ಟಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯುವ ಕಾರ್ಯ ನಡೆಯಲಿದೆ.

ರಾಜ್ಯ ಸರ್ಕಾರದ ಮುಂದೆ 18 ಬೇಡಿಕೆಗಳನ್ನಿಟ್ಟ ನಕ್ಸಲರು

ಈ ನಕ್ಸಲರ ಬಳಿ ಪಿಸ್ತೂಲ್ ಮಾತ್ರವಲ್ಲದೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ. ಆದರೆ ಅವು ಯಾವ ಮಾದರಿಯವು ಎಂಬುದು ಮಹಜರ್‌ ನಂತರವೇ ಖಚಿತವಾಗಲಿದೆ ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.
ಎರಡು ತಿಂಗಳ ಹಿಂದೆ ಉಡುಪಿ ಜಿಲ್ಲೆ ಹೆಬ್ರಿಯ ಕಬ್ಬಿನಾಲೆ ಪೀತಬೈಲು ಸಮೀಪ ನಕ್ಸಲ್ ನಾಯಕ ವಿಕ್ರಂಗೌಡನನ್ನು ನಕ್ಸಲ್ ನಿಗ್ರಹ ಪಡೆ ಎನ್‌ಕೌಂಟರ್ ಮಾಡಿತ್ತು. ಆಗ ಆತನ ಬಳಿ ಮಷಿನ್ ಗನ್‌ ಪತ್ತೆಯಾಗಿತ್ತು. ಹೀಗಾಗಿ ಶರಣಾಗತಿಗೆ ಒಪ್ಪಿದ್ದ ಮೃತ ವಿಕ್ರಂ ಗೌಡನ ಸಂಗಡಿಗರಾದ ಚಿಕ್ಕಮಗಳೂರು ಜಿಲ್ಲೆಯ ಲತಾ ಮುಂಡಗಾರು, ವನಜಾಕ್ಷಿ ಬಾಳೆಹೊಳೆ, ದಕ್ಷಿಣ ಕನ್ನಡ ಜಿಲ್ಲೆಯ ಸುಂದರಿ ಕುತ್ಲೂರು, ರಾಯಚೂರು ಜಿಲ್ಲೆ ಮಾರೆಪ್ಪ ಅರೋಲಿ, ಕೇರಳ ರಾಜ್ಯದ ಜಿಶಾ ಹಾಗೂ ತಮಿಳುನಾಡು ರಾಜ್ಯದ ವೆಲ್ಲೂರಿನ ಕೆ.ವಸಂತ್‌ ಬಳಿ ಸಹ ಆಧುನಿಕ ಶಸ್ತ್ರಾಸ್ತ್ರಗಳಿರಬಹುದು ಎಂಬ ಮಾಹಿತಿ ಇದೆ.

ಶಸ್ತ್ರಾಸ್ತ್ರ ಇಲ್ಲದೆ ಶರಣಾಗತಿಗೇನು ಕಾರಣ?

ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿಯಲ್ಲಿ ಶಸ್ತ್ರಾಸ್ತ್ರ ಸಮೇತ ಶರಣಾಗತಿ ಭದ್ರತಾ ದೃಷ್ಟಿಯಿಂದ ಸಾಧ್ಯವಿಲ್ಲ. ರಾಜ್ಯದ ಮುಖ್ಯಮಂತ್ರಿಗಳ ಕಚೇರಿಗೆ ಸಶಸ್ತ್ರಧಾರಿಗಳಾಗಿ ಖಾಸಗಿ ವ್ಯಕ್ತಿಗಳು ಬಂದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಹಿರಿಯ ಅಧಿಕಾರಿಗಳ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಶರಣಾದ 6 ನಕ್ಸಲರ ಪೈಕಿ ಒಬ್ಬ ರಾಯಚೂರಿನ: ಮಗನ ಆಗಮನ ನಿರೀಕ್ಷೆಯಲ್ಲಿ 80 ವರ್ಷದ ತಾಯಿ!

ಶರಣಾದ ನಕ್ಸಲರ ಮೇಲೆ ಕೊಲೆ ಹಾಗೂ ಯುಎಪಿಎ ಅಡಿ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ತಾವು ಬಳಸಿದ್ದ ಶಸ್ತ್ರಗಳನ್ನು ಒಪ್ಪಿಸಿದರೆ ಮುಂದೆ ತನಿಖೆ ಎದುರಿಸಬೇಕಾಗಬಹುದು ಎಂಬ ಆತಂಕ.
ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದರೆ ಅಕ್ರಮವಾಗಿ ಶಸ್ತ್ರಾಸ್ತ್ರಗಳ ಬಳಕೆ ಹಾಗೂ ಸಂಗ್ರಹ ಕಾಯ್ದೆ (ಆರ್ಮ್ಸ್ ಆಕ್ಟ್‌) ಅಡಿ ದಾಖಲಾಗಿರುವ ಪ್ರಕರಣಗಳಿಗೆ ಪ್ರಮುಖ ಸಾಕ್ಷ್ಯಗಳು ಸಿಗಲಿವೆ. ಭವಿಷ್ಯದಲ್ಲಿ ತಮಗೆ ಕಾನೂನು ಕುಣಿಕೆ ಬಿಗಿಯಾಗಲು ಶಸ್ತ್ರಾಸ್ತ್ರಗಳ ಹಸ್ತಾಂತರ ಭಾವಚಿತ್ರಗಳು, ವಿಡಿಯೋಗಳೇ ಮುಳ್ಳಾಗಬಹುದು. ಬೇರೆಲ್ಲ ಪ್ರಕರಣಗಳು ಮಾಫಿಯಾದರೂ ಆರ್ಮ್ಸ್‌ ಆಕ್ಟ್‌ನಲ್ಲಿ 10 ವರ್ಷ ಶಿಕ್ಷೆಗೆ ಗುರಿಯಾಗುವ ಭೀತಿ.

ಶಾಂತಿ ಪ್ರತೀಕವಾಗಿ ಕೆಂಪು ಬಟ್ಟೆ ಹಸ್ತಾಂತರಿಸಿ ಶರಣಾಗತರಾಗುವ ಆಲೋಚನೆಯನ್ನು ಸಂಧಾನಕಾರರು ನಕ್ಸಲರ ಮುಂದಿಟ್ಟರು. ಈ ಬಗ್ಗೆ ಸರ್ಕಾರದ ಮಟ್ಟದಲ್ಲೇ ಸಮಾಲೋಚಿಸಿ ಹಸಿರು ನಿಶಾನೆ ತೋರಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ