ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್: 6 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ!

Published : Jul 08, 2026, 11:25 AM IST
Lokayukta Raids in across Karnataka

ಸಾರಾಂಶ

ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯದ ಧಾರವಾಡ, ರಾಯಚೂರು, ಚಿತ್ರದುರ್ಗ, ಕಲಬುರಗಿ ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರಮುಖ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಮೆಗಾ ಆಪರೇಷನ್‌ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗುವ ಶಂಕೆ ವ್ಯಕ್ತವಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಬೇಟೆ ಮುಂದುವರಿದಿದೆ. ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ (DA Case) ಆರೋಪದ ಹಿನ್ನೆಲೆಯಲ್ಲಿ ಧಾರವಾಡ, ರಾಯಚೂರು, ಚಿತ್ರದುರ್ಗ, ಕಲಬುರಗಿ, ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರಮುಖ ಅಧಿಕಾರಿಗಳ ಮನೆ, ಕಚೇರಿ ಹಾಗೂ ಅವರ ಸಂಬಂಧಿಕರ ನಿವಾಸಗಳ ಮೇಲೆ ಇಂದು ಮುಂಜಾನೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ನೂರಾರು ಅಧಿಕಾರಿಗಳನ್ನೊಳಗೊಂಡ ಪ್ರತ್ಯೇಕ ತಂಡಗಳು ಈ ಮೆಗಾ ಆಪರೇಷನ್ ಕೈಗೊಂಡಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಧಾರವಾಡ ಮತ್ತು ಶಿವಮೊಗ್ಗ: ಎಸಿಎಫ್ ಕಿರಣ್ ಅಂಗಡಿಗೆ ಶಾಕ್!

ಶಿವಮೊಗ್ಗದ ಅರಣ್ಯ ಸಂಶೋಧನಾ ಕೇಂದ್ರದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಆಗಿ ಸೇವೆ ಸಲ್ಲಿಸುತ್ತಿರುವ ಕಿರಣ್ ಅಂಗಡಿ ಅವರಿಗೆ ಸೇರಿದ ಧಾರವಾಡ ಮತ್ತು ಶಿವಮೊಗ್ಗದ ಒಟ್ಟು ೫ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಧಾರವಾಡದ ಲೋಕಾ ಎಸ್ಪಿ ಸಿದ್ದಲಿಂಗಪ್ಪ ಹಾಗೂ ಶಿವಮೊಗ್ಗದ ಲೋಕಾಯುಕ್ತ ಇನ್‌ಸ್ಪೆಕ್ಟರ್ ವೀರಬಸಪ್ಪ ಕುಶಲಾಪೂರ ಮತ್ತು ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿರುವ ಐಷಾರಾಮಿ ಮನೆ, ಅಳ್ನಾವರ ರಸ್ತೆಯಲ್ಲಿರುವ ಫಾರ್ಮ್ ಹೌಸ್, ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಫ್ಯಾಕ್ಟರಿ (ಪತ್ನಿಯ ಹೆಸರಿನಲ್ಲಿದೆ ಎನ್ನಲಾದ ಉದ್ಯಮ) ಹಾಗೂ ಅವರ ಸೋದರ ಮಾವನ ಮನೆಗಳ ಮೇಲೆ ಶೋಧ ನಡೆಸಲಾಗುತ್ತಿದೆ.

ಶಿವಮೊಗ್ಗದ ಕಚೇರಿ ಮೇಲೂ ದಾಳಿ

ಇತ್ತ ಶಿವಮೊಗ್ಗದ ಆಲ್ಕೋಳ ರಸ್ತೆಯಲ್ಲಿರುವ ಕಿರಣ್ ಅಂಗಡಿ ಅವರ ಅರಣ್ಯ ಸಂಶೋಧನಾ ಕಚೇರಿಯ ಮೇಲೂ ಲೋಕಾಯುಕ್ತ ತಂಡ ತಪಾಸಣೆ ನಡೆಸುತ್ತಿದೆ. ದಾಳಿಯ ವೇಳೆ ಅಧಿಕಾರಿ ಕಿರಣ್ ಅಂಗಡಿ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಐದು ಜನರ ಅಧಿಕಾರಿಗಳ ತಂಡ ಸದ್ಯ ದಾಖಲೆಗಳನ್ನು ಜಾಲಾಡುತ್ತಿದೆ.

ರಾಯಚೂರು: ಕೆಬಿಜೆಎನ್‌ಎಲ್ ಇಇ ಬಸನಗೌಡಗೆ ಸೇರಿದ 7 ಕಡೆ ದಾಳಿ

ರಾಯಚೂರಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (KBJNL) ಕಾರ್ಯನಿರ್ವಾಹಕ ಇಂಜಿನಿಯರ್ (EE) ಬಸನಗೌಡ ಅವರ ವಿರುದ್ಧ ಲೋಕಾಯುಕ್ತರು ತನಿಖೆ ತೀವ್ರಗೊಳಿಸಿದ್ದಾರೆ. ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದ 7 ಪ್ರತ್ಯೇಕ ತಂಡಗಳು ಏಕಕಾಲದಲ್ಲಿ 7 ಕಡೆ ಧಾಳಿ ನಡೆಸಿವೆ. ಬಸನಗೌಡ ಅವರ ರಾಯಚೂರು ನಗರದ ಎಚ್.ಆರ್.ಬಿ ಲೇಔಟ್‌ನಲ್ಲಿರುವ ಮನೆ, ಯಕ್ಲಾಸಪುರದ ಸೆಲೆಬ್ರಿಟಿ ಗಾರ್ಡನ್‌ನಲ್ಲಿರುವ ಅಣ್ಣನ ಮನೆ ಹಾಗೂ ಯಕ್ಲಾಪುರದ ತೋಟದ ಮನೆಯಲ್ಲಿ ಶೋಧ ಕಾರ್ಯ ಪ್ರಗತಿಯಲ್ಲಿದೆ.

ಬಾರ್ ಮತ್ತು ಪೆಟ್ರೋಲ್ ಬಂಕ್ ಪತ್ತೆ

ಬಸನಗೌಡ ಅವರ ಪತ್ನಿ ಅನಿತಾ ಶೆಟ್ಟಿ ಹೆಸರಿನಲ್ಲಿರುವ ನಾಯರಾ ಪೆಟ್ರೋಲ್ ಬಂಕ್, ಅದರ ಪಕ್ಕದಲ್ಲೇ ಇರುವ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಗೋದಾಮಿನ (Warehouse) ಮೇಲೂ ಲೋಕಾ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. ದೇವದುರ್ಗ ತಾಲೂಕಿನ ಚಿಕ್ಕ ಹೊನ್ನಕುಣಿ ವ್ಯಾಪ್ತಿಯ ಕೆಬಿಜೆಎನ್‌ಎಲ್ ಕಚೇರಿಯಲ್ಲೂ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಚಿತ್ರದುರ್ಗ ಆರ್‌ಎಫ್‌ಒ ಮತ್ತು ಪ್ರೊಫೆಸರ್ ಮನೆಗೆ ಅಧಿಕಾರಿಗಳ ಎಂಟ್ರಿ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಇಬ್ಬರು ಪ್ರಮುಖ ಅಧಿಕಾರಿಗಳ ಆಸ್ತಿಪಾಸ್ತಿಗಳ ಮೇಲೆ ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ನೇತೃತ್ವದ ತಂಡ ದಾಳಿ ನಡೆಸಿದೆ. ಚಿತ್ರದುರ್ಗದ ಧವಳಗಿರಿ ಬಡಾವಣೆಯಲ್ಲಿರುವ ವಲಯ ಅರಣ್ಯಾಧಿಕಾರಿ (RFO) ದುಗ್ಗಪ್ಪ ಅವರ ನಿವಾಸದ ಮೇಲೆ ದಾಳಿ ನಡೆದಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ಆರೋಪದ ಮೇಲೆ ತನಿಖೆ ನಡೆಸಲಾಗುತ್ತಿದೆ. ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರೊಫೆಸರ್ ಶಂಕರ್ ಅವರ ಮನೆ ಹಾಗೂ ತೋಟದ ಮೇಲೂ ಲೋಕಾಯುಕ್ತರು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಕಲಬುರಗಿ ಜೇಸ್ಕಾಂ ಎಇಇ ಅಮೃತರಾವ್ ಯಲಾಲ್ ಮನೆ, ಫ್ಲ್ಯಾಟ್ ಮೇಲೆ ದಾಳಿ

ಕಲಬುರಗಿಯಲ್ಲಿ ಜೆಸ್ಕಾಂ (GESCOM) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಅಮೃತರಾವ್ ಯಲಾಲ್ ಅವರಿಗೆ ಸೇರಿದ ಕಚೇರಿ ಹಾಗೂ ಮನೆ ಸೇರಿದಂತೆ ಒಟ್ಟು ಏಳು ಕಡೆಗಳಲ್ಲಿ ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದ ತಂಡ ದಾಳಿ ಮಾಡಿದೆ. ಕಲಬುರಗಿ ನಗರದ ಜಾಗೃತಿ ಕಾಲೋನಿಯಲ್ಲಿರುವ ನಿವಾಸ, ಬಸವ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್, ಮತ್ತು ಕೊತ್ತಂಬರಿ ಲೇಔಟ್‌ನಲ್ಲಿರುವ ಜೇಸ್ಕಾಂ ಕಚೇರಿಗಳ ಮೇಲೆ ದಾಳಿಯಾಗಿದೆ. ಇದಲ್ಲದೆ ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದ ಮನೆಯ ಮೇಲೂ ಅಧಿಕಾರಿಗಳು ಮುಗಿಬಿದ್ದಿದ್ದಾರೆ. ಎಇಇ ಅಮೃತರಾವ್ ಅವರು ಜಾಗೃತಿ ಕಾಲೋನಿಯಲ್ಲಿ 'ಪ್ಲಾಟಿನಂ ಸ್ಟುಡಿಯೋ' ಎಂಬ ಹೈಟೆಕ್ ಸ್ಟುಡಿಯೋ ಹೊಂದಿದ್ದು, ನಂದೂರ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಫ್ಲ್ಯಾಟ್ ಹಾಗೂ ವಿವಿಧೆಡೆ 20 ಕ್ಕೂ ಹೆಚ್ಚು ಎಕರೆ ಕೃಷಿ ಜಮೀನು ಹೊಂದಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ತುಮಕೂರು ಸಣ್ಣ ನೀರಾವರಿ ಇಲಾಖೆ ಎಇಇ ಮನೆ ಮೇಲೆ ಲೋಕಾ ದಾಳಿ

ಸಣ್ಣ ನೀರಾವರಿ ಇಲಾಖೆಯಲ್ಲಿ ಎಇಇ ಆಗಿರುವ ಮಧುಸೂದನ್ ಮನೆ ಮೇಲೆ ಲೋಕಾ ದಾಳಿ ನಡೆದಿದೆ. ತುಮಕೂರು ನಗರದ ಸಪ್ತಗಿರಿ ಬಡಾವಣೆಯಲ್ಲಿರುವ ಮಧುಸೂದನ್ ಮನೆ. ಸಣ್ಣ ನೀರಾವರಿ ಇಲಾಖೆ ತಿಪಟೂರು ಉಪವಿಭಾಗದಲ್ಲಿ ಎಇಇ ಆಗಿ ಕೆಲಸ ಮಾಡುತ್ತಿರುವ ಮಧುಸೂದನ್ ಅಕ್ರಮ ಹಣ ಗಳಿಕೆ ಆರೋಪದಡಿ ಲೋಕಾಯುಕ್ತಕ್ಕೆ ದೂರು ಬಂದ ಹಿನ್ನೆಲೆ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಲೋಕಾ ದಾಳಿ. ಮಧುಸೂದನ್ ಮನೆಯನ್ನ ಪರಿಶೀಲನೆ ನಡೆಸುತ್ತಿರುವ ಲೋಕಾ ಟೀಮ್. ಸದ್ಯ ಎಲ್ಲಾ ಕಡೆಗಳಲ್ಲೂ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಮುಂದುವರಿದಿದ್ದು, ಚಿನ್ನಾಭರಣ, ನಗದು ಹಾಗೂ ಬ್ಯಾಂಕ್ ಖಾತೆಗಳ ವಿವರಗಳು ಲಭ್ಯವಾಗಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜಸ್ಥಾನ ಸುತ್ತಾಡಲು ಆಸೆ ಇರುವ ಕರ್ನಾಟಕದ ಪ್ರವಾಸಿಗರಿಗೆ ಗುಡ್‌ ನ್ಯೂಸ್‌, ಬೆಂಗಳೂರಿನಿಂದ ಉದಯಪುರಕ್ಕೆ ನೇರ ವಿಮಾನ
ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ: ಗಂಟೆಗೆ 60 ಕಿ.ಮೀ ವೇಗದ ಬಿರುಗಾಳಿ, ಮುಂದಿನ 3 ದಿನಗಳು ನಿರ್ಣಾಯಕ!