
ಮಂಡ್ಯ (ಆ.8) : ಕೃಷಿ ಸಚಿವರ ವಿರುದ್ದ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಜಂಟಿ ಕೃಷಿ ನಿರ್ದೇಶಕ ಅಶೋಕ್ ಎಸ್‌ಪಿಗೆ ದೂರು ನೀಡಿದ್ದಾರೆ.
ರಾಜ್ಯಪಾಲರಿಗೆ ಸಹಾಯಕ ಕೃಷಿ ನಿರ್ದೇಶಕರು ದೂರು ನೀಡಿಲ್ಲ. ಆ ಸಂಬಂಧ ನಾನು ಖುದ್ದಾಗಿ ವಿಚಾರಿಸಿದ್ದೇನೆ. ಸಚಿವರಾಗಲಿ, ಅಧಿಕಾರಿಗಳಾಗಲಿ ಯಾರು ಹಣಕ್ಕೆ ಬೇಡಿಕೆ ಇಟ್ಟಿಲ್ಲ. ದೂರು ಪ್ರತಿಯಲ್ಲಿನ ಸಹಿ ಕೂಡ ನಮ್ಮದಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕೀಯ ದುರುದ್ದೇಶದಿಂದ ನಮ್ಮ ಅಧಿಕಾರಿಗಳ ಹೆಸರಲ್ಲಿ ರಾಜ್ಯಪಾಲರಿಗೆ ನಕಲಿ ದೂರು ಸಲ್ಲಿಸಿರುವ ಸಾಧ್ಯತೆ ಇದೆ. ಆದ್ದರಿಂದ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಚಿವ ಚಲುವರಾಯ ವಿರುದ್ಧದ ಪತ್ರ ನಕಲಿ: ಸಿಎಂ ಸಿದ್ದರಾಮಯ್ಯ
ಇದು ಜೆಡಿಎಸ್ ಮಾಜಿ ಶಾಸಕರ ಕೈವಾಡ: ಮಧು ಜಿ.ಮಾದೇಗೌಡ
ಸಚಿವರ ವಿರುದ್ಧ ಕೃಷಿ ಅಧಿಕಾರಿಗಳಿಂದ ರಾಜ್ಯ ಪಾಲರಿಗೆ ದೂರು ನೀಡಿರುವುದರ ಹಿಂದೆ ಜಿಲ್ಲೆಯ ಜೆಡಿಎಸ್‌ನ ಮಾಜಿ ಶಾಸಕರ ಕೈವಾಡವಿದೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಗಂಭೀರವಾಗಿ ಆರೋಪಿಸಿದರು.
ಕುಮಾರಸ್ವಾಮಿ ಅವರು ಹಿಟ್ ಅಂಡ್ ರನ್ ಕೇಸ್ ಎಂದು ಈಗಾಗಲೇ ಮುಖ್ಯಮಂತ್ರಿಗಳು ಹೇಳಿದ್ದಾರೆ. ಸರ್ಕಾರ ಮತ್ತು ಸಚಿವರಿಂದ ಉತ್ತಮ ಕೆಲಸಗಳಾಗುತ್ತಿವೆ. ಇಂತಹ ಬೆಳವಣಿಗೆಗಳಿಂದ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಯಾರಿಗೆ ಆದರೂ ಇದು ಒಳ್ಳೆಯದಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ನಮ್ಮ ಜಿಲ್ಲೆಯ ಯಾವ ಅಧಿಕಾರಿಗಳೂ ಈ ರೀತಿ ಮಾಡೋಲ್ಲ. ಇದೊಂದು ಫೇಕ್ ಲೆಟರ್. ಈ ಬಗ್ಗೆ ತನಿಖೆ ಆಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಯಾರು ಪತ್ರ ಬರೆಸಿದ್ದಾರೆ ತನಿಖೆಯಾಗಲಿ: ರಮೇಶ್ ಬಂಡಿಸಿದ್ದೇಗೌಡ
ರಾಜ್ಯ ಪಾಲರಿಗೆ ಯಾರು ಪತ್ರ ಬರೆಸಿದರು, ಪತ್ರ ಬರೆಯಲು ಪ್ರೇರಣೆ ನೀಡಿದವರು ಯಾರು ಎಂಬ ಬಗ್ಗೆ ತನಿಖೆ ಆಗಬೇಕು ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಒತ್ತಾಯಿಸಿದರು.
ಸಹಾಯಕ ಕೃಷಿ ನಿರ್ದೇಶಕರಿಂದ ಸಚಿವ ಚಲುವರಾಯಸ್ವಾಮಿ ವಿರುದ್ಧ ದೂರು ವಿಚಾರವಾಗಿ ಪ್ರತಿಕ್ರಿಯಿಸಿ, ನಾವು ಗೆದ್ದು ಎರಡು ತಿಂಗಳಷ್ಟೇ ಕಳೆದಿದೆ. ನಮ್ಮ ಮೇಲೆ ಯಾಕಿಷ್ಟುಕೋಪ. ಕನಿಷ್ಠ ಒಂದು 6 ತಿಂಗಳು ಕಳೆಯುವವರೆಗಾದರೂ ನಮ್ಮ ಸ್ನೇಹಿತರು ಸಮಾಧಾನವಾಗಿರಲಿ ಎಂದರು.
ಜನರು ನಮಗೊಂದು ಅವಕಾಶ ಕೊಟ್ಟಿದ್ದಾರೆ. ನಾವು ಜನಪರವಾಗಿ ಕೆಲಸ ಮಾಡುತ್ತಿದ್ದೇವೆ. ನಾಗಮಂಗಲ ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣದಲ್ಲೂ ಇದೇ ರೀತಿ ಆಗಿದೆ. ಆತನ ಪತ್ನಿ ಮೊದಲು ದೂರುದಾರಳು. ಆತ ಬೆಡ್ ಮೇಲೆ ಪ್ರಜ್ಞೆ ಇಲ್ಲದೆ ಮಲಗಿರುವಾಗ ಹೇಳಿಕೆ ಕೊಟ್ಟಿದ್ದನಂತೆ. ಪ್ರಜ್ಞೆ ಇಲ್ಲದೆ ಹೇಳಿಕೆ ಕೊಡಲು ಹೇಗೆ ಸಾಧ್ಯ?, ತನಿಖೆಯಿಂದಲೂ ಸತ್ಯಾಸತ್ಯತೆ ಹೊರಬಂದಿಲ್ಲ. ಮೊಸರಲ್ಲೂ ಕಲ್ಲು ಹುಡುಕುವ ಕೆಲಸ ನಮ್ಮ ಸ್ನೇಹಿತರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಂತ್ರಿಗಳ ಮಾನಗೇಡಿ ಕೃತ್ಯ ಸಮರ್ಥನೆ ಮಾಡುವ ಲಜ್ಜೆಗೇಡಿ ಸಿಎಂ ರಾಜ್ಯಕ್ಕೆ ವಕ್ಕರಿಸಿದ್ದಾರೆ: ಎಚ್‌ಡಿಕೆ
ತನಿಖೆಗೆ ನಮ್ಮ ವಿರೋಧ ಇಲ್ಲ, ತನಿಖೆ ಆಗಲಿ. ಆದರೆ, ಇದೊಂದು ಷಡ್ಯಂತ್ರ. ನಮ್ಮ ಹಳೇ ಸ್ನೇಹಿತರೋ, ಹೊಸಬರೋ ಇಲ್ಲ ಜೊತೆಗಿರುವವರೋ ಗೊತ್ತಿಲ್ಲ. ತನಿಖೆ ಆಗಲಿ, ಸತ್ಯ ಹೊರಬರಲಿ. ಪತ್ರ ಬರೆದವರು ಯಾರು?, ಸಹಿ ಹಾಕಿದವರು, ಹಾಕಿಸಿದವರು ಯಾರೆಂದು ಗೊತ್ತಾಗಲಿ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ