ರಾಜ್ಯಾದ್ಯಂತ ಎಲ್ಲ ನ್ಯಾಯಾಲಯಗಳಲ್ಲಿ ಕಳೆದ ಶನಿವಾರ (ಜೂ.25) ನಡೆದ ಮೆಗಾ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟು 7.65 ಲಕ್ಷ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ತಿಳಿಸಿದ್ದಾರೆ.
ಬೆಂಗಳೂರು (ಜೂ.28): ರಾಜ್ಯಾದ್ಯಂತ ಎಲ್ಲ ನ್ಯಾಯಾಲಯಗಳಲ್ಲಿ ಕಳೆದ ಶನಿವಾರ (ಜೂ.25) ನಡೆದ ಮೆಗಾ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟು 7.65 ಲಕ್ಷ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗೆ ನಡೆದ ಲೋಕ ಅದಾಲತ್‌ನಲ್ಲಿ ಗರಿಷ್ಠ 6.16 ಲಕ್ಷ ಕೇಸ್ ಇತ್ಯರ್ಥ ಮಾಡಿರುವುದೇ ದಾಖಲೆಯಾಗಿತ್ತು. ಈ ಬಾರಿ ಒಟ್ಟು 7,65,077 ಲಕ್ಷ ಪ್ರಕರಣ ಇತ್ಯರ್ಥಪಡಿಸಲಾಗಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದ್ದು, ಒಂದೇ ದಿನದಲ್ಲಿ ಇಷ್ಟು ಪ್ರಕರಣಗಳನ್ನು ಇತ್ಯರ್ಥ ಮಾಡಿರುವುದರಿಂದ ಸರ್ಕಾರಕ್ಕೆ ಬೊಕ್ಕಸಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಂದಾಜು 508 ಕೋಟಿ ರು. ಉಳಿತಾಯ ಮಾಡಿದಂತಾಗಿದೆ. ಜತೆಗೆ, ಸಾವಿರಾರು ಕೋಟಿಗೂ ಹೆಚ್ಚು ಹಣವನ್ನು ದಂಡ ರೂಪದಲ್ಲಿ ಸಂಗ್ರಹಿಸಿ ಸಂತ್ರಸ್ತರಿಗೆ ಪರಿಹಾರವಾಗಿ ನೀಡಲಾಗಿದೆ ಎಂದು ವಿವರಿಸಿದರು.
ಮಣ್ಣು ಸಂರಕ್ಷಣಾ ಅಭಿಯಾನದಲ್ಲೂ ಗುಂಗು ಹಿಡಿಸಿದ ಸುದೀಪ್ ಅಭಿನಯದ ರಾರಾ ರಕ್ಕಮ್ಮ ಸಾಂಗ್!
ಮತ್ತೊಂದು ವಿಶೇಷವೆಂದರೆ ಅದಾಲತ್‌ನಲ್ಲಿ ಒಟ್ಟು 1,128 ವೈವಾಹಿಕ ಪ್ರಕರಣಗಳು ಇತ್ಯರ್ಥವಾಗಿವೆ. 107ಕ್ಕಿಂತಲೂ ಹೆಚ್ಚಿನ ಪ್ರಕರಣಗಳಲ್ಲಿ ದಂಪತಿಗಳು ರಾಜಿ ಸಂಧಾನದಿಂದ ವೈಮನಸ್ಸು ದೂರ ಮಾಡಿಕೊಂಡು ಮತ್ತೆ ಒಂದಾಗಿ ಬಾಳ್ವೆ ನಡೆಸಲು ನಿರ್ಧರಿಸಿದ್ದಾರೆ. ಅದರಲ್ಲಿ ಮೈಸೂರಿನಲ್ಲಿ 40 ಹಾಗೂ ಬೆಂಗಳೂರಿನಲ್ಲಿ 30 ದಂಪತಿಗಳು ಒಂದಾಗಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಕೌಟುಂಬಿಕ ವ್ಯಾಜ್ಯದಿಂದ 50 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ 80 ವರ್ಷದ ಅಜ್ಜಿ ಮತ್ತು 85 ವರ್ಷದ ಅಜ್ಜಿ (ವಯೋವೃದ್ಧ ದಂಪತಿ) ಒಂದಾಗಿದ್ದು, ಜೀವನಾಂಶ ಕೋರಿದ್ದ ಪ್ರಕರಣ ಇತ್ಯರ್ಥಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಒಟ್ಟು 4,076 ಮೋಟಾರು ವಾಹನ ಅಪಘಾತ ಪ್ರಕರಣಗಳನ್ನು ಇತ್ಯರ್ಥಪಡಿಸಿ, 184 ಕೋಟಿ ರು. ಪರಿಹಾರ ಒದಗಿಸಲಾಗಿದೆ. ಹೈಕೋರ್ಟ್‌ನಲ್ಲಿದ್ದ ಮೋಟಾರು ವಾಹನ ಕಾಯ್ದೆಯಡಿಯ ಪ್ರಕರಣವೊಂದರಲ್ಲಿ ಅತಿ ಹೆಚ್ಚು 1.97 ಕೋಟಿ ರು. ಪರಿಹಾರ ನೀಡಲಾಗಿದೆ. ಲಘು ವ್ಯಾಜ್ಯಗಳ ನ್ಯಾಯಾಲಯದ ಪ್ರಕರಣವೊಂದರಲ್ಲಿ 2.03 ಕೋಟಿ ರು. ಪರಿಹಾರ ದೊರಕಿಸಿಕೊಡಲಾಗಿದೆ. ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ 7.75 ಕೋಟಿ ರು. ಮೊತ್ತಕ್ಕೆ ಇತ್ಯರ್ಥಪಡಿಸಲಾಗಿದೆ ಎಂದು ಹೇಳಿದರು.
ಒಂದು ವರ್ಷ ಸಮಯ ಹಿಡಿಯುತ್ತಿತ್ತು: ಅದಲಾತ್‌ನಲ್ಲಿ ಹೈಕೋರ್ಟ್‌ನ ಮೂರು ಪೀಠಗಳಲ್ಲಿ ಒಟ್ಟು 20 ಹಾಗೂ ಜಿಲ್ಲಾ ನ್ಯಾಯಾಲಯಗಳಲ್ಲಿ 964 ಬೈಠಕ್ (ಕಲಾಪಗಳನ್ನು) ನಡೆಸಿದವು. ನ್ಯಾಯಾಲಯಗಳಲ್ಲಿ ಬಾಕಿಯಿರುವ ಒಟ್ಟು 2,64,464 ಹಾಗೂ 5,00,6135 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ 7.65 ಲಕ್ಷ ಪ್ರಕರಣ ಇತ್ಯರ್ಥಪಡಿಸಲಾಗಿದೆ. ಇಷ್ಟುಪ್ರಕರಣ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗಬೇಕಿದ್ದರೆ ಸಾವಿರಕ್ಕೂ ಹೆಚ್ಚು ನ್ಯಾಯಾಧೀಶರಿಗೆ ಒಂದು ವರ್ಷ ಅವಧಿ ಹಿಡಿಯುತ್ತಿತ್ತು ಎಂದು ತಿಳಿಸಿದರು.
ಅಲ್ಲದೆ, ಒಟ್ಟು 2.23 ಲಕ್ಷ ಟ್ರಾಫಿಕ್ ಚಲನ್ ಪ್ರಕರಣಗಳನ್ನು ಇತ್ಯರ್ಥಪಡಿಸಿ 22.36 ಕೋಟಿ ರು. ದಂಡದ ಮೊತ್ತ ಸಂಗ್ರಹಿಸಲಾಗಿದೆ. ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ 194 ಪ್ರಕರಣಗಳನ್ನು ಇತ್ಯರ್ಥಪಡಿಸಿ 6.17 ಕೋಟಿ ರು. ಪರಿಹಾರ ನೀಡಲಾಗಿದೆ. 226 ವಾಣಿಜ್ಯ ದಾವೆಗಳನ್ನು ಇತ್ಯರ್ಥಪಡಿಸಿ 7.96 ಕೋಟಿ ರು. ಪರಿಹಾರ ಪಾವತಿಸಲಾಗಿದೆ ಎಂದು ನುಡಿದರು.
ಪ್ರಧಾನಿ ಮೋದಿ ಒಬ್ಬ ಮಹಾನ್ ನಾಯಕ: ಸುಧಾಮೂರ್ತಿ ಶ್ಲಾಘನೆ
ಹಾಗೆಯೇ, 5,585 ಬ್ಯಾಂಕ್ ವಸೂಲಾತಿ ಪ್ರಕರಣಗಳನ್ನು ಇತ್ಯರ್ಥಪಡಿಸಿ 36.24 ಕೋಟಿ ರು. ವಸೂಲಿ ಮಾಡಲಾಗಿದೆ. 11,842 ವಿದ್ಯುತ್ ಬಿಲ್ಲಿನ ಪ್ರಕರಣಗಳಲ್ಲಿ 3.10 ಕೋಟಿ ರು. ಹಾಗೂ 99,866 ನೀರಿನ ಬಿಲ್ ವಸೂಲಿ ಪ್ರಕರಣಗಳಲ್ಲಿ 25.04 ಕೋಟಿ ರೂ. ವಸೂಲಿ ಮಾಡಲಾಗಿದೆ. ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ಮುಂದೆ ಬಾಕಿ ಇದ್ದ 222 ಪ್ರಕರಣಗಳನ್ನು ಇತ್ಯರ್ಥಪಡಿಸಿ 5.85 ಕೋಟಿ ರು. ಪರಿಹಾರ ನೀಡಲಾಗಿದೆ. 1.46 ಲಕ್ಷ ಕಂದಾಯ ಹಾಗೂ ಮಾಹಿತಿ ಹಕ್ಕು ಕಾಯ್ದೆಯಡಿಯ 97 ಪ್ರಕರಣಗಳನ್ನು ಬಗೆಹರಿಸಲಾಗಿದೆ ಎಂದು ಮಾಹಿತಿ ನೀಡಿದರು.