ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆ, ಬೊಮ್ಮಾಯಿ ಮನೆಗೆ ಮುತ್ತಿಗೆ ಯತ್ನ, ಭ್ರಷ್ಟಾಚಾರಕ್ಕೆ ದಾಖಲೆ ಕೇಳುತ್ತಿದ್ದ ಸಿಎಂ ನೈತಿಕ ಹೊಣೆ ಹೊರಲಿ: ಕಾಂಗ್ರೆಸ್ ಆಗ್ರಹ
ಬೆಂಗಳೂರು(ಮಾ.05): ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಜತೆಗೆ ಪ್ರಕರಣದ ಪ್ರಮುಖ ಆರೋಪಿ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ರಾಜ್ಯ ಕಾಂಗ್ರೆಸ್ ನಾಯಕರು ಶನಿವಾರ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಯತ್ನ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ಲೋಕಾಯುಕ್ತ ದಾಳಿ ವೇಳೆ ವಿರೂಪಾಕ್ಷಪ್ಪ ಪುತ್ರ ಬಲೆಗೆ ಬಿದ್ದಿದ್ದು, 8 ಕೋಟಿ ರು.ಗೂ ಅಧಿಕ ಹಣ ಪತ್ತೆಯಾಗಿದೆ. ತನ್ಮೂಲಕ ವಿರೂಪಾಕ್ಷಪ್ಪ ಅಧ್ಯಕ್ಷರಾಗಿರುವ ಕೆಎಸ್‌ಡಿಎಲ್‌ನಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿದೆ. ಹೀಗಿದ್ದರೂ ವಿರೂಪಾಕ್ಷಪ್ಪ ಅವರನ್ನು ಇನ್ನೂ ಬಂಧಿಸಿಲ್ಲ. ತಮ್ಮ ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪ ಬಂದಾಗಲೆಲ್ಲಾ ದಾಖಲೆ ಕೇಳುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೀಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದರು.
Lokayukta raid: ಶಾಸಕ ಮಾಡಳ, ಸಿಎಂ ಬೊಮ್ಮಾಯಿ ಇಬ್ಬರೂ ರಾಜಿನಾಮೆ ನೀಡಲಿ; ಕಾಂಗ್ರೆಸ್ ಆಗ್ರಹ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ವಿವಿಧ ನಾಯಕರ ನೇತೃತ್ವದಲ್ಲಿ ಕಾಂಗ್ರೆಸ್ ಭವನದ ಬಳಿ ಪ್ರತಿಭಟನಾ ಸಭೆ ನಡೆಸಲಾಯಿತು. ಬಳಿಕ ರೇಸ್‌ಕೋರ್ಸ್ ರಸ್ತೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ಮುಖ್ಯಮಂತ್ರಿಗಳ ರೇಸ್‌ಕೋರ್ಸ್ ರಸ್ತೆಯ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಕಾಂಗ್ರೆಸ್ ಭವನದ ಬಳಿಯೇ ಕಾಂಗ್ರೆಸ್ ನಾಯಕರನ್ನು ತಡೆದ ಪೊಲೀಸರು ಅವರನ್ನು ವಶಕ್ಕೆ ಪಡೆಯುವ ಮೂಲಕ ಮುತ್ತಿಗೆ ಯತ್ನ ವಿಫಲಗೊಳಿಸಿದರು.
ರೋಲ್ ಕಾಲ್ ಮಾಡೆಲ್:
ಪ್ರತಿಭಟನೆ ವೇಳೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗಿದರು. ‘ಕೋಟಿ, ಕೋಟಿ ಬಿಜೆಪಿ ಲೂಟಿ’, ‘ವಿರುಪಾಕ್ಷಪ್ಪನ ಬಂಧಿಸಿ’ ಎಂದು ಆಗ್ರಹಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ‘ರೋಲ್ ಕಾಲ್ ಮಾಡೆಲ್ ಮಾಡಾಳು ವಿರೂಪಾಕ್ಷಪ್ಪ’ ಎಂಬ ಪೋಸ್ಟರನ್ನು ರೇಸ್‌ಕೋರ್ಸ್ ಗೋಡೆಗೆ ಅಂಟಿಸಿದರು. ಜತೆಗೆ ‘ನಿತ್ಯ ಲೂಟಿಯೇ ಬಿಜೆಪಿ ಸಂಕಲ್ಪ, ಭ್ರಷ್ಟಾಚಾರವೇ ಬಿಜೆಪಿಯ ಭರವಸೆ’ ಪೋಸ್ಟರ್‌ಗಳನ್ನೂ ಅಂಟಿಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ರಾಜೀನಾಮೆಗೆ ಆಗ್ರಹ:
ಸಿದ್ದರಾಮಯ್ಯ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರಿಗೆ ಮಾನ ಮರ್ಯಾದೆ ಇದ್ದರೆ ಮಾಡಾಳು ವಿರೂಪಾಕ್ಷಪ್ಪನನ್ನು ಈ ಕೂಡಲೇ ಬಂಧಿಸಬೇಕು ಮತ್ತು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಪ್ರತಿಯೊಂದಕ್ಕೂ ದಾಖಲೆ ಕೇಳುವ ನಿಮ್ಮ ಭ್ರಷ್ಟಾಚಾರಕ್ಕೆ ಇದಕ್ಕಿಂತ ದಾಖಲೆ ಬೇರೆ ಬೇಕಾ? ಎಂದು ಕಿಡಿಕಾರಿದರು.
8 ಕೋಟಿಗೂ ಅಧಿಕ ಮೊತ್ತದ ಹಣ, ಆಭರಣಗಳನ್ನು ಲೋಕಾಯುಕ್ತದವರು ಮಾಡಾಳು ವಿರೂಪಾಕ್ಷಪ್ಪ ಅವರ ಮನೆಯಿಂದ ಸೀಜ್ ಮಾಡಿದ್ದಾರೆ. ನನ್ನ ಪ್ರಕಾರ ಬೊಮ್ಮಾಯಿ ಈಗಾಗಲೇ ರಾಜೀನಾಮೆ ಕೊಟ್ಟುಬಿಡಬೇಕಿತ್ತು. ಸಿದ್ದರಾಮಯ್ಯ ಅವರ ಸರ್ಕಾರ ಎಐಸಿಸಿಗೆ ಎಟಿಎಂ ಆಗಿತ್ತು ಎಂದು ಅಮಿತ್ ಶಾ ಅವರು ನಿನ್ನೆ ಆರೋಪ ಮಾಡಿದ್ದಾರೆ. ಹಾಗಾದರೆ ರಾಜ್ಯ ಬಿಜೆಪಿ ಸರ್ಕಾರ ಏನಾಗಿದೆ ಅಮಿತ್ ಶಾ? ಗಡೀಪಾರಾಗಿದ್ದ, ಜೈಲಿಗೆ ಹೋಗಿದ್ದ ಶಾ ಅವರಿಂದ ನಾವು ಪಾಠ ಕಲಿಯಬೇಕಿಲ್ಲ. ಮೊದಲು ನಿಮ್ಮವರಿಗೆ ಪಾಠ ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭ್ರಷ್ಟ ಜನತಾ ಪಕ್ಷ:
ರಣದೀಪ್‌ಸಿಂಗ್ ಸುರ್ಜೆವಾಲಾ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಬಿಜೆಪಿ ಎಂದರೆ ‘ಭ್ರಷ್ಟಜನತಾ ಪಕ್ಷ’ ಎಂದು ಮರು ನಾಮಕರಣ ಮಾಡಬೇಕು. ಬೊಮ್ಮಾಯಿ ಸರ್ಕಾರವನ್ನು ಭ್ರಷ್ಟಾಸುರ ಬೊಮ್ಮಾಯಿ ಸರ್ಕಾರ ಎಂದು ಕರೆಯಬೇಕು. ಹಿಂದೆ ವಿಜಯೇಂದ್ರ ಟ್ಯಾಕ್ಸ್ ಜನಪ್ರಿಯವಾಗಿತ್ತು. ಈಗ 40 ಪರ್ಸೆಂಟ್ ಜನಪ್ರಿಯವಾಗಿದೆ. ರಾಜ್ಯ ಉಳಿಯಬೇಕಾದರೆ ಬಿಜೆಪಿ ಮುಕ್ತ ಮಾಡಲೇಬೇಕು ಎಂದು ಕರೆ ನೀಡಿದರು.
ಮಾಡಾಳ್ ಕೇಸ್‌ನಲ್ಲಿ ಸರ್ಕಾರ ಮೂಗು ತೂರಿಸಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ
ಬಿಜೆಪಿ ಸರ್ಕಾರ ಲಂಚದ ವಿಚಾರದಲ್ಲಿ ಪಕ್ಕಾ ಸಿದ್ಧಾಂತ ಅನುಸರಿಸುತ್ತದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತನಾದರೂ ಆತ ತಾನು ಮಾಡಿದ ಕೆಲಸಕ್ಕೆ ಬಿಲ್ ಕೇಳಿದಾಗ ಶೇ.40 ರಷ್ಟುಲಂಚ ಕೇಳಿದರು. ಅದನ್ನು ನೀಡಲಾಗದೇ ಆತ ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು. ಈ ಸರ್ಕಾರ ಭ್ರಷ್ಟಾಚಾರಕ್ಕೆ ಬಲಿ ಪಡೆದಿರುವ ಸಂತೋಷ್ ಪಾಟೀಲ್, ಪ್ರಶಾಂತ್, ರಾಜೇಂದ್ರ ಅವರ ಜೀವಗಳನ್ನು ವಾಪಸು ನೀಡುತ್ತಾರಾ? ಎಂದು ಪ್ರಶ್ನಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ರಾಮಲಿಂಗಾರೆಡ್ಡಿ, ಮುಖಂಡರಾದ ದಿನೇಶ್ ಗುಂಡೂರಾವ್, ಕೆ.ಜೆ. ಜಾಜ್‌ರ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ರಾಜೀನಾಮೆ ಪಡೆಯಲಿ
ಬೊಮ್ಮಾಯಿ ಅವರಿಗೆ ಮಾನ-ಮರಾರಯದೆ ಇದ್ದರೆ ಮಾಡಾಳು ವಿರೂಪಾಕ್ಷಪ್ಪನನ್ನು ಕೂಡಲೇ ಬಂಧಿಸಬೇಕು. ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ಬೊಮ್ಮಾಯಿ ರಾಜೀನಾಮೆ ಕೊಡಬೇಕು. ಭ್ರಷ್ಟಾಚಾರ ಬಗ್ಗೆ ದಾಖಲೆ ಕೇಳುವ ಸಿಎಂಗೆ ಇದಕ್ಕಿಂತ ದಾಖಲೆ ಬೇಕಾ? ಅಂತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.