ಕೃಷಿ ಪ್ರಧಾನ ದೇಶ ಭಾರತದಲ್ಲಿ ಗೋ ರಕ್ಷಣೆ ಎಂಬುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಬೇಕು ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದರು. ಗೋ ಹತ್ಯೆ ನಿಷೇಧ ಕಾಯಿದೆ ಜಾರಿಗೆ ಬಂದ ನಂತರ ರಾಜ್ಯ ಸರ್ಕಾರ ಜಿಲ್ಲೆಗೊಂದು ಗೋ ಶಾಲೆ ಯೋಜನೆ ಜಾರಿಗೊಳಿಸಿದೆ.
ಕಡೂರು (ಜೂ.28): ಕೃಷಿ ಪ್ರಧಾನ ದೇಶ ಭಾರತದಲ್ಲಿ ಗೋ ರಕ್ಷಣೆ ಎಂಬುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಬೇಕು ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದರು. ಗೋ ಹತ್ಯೆ ನಿಷೇಧ ಕಾಯಿದೆ ಜಾರಿಗೆ ಬಂದ ನಂತರ ರಾಜ್ಯ ಸರ್ಕಾರ ಜಿಲ್ಲೆಗೊಂದು ಗೋ ಶಾಲೆ ಯೋಜನೆ ಜಾರಿಗೊಳಿಸಿದೆ. ರಾಜ್ಯದಲ್ಲಿ 70 ಗೋ ಶಾಲೆ ತೆರೆಯಲು ಸಿಎಂ ತೀರ್ಮಾನ ಮಾಡಿದ್ದಾರೆ. ಈ ಸಂಬಂಧ ಈಗಾಗಲೇ ರಾಜ್ಯದ 30 ಜಿಲ್ಲೆಗಳಲ್ಲಿ ಪ್ರಕ್ರಿಯೆ ಶುರುವಾಗಿದೆ. ಪ್ರತಿ ಜಿಲ್ಲೆಯ ಗೋಮಾಳ ಜಾಗದಲ್ಲಿ ಗೋ ಶಾಲೆ ನಿರ್ಮಾಣ ಮಾಡಲಾಗುತ್ತಿದೆ. ಪ್ರಾಣಿ ಸಹಾಯ ಕೇಂದ್ರ, ಪಶು ಸಂಜೀವಿನಿ ಆರಂಭಿಸಲಾಗಿದೆ. ರೈತರು 1962 ಸಹಾಯವಾಣಿಗೆ ಕರೆ ಮಾಡಿ ನೆರವು ಪಡೆದುಕೊಳ್ಳಬಹುದು ಎಂದರು.
ರಾಜ್ಯದ ಮೊದಲ ಸರ್ಕಾರಿ ಗೋ ಶಾಲೆ ಉದ್ಘಾಟನೆ: ರಾಜ್ಯದ ಮೊದಲ ಸರ್ಕಾರಿ ಗೋ ಶಾಲೆ ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದ ಬಳಿ ರಾಜ್ಯದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸೋಮವಾರ ಲೋಕಾರ್ಪಣೆಗೊಳಿಸಿದರು. ಇಲ್ಲಿನ 10 ಎಕರೆ ಪ್ರದೇಶದಲ್ಲಿ 2 ಎಕರೆ ಗೋ ಶಾಲೆ, ಇನ್ನುಳಿದ 8 ಎಕರೆಯಲ್ಲಿ ಮೇವು ಬೆಳೆಸಲು ಕಾಯ್ದಿರಿಸಲಾಗಿದ್ದು, ಸಚಿವರು ಗೋವುಗಳಿಗೆ ಪೂಜೆ ಮಾಡಿ, ಮೇವು ನೀಡುವ ಮೂಲಕ ಉದ್ಘಾಟಿಸಿ ಗೋ ಶಾಲೆ ವೀಕ್ಷಿಸಿದರು.
ಆತ್ಮನಿರ್ಭರ ರೀತಿಯಲ್ಲಿ ಗೋಶಾಲೆ ಅಭಿವೃದ್ಧಿ: ಸಚಿವ ಚವ್ಹಾಣ್
ಅನಂತರದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂತ್ರಿಯಾದ ಮೇಲೆ ಮೊದಲ ಬಾರಿ ಸರ್ಕಾರಿ ಗೋಶಾಲೆ ಲೋಕಾರ್ಪಣೆ ಮಾಡಿದ್ದೇನೆ. ನನಗೆ ಬಹಳ ಸಂತೋಷವಾಗಿದೆ. ಇಲ್ಲಿ ರಾಸುಗಳಿಗೆ ಬೇಕಾದ ಮೇವು, ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪಶು ಸಂಗೋಪನಾ ಇಲಾಖೆಯಲ್ಲಿ ವೈದ್ಯರು ಸೇರಿದಂತೆ 400 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ಈ ಪ್ರಕ್ರಿಯೆ ನಾಳೆಯಿಂದಲೇ ಆರಂಭವಾಗಲಿದೆ ಎಂದು ತಿಳಿಸಿದರು.
ಆತ್ಮ ನಿರ್ಭರ್ ಗೋ ಶಾಲೆ ತೆರೆಯಲು ಉತ್ತರ ಪ್ರದೇಶ, ಗುಜರಾತ್ ರಾಜ್ಯಕ್ಕೆ ತೆರಳಿ ಅಧ್ಯಯನ ಮಾಡಿದ್ದೇನೆ. ರಾಷ್ಟೊ್ರೕತ್ಥಾನ ಗೋ ಶಾಲೆಗೆ ಹೋಗಿದ್ದೇವೆ. ಅಲ್ಲಿ 700 ಹಸುಗಳಿವೆ. ಪ್ರತಿ ತಿಂಗಳು 6 ಲಕ್ಷ ಬಿಜಿನೆಸ್ ಮಾಡುತ್ತಾರೆ. ಯಾರೂ ಸರ್ಕಾರಕ್ಕೆ ದುಡ್ಡು ಕೇಳುತ್ತಿಲ್ಲ. ಆತ್ಮ ನಿರ್ಭರ್ ಗೋ ಶಾಲೆ ಶೀಘ್ರದಲ್ಲೇ ಆರಂಭ ಆಗಬೇಕು. ಪುಣ್ಯಕೋಟಿದತ್ತಿ ಯೋಜನೆ ಪ್ರಾರಂಭವಾಗಬೇಕೆಂಬುದು ಮುಖ್ಯಮಂತ್ರಿಯವರ ಕನಸು ಇದನ್ನು ನನಸು ಮಾಡಲಾಗುವುದು ಎಂದು ತಿಳಿಸಿದರು.
ತಾಕತ್ತಿದ್ದರೆ ಸಿದ್ದರಾಮಯ್ಯ ನಮ್ಮೆದುರು ಬೀಫ್ ತಿನ್ನಲಿ: ಪ್ರಭು ಚವ್ಹಾಣ್
ಬಕ್ರೀದ್‌ಗೆ ಕಸಾಯಿ ಖಾನೆಗೆ ಗೋವು ಹೋಗಬಾರದು: ಮುಂದಿನ ತಿಂಗಳು 10ರಂದು ಬಕ್ರೀದ್ ಹಬ್ಬ ಇದೆ. ಈ ಸಂದರ್ಭದಲ್ಲಿ ಜಾನುವಾರು ಕಸಾಯಿ ಖಾನೆಗೆ ಹೋಗಬಾರದು. ಈ ಸಂಬಂಧ ಪೊಲೀಸ್ ಇಲಾಖೆ ಹಾಗೂ ಪಶು ವೈದ್ಯರಿಗೆ ಸೂಚನೆ ನೀಡಲಾಗಿದೆ. ರೈತರು ತಮ್ಮಲ್ಲಿರುವ ಜಾನುವಾರುಗಳನ್ನು ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳಿಗೆ ನೀಡಬಾರದು. 1962 ಸಹಾಯವಾಣಿಗೆ ಕರೆ ಮಾಡಿ ನೆರವು ಪಡೆಯಬೇಕು ಎಂದು ರಾಜ್ಯದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದರು.