ಲಂಚ ಪ್ರಕರಣ: ಬಿಜೆಪಿ ಶಾಸಕ ಮಾಡಾಳುಗಾಗಿ ಲೋಕಾ ಬೇಟೆ..!

Published : Mar 05, 2023, 06:25 AM IST
ಲಂಚ ಪ್ರಕರಣ:  ಬಿಜೆಪಿ ಶಾಸಕ ಮಾಡಾಳುಗಾಗಿ ಲೋಕಾ ಬೇಟೆ..!

ಸಾರಾಂಶ

ಪ್ರಕರಣದಲ್ಲಿ ಮಾಡಾಳು ವಿರೂಪಾಕ್ಷಪ್ಪ ಮೊದಲ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ತೀವ್ರಗೊಂಡಿದೆ. ಶಾಸಕರ ಪತ್ತೆಗಾಗಿ ಲೋಕಾಯುಕ್ತ ಪೊಲೀಸರ ತಂಡ ರಾಜ್ಯದ ವಿವಿಧೆಡೆ ಶೋಧ ಕಾರ್ಯ ನಡೆಸಿದೆ. ಬೆಂಗಳೂರು, ದಾವಣಗೆರೆ ಸೇರಿದಂತೆ ಇತರೆಡೆ ಹುಡುಕಾಟ ನಡೆದಿದೆ. ಜತೆಗೆ ವಿಚಾರಣೆಗೆ ಹಾಜರಾಗುವಂತೆ ವಿರೂಪಾಕ್ಷಪ್ಪಗೆ ನೋಟಿಸ್‌ ನೀಡಲು ಸಿದ್ಧತೆ ನಡೆದಿದೆ. 

ಬೆಂಗಳೂರು(ಮಾ.05):  ಲಂಚ ಸ್ವೀಕಾರ ಪ್ರಕರಣ ಸಂಬಂಧ ಆಡಳಿತಾರೂಢ ಬಿಜೆಪಿಯ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಬಂಧನಕ್ಕೆ ಲೋಕಾಯುಕ್ತ ಪೊಲೀಸರು ತೀವ್ರ ಶೋಧ ಕಾರ್ಯ ಕೈಗೊಂಡಿದ್ದು, ಏಳು ಡಿವೈಎಸ್‌ಪಿಗಳ ನೇತೃತ್ವದ ತಂಡವು ಹುಡುಕಾಟ ನಡೆಸಿದೆ.

ಪ್ರಕರಣದಲ್ಲಿ ಮಾಡಾಳು ವಿರೂಪಾಕ್ಷಪ್ಪ ಮೊದಲ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ತೀವ್ರಗೊಂಡಿದೆ. ಶಾಸಕರ ಪತ್ತೆಗಾಗಿ ಲೋಕಾಯುಕ್ತ ಪೊಲೀಸರ ತಂಡ ರಾಜ್ಯದ ವಿವಿಧೆಡೆ ಶೋಧ ಕಾರ್ಯ ನಡೆಸಿದೆ. ಬೆಂಗಳೂರು, ದಾವಣಗೆರೆ ಸೇರಿದಂತೆ ಇತರೆಡೆ ಹುಡುಕಾಟ ನಡೆದಿದೆ. ಜತೆಗೆ ವಿಚಾರಣೆಗೆ ಹಾಜರಾಗುವಂತೆ ವಿರೂಪಾಕ್ಷಪ್ಪಗೆ ನೋಟಿಸ್‌ ನೀಡಲು ಸಿದ್ಧತೆ ನಡೆದಿದೆ. ಅವರ ಬೆಂಗಳೂರು ಮತ್ತು ದಾವಣಗೆರೆ ನಿವಾಸ, ಶಾಸಕರ ಭವನ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ಲಿ. (ಕೆಎಸ್‌ಡಿಎಲ್‌) ಕಚೇರಿಗೆ ನೋಟಿಸ್‌ ನೀಡಲು ಪೊಲೀಸರು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.

ಮಾಡಾಳು ಬಂಧನ, ಸಿಎಂ ತಲೆದಂಡಕ್ಕೆ ಕಾಂಗ್ರೆಸ್‌ ಪಟ್ಟು

ಕೆಎಸ್‌ಡಿಎಲ್‌ಗೆ ರಾಸಾಯನಿಕ ಕಚ್ಚಾ ಪೂರೈಕೆಗೆ ಕಾರ್ಯಾದೇಶ ನೀಡಲು 81 ಲಕ್ಷ ರು. ಲಂಚಕ್ಕೆ ಬೇಡಿಕೆ ಇಟ್ಟು, 40 ಲಕ್ಷ ರು. ಲಂಚ ಪಡೆಯುತ್ತಿದ್ದ ವೇಳೆ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್‌ ಅವರು ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ತಂದೆಯ ಪರವಾಗಿ ಪ್ರಶಾಂತ್‌ ಲಂಚ ಸ್ವೀಕರಿಸುತ್ತಿದ್ದ ಕಾರಣ ವಿರೂಪಾಕ್ಷಪ್ಪ ಬಂಧನ ಮಾಡಬೇಕಾಗಿದೆ. ನಂತರವಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಶಾಸಕರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಬ್ಯಾಂಕ್‌ ಖಾತೆಗಳ ಶೋಧ:

ಇನ್ನು, ಸಂಜಯನಗರದಲ್ಲಿನ ಪ್ರಶಾಂತ್‌ ಮಾಡಾಳು ನಿವಾಸದಲ್ಲಿ ಆರು ಕೋಟಿ ರು.ಗಿಂತ ಹೆಚ್ಚಿನ ನಗದು ಪತ್ತೆಯಾದ ಬಳಿಕ ಅವರ ಬ್ಯಾಂಕ್‌ ಖಾತೆಗಳ ಶೋಧ ಕಾರ್ಯ ಪ್ರಾರಂಭಿಸಲಾಗಿದೆ. ಬ್ಯಾಂಕ್‌ ಖಾತೆಗಳೆಷ್ಟು, ಖಾತೆಯ ಮೂಲಕ ನಡೆದಿರುವ ವಹಿವಾಟುಗಳ ಎಷ್ಟುಎಂಬ ಕುರಿತು ಮಾಹಿತಿ ಕ್ರೋಢೀಕರಿಸಲಾಗುತ್ತಿದೆ.

ಪ್ರಶಾಂತ್‌ ಅವರ ಆದಾಯ ಮೂಲ, ಖರ್ಚಿನ ಮಾಹಿತಿ, ಹಣದ ಮೂಲ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮನೆಯಲ್ಲಿ ಸಿಕ್ಕ ಆರು ಕೋಟಿ ಮತ್ತು ಕ್ರೆಸೆಂಟ್‌ ರಸ್ತೆಯಲ್ಲಿನ ಖಾಸಗಿ ಕಚೇರಿಯಲ್ಲಿ ಪತ್ತೆಯಾದ ಎರಡು ಕೋಟಿ ರು.ಗಳನ್ನು ಯಾರಿಂದ ಪಡೆಯಲಾಗಿದೆ ಎಂಬುದರ ಮಾಹಿತಿಯನ್ನು ಸಹ ಕಲೆ ಹಾಕುವಲ್ಲಿ ಲೋಕಾಯುಕ್ತ ಪೊಲೀಸರು ನಿರತರಾಗಿದ್ದಾರೆ. ಪ್ರಶಾಂತ್‌ ಬ್ಯಾಂಕ್‌ ಖಾತೆಯಲ್ಲಿ ಕೋಟ್ಯಂತರ ರು. ಇದ್ದು, ಲಕ್ಷಾಂತರ ರು. ಜಮೆಯಾಗಿದೆ. ಯಾವ ದಿನದಂದು, ಎಷ್ಟು ಹಣ ಮತ್ತು ಯಾರಿಂದ ಜಮೆಯಾಗಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.

KSDL ಸಂಸ್ಥೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ! 800 ಕೋಟಿ ರೂ. ಗೋಲ್ಮಾಲ್‌?

ಎಲ್ಲ ದುಡ್ಡು ನೀವೇ ಇಟ್ಕೊಳ್ಳಿ ಎಂದಿದ್ದ ಮತ್ತೊಬ್ಬ ಪುತ್ರ

ಶಾಸಕರ ಮನೆ ಮೇಲೆ ದಾಳಿ ನಡೆದಾಗ ಅಲ್ಲಿ ಶಾಸಕರ ಇಬ್ಬರು ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಮಾತ್ರ ಇದ್ದರು. ಲಂಚ ಸ್ವೀಕರಿಸುವಾಗ ತಮ್ಮ ಸೋದರ ಲೋಕಾಯುಕ್ತ ಪೊಲೀಸರ ಬಲೆಗೆ ವಿಚಾರ ತಿಳಿದ ಕೂಡಲೇ ಶಾಸಕರ ಹಿರಿಯ ಪುತ್ರ ಮಲ್ಲಿಕಾರ್ಜುನ್‌ ಮಧ್ಯರಾತ್ರಿ ನಗರಕ್ಕೆ ದೌಡಾಯಿಸಿ ಬಂದಿದ್ದರು. ಆಗ ಮನೆಯಲ್ಲಿ ಪತ್ತೆಯಾದ ಕೋಟಿ ಕೋಟಿ ಹಣಕ್ಕೆ ಲೋಕಾಯುಕ್ತ ಪೊಲೀಸರು ಲೆಕ್ಕ ಕೇಳಿದಾಗ ಮಲ್ಲಿಕಾರ್ಜುನ್‌ ಆತಂಕಗೊಂಡಿದ್ದಾರೆ. ‘ಸರ್‌ ಈ ಹಣದ ಲೆಕ್ಕ ಕೊಡಲು ಸಾಧ್ಯವಿಲ್ಲ. ನೀವೇ ಮಡಿಕ್ಕೊಳಿ. ನಾವು ಯಾರಿಗೂ ಹೇಳೋದಿಲ್ಲ. ನೀವು ಯಾರಿಗೂ ಹೇಳ್ಬೇಡಿ. ಈ ವಿಚಾರ ಇಲ್ಲಿಗೆ ಮುಗಿಸಿ ಬಿಡಿ’ ಎಂದು ಗೋಗರೆದಿದ್ದಾರೆ. ಈ ಮಾತಿಗೆ ‘ನೀವು ಲೆಕ್ಕ ಕೊಡದೆ ಹೋದರೆ ಜಪ್ತಿ ಮಾಡುತ್ತೇವೆ. ನೀವು ಹೇಳಿದಂತೆಲ್ಲ ಮಾಡೋದಕ್ಕೆ ಆಗಲ್ಲ. ನಾವು ಲೋಕಾಯುಕ್ತ ಪೊಲೀಸರು’ ಎಂದು ಅಧಿಕಾರಿಗಳು ಮರು ಉತ್ತರ ನೀಡಿದ್ದಾರೆ ಎನ್ನಲಾಗಿದೆ.

ಕೆಎಸ್‌ಡಿಎಲ್‌ನ 6 ಜನ ಅಧಿಕಾರಿಗಳ ವಿರುದ್ಧವೂ ತನಿಖೆ ಮಾಡಿ: ನೌಕರರು

ಬೆಂಗಳೂರು: ‘ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌)ದಲ್ಲಿನ ಭ್ರಷ್ಟಾಚಾರ, ಅವ್ಯವಹಾರ ಕುರಿತು ಆಳವಾದ ತನಿಖೆ ಅಗತ್ಯ. ಕೆಎಸ್‌ಡಿಎಲ್‌ ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪ ಮಾತ್ರವಲ್ಲದೆ ವ್ಯವಸ್ಥಾಪಕ ನಿರ್ದೇಶಕರು ಸೇರಿ ಆರು ಮಂದಿಯನ್ನು ಲೋಕಾಯುಕ್ತರು ತನಿಖೆಗೆ ಒಳಪಡಿಸಬೇಕು’ ಎಂದು ನೌಕರರ ಒಕ್ಕೂಟ ಆಗ್ರಹಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

‘ನೆಕ್ಸ್ಟ್‌ ಸಿಎಂ’ ಬೆಟ್ಟಿಂಗ್‌ ನಿಯಂತ್ರಿಸಿ: ವಿ.ಸುನೀಲ್‌ ಕುಮಾರ್‌ ಆಗ್ರಹ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ಅಗತ್ಯ: ಛಲವಾದಿ ನಾರಾಯಣಸ್ವಾಮಿ