ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸೂಚನೆ; ಅಂಗನವಾಡಿ ಕಾರ್ಯಕರ್ತರು ತೀವ್ರ ವಿರೋಧ

By Kannadaprabha News  |  First Published Sep 5, 2023, 11:08 AM IST

ರಾಜ್ಯದಲ್ಲಿ 262 ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದಲೇ ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭಿಸಲು ಸಮಗ್ರ ಶಿಕ್ಷಣ ಕರ್ನಾಟಕ ನಿರ್ದೇಶನಾಲಯ ಸೂಚನೆ ಹಿನ್ನೆಲೆ ಜಿಲ್ಲೆಯಲ್ಲೂ ಒಟ್ಟು 50 ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ಪೂರ್ವಸಿದ್ದತೆ ಮಾಡಿಕೊಳ್ಳಲಾಗಿದೆ.


ಶಿವಮೊಗ್ಗ (ಸೆ.5):  ರಾಜ್ಯದಲ್ಲಿ 262 ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದಲೇ ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭಿಸಲು ಸಮಗ್ರ ಶಿಕ್ಷಣ ಕರ್ನಾಟಕ ನಿರ್ದೇಶನಾಲಯ ಸೂಚನೆ ಹಿನ್ನೆಲೆ ಜಿಲ್ಲೆಯಲ್ಲೂ ಒಟ್ಟು 50 ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ಪೂರ್ವಸಿದ್ದತೆ ಮಾಡಿಕೊಳ್ಳಲಾಗಿದೆ.

ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಎಲ್‌ಕೆಜಿ, ಯುಕೆಜಿ ಆರಂಭಿಸುವಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಸೆಪ್ಟೆಂಬರ್‌ ತಿಂಗಳಿಂದಲೇ ತರಗತಿ ಆರಂಭಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಶಾಲೆಯಲ್ಲಿ ಎಲ್‌ಕೆಜಿ ವಿಭಾಗದಲ್ಲಿ 4 ರಿಂದ 5 ವರ್ಷದೊಳಗಿನ ಮಕ್ಕಳನ್ನು ಮಾತ್ರ ದಾಖಲಿಸುವಂತೆ ಸರ್ಕಾರ ಸೂಚಿಸಿದೆ. 

Latest Videos

undefined

Teachers day special: ಸ್ವಂತ ಖರ್ಚಿಲ್ಲಿ ಎಲ್‌ಕೆಜಿ- ಯುಕೆಜಿ ಶುರು ಮಾಡಿದ ಮೇಷ್ಟ್ರು!

₹1.4 ಲಕ್ಷ ಅನುದಾನ:

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನದವರೆಗೆ ಮಾತ್ರ ನಡೆಸುವುದು, ಶಾಲೆಯ ಎಸ್‌ಡಿಎಂಸಿ ಸಮಿತಿ ನೇತೃತ್ವದಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ಅನುಮತಿ ನೀಡಿದ್ದು, ಇದಕ್ಕೆ ಬೇಕಾದ ಅತಿಥಿ ಉಪನ್ಯಾಸಕ ನೇಮಕ ಸೇರಿದಂತೆ ಪರಿಕರ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸಲು ₹1.4 ಲಕ್ಷ ಅನುದಾನವನ್ನು ಸರ್ಕಾರ ನೀಡುತ್ತಿದೆ.

ಜಿಲ್ಲೆಯಲ್ಲಿ 50 ಸರ್ಕಾರಿ ಶಾಲೆಗಳು:

ಜಿಲ್ಲೆಯ 50 ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಡಿಡಿಪಿಐ ನೇತೃತ್ವದಲ್ಲಿ ಪೂರ್ವಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. 50 ಶಾಲೆಗಳ ಪೈಕಿ ಶಿಕಾರಿಪುರದಲ್ಲಿ 2 ಶಾಲೆಗಳು, ತೀರ್ಥಹಳ್ಳಿಯಲ್ಲಿ 6, ಶಿವಮೊಗ್ಗದಲ್ಲಿ 13, ಸಾಗರದಲ್ಲಿ 10, ಹೊಸನಗರದಲ್ಲಿ 4 ಹಾಗೂ ಭದ್ರಾವತಿಯಲ್ಲಿ 15 ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಈಗಾಗಲೇ ಕೆಲ ಶಾಲೆಗಳಲ್ಲಿ ಸೆ.1ರಿಂದ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ ಎಂದು ಡಿಡಿಪಿಐ ಮಾಹಿತಿ ನೀಡಿದ್ದಾರೆ.

ಜಿಲ್ಲೆಯ 50 ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ಪೂರ್ವಸಿದ್ದತೆ ನಡೆಯುತ್ತಿದೆ. ಇದಕ್ಕೆ ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಆಯ್ದ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆದರೆ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಅವರ ತವರು ಕ್ಷೇತ್ರ ಸೊರಬದಲ್ಲೇ ಯಾವ ಶಾಲೆಗಳನ್ನು ಆಯ್ದುಕೊಂಡಿಲ್ಲ.

ಅಂಗನವಾಡಿ ಕಾರ್ಯಕರ್ತರ ವಿರೋಧ:

ರಾಜ್ಯದಲ್ಲಿ 262 ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ಸರ್ಕಾರ ಅಸ್ತು ಎಂದಿದೆ. ಆದರೆ, ಇದು ಯಶಸ್ವಿಯಾದರೆ ಮುಂದೆ ನಮ್ಮ ಪಾಡೇನೂ ಎಂಬುದು ಅಂಗನವಾಡಿ ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿದೆ.

ಈಗಾಗಲೇ ಅಂಗನವಾಡಿಗಳಿಗೆ ಬರುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಈ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ ಮಾಡಿದರೆ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ ಬೀಗ ಹಾಕುವ ಪರಿಸ್ಥಿತಿ ಬರುತ್ತದೆ ಎಂಬುದು ಕಾರ್ಯಕರ್ತರ ಅಳಲು.

ಹೀಗಾಗಿ ಸರ್ಕಾರ ಕೂಡಲೇ ಈ ಆದೇಶವನ್ನು ವಾಪಸ್‌ ಪಡೆದು ಅಂಗನವಾಡಿಗಳಿಗೆ ಉತ್ತೇಜನ ನೀಡಿ, ಎಲ್‌ಕೆಜಿಗೆ ಬೇಕಾಗುವ ಪಠ್ಯಕ್ರಮಗಳ ಬಗ್ಗೆ ಕಾರ್ಯಕರ್ತೆಯರಿಗೆ ತರಬೇತಿ ನೀಡಿದರೆ, ಅತಿಥಿ ಶಿಕ್ಷಕರ ಬದಲು ಅಂಗನವಾಡಿ ಕಾರ್ಯಕರ್ತೆಯರೇ ಈ ಜವಾಬ್ದಾರಿ ನಿರ್ವಹಿಸುತ್ತಾರೆ ಎಂಬುದು ಅಂಗನವಾಡಿ ಕಾರ್ಯಕರ್ತೆಯರ ಒತ್ತಾಯ.

 

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿಗೆ ಚಿಂತನೆ: ಸಚಿವ ಮಧು ಬಂಗಾರಪ್ಪ

ಸರ್ಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಎಲ್‌ಕೆಜಿ ಆರಂಭಕ್ಕೆ ಅನುಮತಿ ನೀಡಿದೆ. ಇದು ಅಂಗನವಾಡಿಗಳ ಮೇಲೆ ಪರಿಣಾಮ ಬೀರುತ್ತದೆ, ಅಂಗನವಾಡಿಗಳಲ್ಲಿ ಮಕ್ಕಳೇ ಬಾರದಿದ್ದರೆ ಅಂಗನವಾಡಿ ಕಾರ್ಯಕರ್ತೆಯರ ಪಾಡೇನು? ಅವರು ಏನೂ ಮಾಡಬೇಕು? ಸರ್ಕಾರ ಈ ಕ್ರಮವನ್ನು ಖಂಡಿಸಿ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ

-ಬಿ.ಪ್ರೇಮ, ಅಧ್ಯಕ್ಷೆ, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘ

click me!