ದಲಿತ ವರ್ಗದ ಕುಟುಂಬದವರನ್ನು ಮನೆಗೆ ಕರೆದು ಊಟೋಪಚಾರ ಮಾಡಬೇಕು. ಪ್ರತಿ ಕ್ಷೇತ್ರದಲ್ಲಿ ಶಾಸಕರು, ಸಂಸದರು ಇದನ್ನು ನಡೆಸಬೇಕು. ಇದರ ಜತೆಗೆ ಸಂವಿಧಾನದ ಮಹತ್ವ ತಿಳಿಸುವುದು ಮತ್ತು ಯಾರು? ಏನೇನು ಮಾಡಿದರು ಎಂಬುದರ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಅಲ್ಲದೇ, ಪ್ರತಿ ವಿಧಾನಸಭಾ ಕ್ಷೇತ್ರ, ಮಂಡಲ ವ್ಯಾಪ್ತಿಯಲ್ಲಿ ಶಾಸಕರಿಂದ ಬಹಿರಂಗ ಸಮ್ಮೇಳನವನ್ನು ಸಹ ಆಯೋಜಿಸಲಾಗುತ್ತದೆ.
ಬೆಂಗಳೂರು(ಜ.10): ದಲಿತರ ವಿಚಾರವಾಗಿ ಪ್ರತಿಪಕ್ಷ ಬಿಜೆಪಿ ವಿರುದ್ಧ ಆಡಳಿತಾರೂಢ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳನ್ನು ಅಲ್ಲಗೆಳೆದು ದಲಿತರನ್ನು ಸೆಳೆಯುವ ಉದ್ದೇಶದಿಂದ ಬಿಜೆಪಿಯು ಇದೇ ತಿಂಗಳ 25ರೊಳಗೆ 'ಭೀಮ ಸಂಗಮ' ಕಾರ್ಯಕ್ರಮ ಆಯೋಜನೆ ಮಾಡಲು ತೀರ್ಮಾನಿಸಿದೆ. ಇದರ ಅಂಗವಾಗಿ ಪಕ್ಷದ ಸಂಸದರು ಹಾಗೂ ಶಾಸಕರು ದಲಿತರನ್ನು ತಮ್ಮ ಮನೆಗಳಿಗೆ ಕರೆದು ಊಟೋಪಚಾರದ ಜತೆಗೆ ಸನ್ಮಾನ ಮಾಡಲಿದ್ದಾರೆ.
ಸಂವಿಧಾನಕ್ಕೆ ಯಾರು ಅನ್ಯಾಯ ಹಾಗೂ ಅಪಮಾನ ಮಾಡಿದರು, ಯಾರ ಅವಧಿಯಲ್ಲಿ ಹೆಚ್ಚು ತಿದ್ದುಪಡಿ ಯಾಯಿತು ಎಂಬ ಬಗ್ಗೆ ಈ ವೇಳೆ ಮಾಹಿತಿ ನೀಡಲಿದ್ದಾರೆ. ಗುರುವಾರ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ 'ನಮ್ಮ ಸಂವಿಧಾನ-ನಮ್ಮ ಹೆಮ್ಮೆ' ಅಭಿಯಾನ ಕುರಿತ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರೇಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮೊದಲಾದವರು ಉಪಸ್ಥಿತರಿದ್ದರು.
ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಇದೇ ತಿಂಗಳು 25ರೊಳಗೆ ಭೀಮ ಸಂಗಮ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಶಾಸಕರು, ಸಂಸದರು ತಮ್ಮ ಮನೆಗಳಲ್ಲಿ ಈ ಕಾರ್ಯಕ್ರಮ ನಡೆಸಲಿದ್ದಾರೆ. ಎಸ್‌ಸಿ/ಎಸ್ಟಿ ವರ್ಗದವರನ್ನು ತಮ್ಮ ಮನೆಗೆ ಕರೆದು ಸನ್ಮಾನ ಮಾಡಲಾಗುವುದು. ದಲಿತ ಸಮುದಾಯದ ಕುಟುಂಬದವರನ್ನು ಮನೆಗೆ ಕರೆಸಿ ಸಂವಿಧಾನ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಅಲ್ಲದೇ, ಇದೇ 25ರಂದು ಪ್ರತಿ ಬೂತ್‌ನಲ್ಲಿ ಸಂವಿಧಾನ ಪೀಠಿಕೆ ಓದಲಾಗುತ್ತದೆ ಎಂದು ಹೇಳಿದರು.
ದಲಿತ ವರ್ಗದ ಕುಟುಂಬದವರನ್ನು ಮನೆಗೆ ಕರೆದು ಊಟೋಪಚಾರ ಮಾಡಬೇಕು. ಪ್ರತಿ ಕ್ಷೇತ್ರದಲ್ಲಿ ಶಾಸಕರು, ಸಂಸದರು ಇದನ್ನು ನಡೆಸಬೇಕು. ಇದರ ಜತೆಗೆ ಸಂವಿಧಾನದ ಮಹತ್ವ ತಿಳಿಸುವುದು ಮತ್ತು ಯಾರು? ಏನೇನು ಮಾಡಿದರು ಎಂಬುದರ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಅಲ್ಲದೇ, ಪ್ರತಿ ವಿಧಾನಸಭಾ ಕ್ಷೇತ್ರ, ಮಂಡಲ ವ್ಯಾಪ್ತಿಯಲ್ಲಿ ಶಾಸಕರಿಂದ ಬಹಿರಂಗ ಸಮ್ಮೇಳನವನ್ನು ಸಹ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.
ಸಂವಿಧಾನ ಮಂಡನೆಯ ದಿನವಾದ ನ.26ರಿಂದ ಸಂವಿಧಾನ ಜಾರಿಯಾದ ಜ.26ರ ವರೆಗೆ ಜಾಗೃತಿ ಮೂಡಿಸಲಾಗಿದೆ. ನಮ್ಮ ಸಂವಿಧಾನ ನಮ್ಮ ಹೆಮ್ಮೆ ಅಭಿಯಾನದಡಿ ಇದನ್ನು ಮಾಡಲಾಗಿದೆ. ಎರಡು ತಿಂಗಳ ಕಾಲ ಸಂವಿಧಾನ ಸನ್ಮಾನ ಕಾರ್ಯಕ್ರಮ ನಡೆಸಿದ್ದೇವೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ಸಿಗರು 1920ರಿಂದ ಆರಂಭಿಸಿ ಪರಿನಿರ್ವಾಣ ಆಗುವವರೆಗೆ ಹೆಜ್ಜೆಹೆಜ್ಜೆಗೂ ಹಿಂದಕ್ಕೆ ತಳ್ಳಿದರು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 2015ರಿಂದ ಸಂವಿಧಾನ ದಿನ ಆಚರಣೆ ನಡೆದಿದೆ. ಸಂವಿಧಾನಕ್ಕೆ ಗೌರವ ತರುವ ಹಾಗೂ ಜಾಗೃತಿ ಮೂಡಿಸುವ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದರು.
ತಿದ್ದುಪಡಿ:
ಸಂವಿಧಾನಕ್ಕೆ ಈವರೆಗೆ 106 ಸಂವಿಧಾನಕ್ಕೆ ಕಾಂಗ್ರೆಸ್‌ನಿಂದ ಗರಿಷ್ಠ ತಿದ್ದುಪಡಿಗಳನ್ನು ಮಾಡಲಾಗಿದೆ. ಬಿಜೆಪಿ 22 ತಿದ್ದುಪಡಿ ಮಾಡಿದ್ದು, ಮಾಜಿ ಪ್ರಧಾನಿ ಎ.ಬಿ. ವಾಜಪೇಯಿಯವರ ಕಾಲದಲ್ಲಿ 14, ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ 8 ತಿದ್ದುಪಡಿ ಮಾಡಲಾಗಿದೆ. ಇವೆಲ್ಲವೂ ಸಂವಿಧಾನದ ಪರ, ಮೀಸಲಾತಿಯ ಪರ ಇದ್ದು, ಎಸ್ಸಿ, ಎಸ್ಟಿ ಮತ್ತು ಇತರೆ ವರ್ಗಗಳಿಗೆ ಶಕ್ತಿ ತುಂಬುವ ತಿದ್ದುಪಡಿಗಳಾಗಿವೆ. ಒಂದೇ ಒಂದು ತಿದ್ದುಪಡಿ ಸಂವಿಧಾನ ವಿರೋಧಿ, ಎಸ್ಸಿ ಎಸ್ಟಿ ವಿರೋಧಿ ಇದ್ದಲ್ಲಿ ಕಾಂಗ್ರೆಸ್ಸಿನವರು ತೋರಿಸಲಿ ಎಂದು ಸವಾಲು ಹಾಕಿದರು.
ದಲಿತರ ಸ್ಮಶಾನ, ನಿವೇಶನ ಸಮಸ್ಯೆ ಪರಿಹಾರಕ್ಕೆ ಆದ್ಯತೆ: ಶಾಸಕ ಸಿ.ಪಿ.ಯೋಗೇಶ್ವರ್
ಕಾಂಗ್ರೆಸ್ ಪಕ್ಷವು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾಡಿದ ತಿದ್ದುಪಡಿಗಳು ಕರಾಳ ತಿದ್ದುಪಡಿಗಳಾಗಿವೆ. ವ್ಯಕ್ತಿಯ ಸ್ವಾತಂತ್ರ್ಯ ಹರಣ, ಜೀವಿಸುವ ಸ್ವಾತಂತ್ರ್ಯ ಹರಣ, ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ, ನ್ಯಾಯಾಲಯ ನಿಯಂತ್ರಣ ಮಾಡುವ ತಿದ್ದುಪಡಿಗಳನ್ನು ಕಾಂಗ್ರೆಸ್ಸಿಗರು ಮಾಡಿದ್ದರು ಎಂದು ತಿಳಿಸಿದರು.
ಸಂವಿಧಾನ ಜಾಗೃತಿ
* ಸಂವಿಧಾನ ಮಂಡನೆಯಾದ ನ. 26ರಿಂದ ಜಾರಿಗೆ ಬಂದ ಜ.26ರ ವರೆಗೆ ಬಿಜೆಪಿ ಕಾರ್ಯಕ್ರಮ
* 'ನಮ್ಮ ಸಂವಿಧಾನ ನಮ್ಮ ಹೆಮ್ಮೆ' ಎಂಬ ಅಭಿಯಾನ. ಇದರಡಿ ಜ.25ರವರೆಗೆ 'ಭೀಮ ಸಂಗಮ'
* ಯಾರ ಅವಧಿಯಲ್ಲಿ ಸಂವಿಧಾನಕ್ಕೆ ಅಪಮಾನವಾಗಿದೆ ಎಂದು ಈ ಕಾರ್ಯಕ್ರಮದಡಿ ಜಾಗೃತಿ
* ಬೆಂಗಳೂರಿನಲ್ಲಿ ಬಿ.ಎಲ್. ಸಂತೋಷ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ