ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಜಾಲತಾಣದ ತಾಂತ್ರಿಕ ದೋಷ ಸರಿಪಡಿಸಲಾಗಿದ್ದು, ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ 200 ಆಸುಪಾಸಿಗೆ ತಗ್ಗಿದ್ದ ಕೊರೋನಾ ಹೊಸ ಪ್ರಕರಣಗಳು ಮತ್ತೆ 600ಕ್ಕೆ ಹೆಚ್ಚಳವಾಗಿವೆ.
ಬೆಂಗಳೂರು (ಜೂ.28): ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಜಾಲತಾಣದ ತಾಂತ್ರಿಕ ದೋಷ ಸರಿಪಡಿಸಲಾಗಿದ್ದು, ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ 200 ಆಸುಪಾಸಿಗೆ ತಗ್ಗಿದ್ದ ಕೊರೋನಾ ಹೊಸ ಪ್ರಕರಣಗಳು ಮತ್ತೆ 600ಕ್ಕೆ ಹೆಚ್ಚಳವಾಗಿವೆ. ಸೋಮವಾರ 617 ಮಂದಿಗೆ ಸೋಂಕು ತಗುಲಿದ್ದು, 767 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ.
ಸದ್ಯ 4288 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 19 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ 3.1 ರಷ್ಟು ದಾಖಲಾಗಿದೆ. ಭಾನುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 13 ಸಾವಿರ ಕಡಿಮೆಯಾಗಿದ್ದರೂ, ಹೊಸ ಪ್ರಕರಣಗಳು 484 ಏರಿಕೆಯಾಗಿವೆ. (ಭಾನುವಾರ 133, ಸಾವು ಶೂನ್ಯ). ಶನಿವಾರ ಮತ್ತು ಭಾನುವಾರ ಐಸಿಎಂಆರ್ ಜಾಲತಾಣದ ತಾಂತ್ರಿಕ ಸಮಸ್ಯೆಯಿಂದ ಹಲವು ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಸೇರ್ಪಡೆಯಾಗಿರಲಿಲ್ಲ. ಸಮಸ್ಯೆ ಪರಿಹಾರವಾಗಿದ್ದು, ಹೀಗಾಗಿ, ಹೊಸ ಪ್ರಕರಣಗಳು ಮತ್ತೆ 600ಕ್ಕೆ ಹೆಚ್ಚಿವೆ.
ಕೊರೋನಾ ಕಾಟ ಒಂದಾ ಎರಡಾ?: ದಂಪತಿ ಮಧ್ಯೆ ಕಲಹಕ್ಕೂ ಕಾರಣವಾಯ್ತು ಡೆಡ್ಲಿ ವೈರಸ್..!
ಎಲ್ಲಿ ಎಷ್ಟು ಮಂದಿಗೆ ಸೋಂಕು?: ಸೋಮವಾರ ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 592 ಪತ್ತೆಯಾಗಿವೆ. ಉಳಿದಂತೆ ದಕ್ಷಿಣ ಕನ್ನಡ 7, ಮೈಸೂರು 4, ಉಡುಪಿ, ಉತ್ತರ ಕನ್ನಡ ಹಾಗೂ ಬಳ್ಳಾರಿಯಲ್ಲಿ ತಲಾ 3, ಬೀದರ್, ಹಾಸನ, ಹಾವೇರಿ, ಕಲಬುರಗಿ ಹಾಗೂ ಕೋಲಾರದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. 19 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಸಕ್ರಿಯ ಸೋಂಕಿತರ ಪೈಕಿ 68 ಮಂದಿ ಮಾತ್ರ ಆಸ್ಪತೆಯಲ್ಲಿದ್ದು, ಉಳಿದ 4220 ಮಂದಿ ಮನೆಯ ಆರೈಕೆಯಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಈವರೆಗೆ 39.6 ಲಕ್ಷ ಮಂದಿಗೆ ಸೋಂಕು ತಗುಲಿದೆ. 39.1 ಲಕ್ಷ ಮಂದಿ ಗುಣ ಮುಖರಾಗಿದ್ದು, 40,072 ಮಂದಿ ಸಾವಿಗೀಡಾಗಿದ್ದಾರೆ.
ಮಾತನಾಡುವವನಿಗಿಂತ ಮೌನಿಗೆ ಕೋವಿಡ್ ಸಾಧ್ಯತೆ: ಇಬ್ಬರು ವ್ಯಕ್ತಿಗಳು ಮಾಸ್ಕ್ ಇಲ್ಲದೆ ಮಾತುಕತೆಯಲ್ಲಿ ತೊಡಗಿದ್ದಾಗ ಒಬ್ಬ ವ್ಯಕ್ತಿ ಮಾತ್ರ ಮಾತನಾಡುತ್ತಿದ್ದು, ಮತ್ತೊಬ್ಬ ವ್ಯಕ್ತಿ ಮೌನವಾಗಿದ್ದರೆ ಮೌನವಾಗಿರುವ ವ್ಯಕ್ತಿಗೆ ಕೊರೋನಾ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಇಬ್ಬರೂ ವ್ಯಕ್ತಿಗಳು ಮಾತನಾಡುತ್ತಿದ್ದರೆ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂಬ ಹೊಸ ವಿಷಯವನ್ನು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವಿಜ್ಞಾನಿಗಳು ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ.
ಕೊರೋನಾ ಕಾಟ: ಮತ್ತೆ ವಿಮಾನ ನಿಲ್ದಾಣಗಳಲ್ಲಿ ಕೋವಿಡ್ ಟೆಸ್ಟ್
ನಾಲ್ಕು ಅಡಿ ಅಂತರದಲ್ಲಿ ನಿಂತು ವ್ಯಕ್ತಿಗಳು ಪರಸ್ಪರ ಮಾತನಾಡುತ್ತಿದ್ದಾಗ ಎಂಜಲಿನ ಸಣ್ಣ ಹನಿ (ಡ್ರಾಪ್‌ಲೆಟ್) ಹರಡುವ ರೀತಿ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದ ಪ್ರಕಾರ ಇಬ್ಬರು ವ್ಯಕ್ತಿಗಳು ಮಾತನಾಡುವಾಗ ಪರಸ್ಪರ ಕಣ್ಣಿನ ಸಂಪರ್ಕ ಇಟ್ಟುಕೊಂಡೆ ತಲೆಯನ್ನು ಪರಸ್ಪರ ವಿರುದ್ಧ ದಿಕ್ಕಿಗೆ 9 ಡಿಗ್ರಿ ವಾಲಿಸಿ ಮಾತನಾಡಿದರೆ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂದಿದ್ದಾರೆ. ಕೊರೋನಾ ಸೋಂಕು ಗಾಳಿಯ ಮೂಲಕ ಹರಡುತ್ತದೆ ಎಂಬ ಕಾರಣಕ್ಕೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ.