ನಾಡಿನೆಲ್ಲೆಡೆ ಕನ್ನಡ ವಾತಾವರಣ ಸೃಷ್ಟಿ ಸಂಕಲ್ಪ ಮಾಡೋಣ: ಸಿದ್ದರಾಮಯ್ಯ

By Kannadaprabha News  |  First Published Nov 3, 2023, 7:03 AM IST

ವಿಜಯನಗರ ಅರಸರ ಕಾಲದ ವೈಭವ ಮತ್ತು ಅಭಿವೃದ್ಧಿ ರಾಜ್ಯದಲ್ಲಿ ಮರಳಿಸುವುದು ಸರ್ಕಾರದ ಆದ್ಯತೆಯಾಗಿದ್ದು, ಕನ್ನಡ ನಾಡಿನಲ್ಲಿ ಕನ್ನಡ ಸಾರ್ವಭೌಮತ್ವ ಪಡೆಯಬೇಕಿದೆ. ನಾಡಿನಲ್ಲಿ ಕನ್ನಡವನ್ನೇ ಮಾತನಾಡುವ ವಾತಾವರಣ ಸೃಷ್ಟಿ ಮಾಡಬೇಕಿದೆ. 
 


ಹೊಸಪೇಟೆ (ನ.03): ವಿಜಯನಗರ ಅರಸರ ಕಾಲದ ವೈಭವ ಮತ್ತು ಅಭಿವೃದ್ಧಿ ರಾಜ್ಯದಲ್ಲಿ ಮರಳಿಸುವುದು ಸರ್ಕಾರದ ಆದ್ಯತೆಯಾಗಿದ್ದು, ಕನ್ನಡ ನಾಡಿನಲ್ಲಿ ಕನ್ನಡ ಸಾರ್ವಭೌಮತ್ವ ಪಡೆಯಬೇಕಿದೆ. ನಾಡಿನಲ್ಲಿ ಕನ್ನಡವನ್ನೇ ಮಾತನಾಡುವ ವಾತಾವರಣ ಸೃಷ್ಟಿ ಮಾಡಬೇಕಿದೆ. ಈ ಸಂಕಲ್ಪದೊಂದಿಗೆ ನಾಡಿನಲ್ಲಿ ನೆಲೆಸಿರುವ ಅನ್ಯ ಭಾಷಿಕರಿಗೂ ಕನ್ನಡ ಕಲಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯನಗರ ಜಿಲ್ಲಾಡಳಿತದಿಂದ ಹಂಪಿಯಲ್ಲಿ ಗುರುವಾರ ಆಯೋಜಿಸಿದ್ದ "ಕರ್ನಾಟಕ ಸಂಭ್ರಮ- ೫೦" ಕಾರ್ಯಕ್ರಮಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ತಮಿಳುನಾಡಿನಲ್ಲಿ ತಮಿಳು ಬಿಟ್ಟು ಬೇರೆ ಭಾಷೆ ಮಾತನಾಡಲು ಸಾಧ್ಯವಿಲ್ಲ. ನಾವು ಅನ್ಯ ಭಾಷೆ ಕಲಿಯುವುದರೊಂದಿಗೆ ಕರ್ನಾಟಕದಲ್ಲಿ ಕನ್ನಡದ ವಾತಾವರಣ ಬೆಳೆಸೋಣ, ಈ ಶಪಥದೊಂದಿಗೆ ಕನ್ನಡ ಜ್ಯೋತಿರಥಯಾತ್ರೆ ಇಡೀ ನಾಡಿನಾದ್ಯಂತ ಸಂಚರಿಸಿ, ಕನ್ನಡ, ಕನ್ನಡತ್ವ ಬೆಳಗಲಿ ಎಂದರು.

ನಿಜ ಕಲ್ಯಾಣ ಆಗಲಿ: ಬಸವಣ್ಣನ ನಾಡು ಇದು. ಕಲ್ಯಾಣ ಕರ್ನಾಟಕ ಎಂದು ಕೇವಲ ಹೆಸರಿಟ್ಟರೆ ಸಾಲದು. ನಿಜವಾದ ಅರ್ಥದಲ್ಲಿ ಈ ಭಾಗದ ಜನರು ಕಲ್ಯಾಣ ಕಾಣಬೇಕು ಎನ್ನುವ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಈ ಉದ್ದೇಶದಿಂದಲೇ ೩೭೧ (ಜೆ) ಜಾರಿ ಮಾಡಿದೆವು. ಮಲ್ಲಿಕಾರ್ಜುನ ಖರ್ಗೆ, ವೈಜನಾಥ ಪಾಟೀಲ್ ಅವರು ಸೇರಿ ಹಲವರ ಹೋರಾಟದ ಫಲವಾಗಿ ೩೭೧ ಜೆ ಜಾರಿಯಾಗಿದೆ. ಇದು ಜಾರಿ ಆಗಿದ್ದರಿಂದ ಈ ಭಾಗಕ್ಕೆ ಹೆಚ್ಚೆಚ್ಚು ಅನುದಾನ ಅವಕಾಶಗಳು ಸೃಷ್ಟಿಯಾಗಿವೆ. ನಾನು ಮುಖ್ಯಮಂತ್ರಿ ಆದ ಬಳಿಕ ಬಾಕಿ ಇದ್ದ ಅನುದಾನದ ಜತೆಗೆ ಹೆಚ್ಚುವರಿಯಾಗಿ ಈ ಭಾಗಕ್ಕೆ ₹೩೦೦೦ ಕೋಟಿ ಹೆಚ್ಚುವರಿ ಅನುದಾನ ನೀಡಿರುವೆ ಎಂದರು.

Latest Videos

undefined

ರಾಜ್ಯದಲ್ಲಿ ಐದು ವರ್ಷ ಕಾಂಗ್ರೆಸ್ ಸರ್ಕಾರ: ಸಿದ್ದರಾಮಯ್ಯ ಖಡಕ್ ಹೇಳಿಕೆ

ಮೌಢ್ಯಮುಕ್ತ ಕರುನಾಡು: ಬಸವಣ್ಣನವರ ರೀತಿ ನಾನೂ ಮೌಢ್ಯ ನಂಬುವುದಿಲ್ಲ. ನನಗೆ ಮೌಢ್ಯದಲ್ಲಿ ನಂಬಿಕೆ ಇಲ್ಲ. ಬಸವಾದಿ ಶರಣರು ಮೌಢ್ಯದ ವಿರುದ್ಧ ಹೋರಾಡಿ, ಜಾಗೃತಿ ಮೂಡಿಸಿದ್ದರು. ನಾನೂ ಮೌಢ್ಯವನ್ನು ಧಿಕ್ಕರಿಸಿ ಈ ನಾಡಿನ ಜನರ ಮೇಲೆ ನಂಬಿಕೆ ಇಟ್ಟಿದ್ದೇನೆ. ದೇವರಲ್ಲಿ, ದೇವರು ಎನ್ನುವ ಶಕ್ತಿಯಲ್ಲಿ ನನಗೆ ನಂಬಿಕೆ ಇದೆ ಎಂದು ಸ್ಪಷ್ಟಪಡಿಸಿದರು.

ಕನ್ನಡದಲ್ಲೇ ವ್ಯವಹರಿಸಿರಿ: ಬಸವಣ್ಣ ಸಾಮಾಜಿಕ ನ್ಯಾಯದ ಪ್ರತಿಪಾದಕರು, ಕಲ್ಯಾಣ ಕರ್ನಾಟಕ ಬಸವಾದಿ ಶರಣರ ನಾಡು, ಈ ನಾಡಿನಲ್ಲಿ ನಾವೆಲ್ಲರೂ ವೈಚಾರಿಕ ಮೂಡಿಸೋಣ, ಮೌಢ್ಯ ತೊಲಗಿಸಿಸೋಣ, ಸಮ ಸಮಾಜ ನಿರ್ಮಾಣದ ಪ್ರಯತ್ನ ಸರ್ಕಾರದ್ದಾಗಿದೆ ಎಂದರು. ಕನ್ನಡ ಬದುಕನ್ನು ಉನ್ನತೀಕರಿಸುವ ಆಶಯದಿಂದ ಏಕೀಕರಣ ಚಳವಳಿ ನಡೆದು ಹಲವರ ಪ್ರಾಣ ತ್ಯಾಗವನ್ನೂ ಪಡೆದು ವಿಶಾಲ ಕನ್ನಡ ನಾಡು ಉದಯವಾಗಿದೆ. ಕರ್ನಾಟಕ ನಾಮಕರಣಗೊಂಡು ೫೦ ವರ್ಷ ತುಂಬಿದೆ. ಬಿಜೆಪಿ ಸರ್ಕಾರ ಇಡೀ ವರ್ಷ ಕನ್ನಡ ಸಂಭ್ರಮವನ್ನು ಆಚರಿಸಬೇಕಿತ್ತು. 

ಅವರು ಆಚರಿಸಲಿಲ್ಲ. ಆದರೆ ನಮ್ಮ ಸರ್ಕಾರ ಬಂದ ತಕ್ಷಣ ಮೊದಲ ಬಜೆಟ್ ನಲ್ಲೇ "ಕನ್ನಡ ಸಂಭ್ರಮ-೫೦" ನ್ನು ಘೋಷಿಸಿದೆ. ನಾವು ಕರ್ತವ್ಯಲೋಪ ಮಾಡಲಿಲ್ಲ ಎಂದರು. ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾಗಿ ಆಡಳಿತದಲ್ಲಿ ಕನ್ನಡ ಪರಿಣಾಮಕಾರಿಯಾಗಿ ಜಾರಿ ಆಗಲು ರಾಜ್ಯಾದ್ಯಂತ ಸುತ್ತಾಡಿದೆ. ಎಲ್ಲ ಕಚೇರಿಗಳಿಗೆ ಕನ್ನಡ ಟೈಪಿಂಗ್ ಯಂತ್ರವನ್ನು ನೀಡಿ ಐಎಎಸ್ ಅಧಿಕಾರಿಗಳೂ ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸಲು ಪ್ರೇರಣೆ ನೀಡಿದ್ದೆ ಎಂದು ಸ್ಮರಿಸಿದರು. ಇತರೆ ಭಾಷೆಗಳನ್ನು ಕಲಿಯಿರಿ, ಗೌರವಿಸಿರಿ. ಆದರೆ ಕನ್ನಡದಲ್ಲೇ ವ್ಯವಹರಿಸಿರಿ, ಕನ್ನಡ ಜ್ಯೋತಿಯನ್ನು ರಾಜ್ಯಾದ್ಯಂತ ಸಂಭ್ರಮದಿಂದ ಸ್ವಾಗತಿಸಿ ಎಂದರು.

2024ರಲ್ಲಿ ಹೊಸ ಸಂಕಲ್ಪ: ದೇವರಾಜ ಅರಸರು ಮೈಸೂರು ರಾಜ್ಯ ಹೆಸರಿಗೆ ಬದಲಾಗಿ ಕರ್ನಾಟಕ ಎಂದು ನಾಮಕರಣ ಮಾಡಿದರು. ೧೯೭೩ರ ನವೆಂಬರ್‌ನಲ್ಲಿ ಈ ಕಾರ್ಯ ಮಾಡಿದರು. ಅವರು ಕರ್ನಾಟಕ ಬೆಸೆಯುವ ಕಾರ್ಯ ಮಾಡಿದರು. ಕರ್ನಾಟಕದ ಏಕೀಕರಣಕ್ಕಾಗಿ ಹಲವರು ತ್ಯಾಗ ಮಾಡಿದ್ದಾರೆ. ಅವರ ತ್ಯಾಗದ ಫಲವಾಗಿ ಕನ್ನಡ ನಾಡು ಒಂದಾಗಿದೆ. ಕರ್ನಾಟಕ ಇನ್ನಷ್ಟು ಸಮೃದ್ಧವಾಗಿ ಬೆಳೆಯಲು ನಾವೆಲ್ಲರೂ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ ಎಂಬ ಘೋಷವಾಕ್ಯದೊಂದಿಗೆ ಇಡೀ ನಾಡಿನಾದ್ಯಂತ ಕನ್ನಡ ಜ್ಯೋತಿ ಇಡೀ ಒಂದು ವರ್ಷ ಸಂಚರಿಸಲಿದೆ ಎಂದರು.

ಪ್ರತಿನಿತ್ಯ ಬೈದರೆ ಮೋದಿ ಏಕೆ ಸಿದ್ದು ಭೇಟಿ ಆಗ್ತಾರೆ?: ಬಿ.ಎಸ್‌.ಯಡಿಯೂರಪ್ಪ

೨೦೨೪ರ ಅ. ೩೧ರವರೆಗೂ ಇಡೀ ನಾಡಿನಾದ್ಯಂತ ಜ್ಯೋತಿ ಸಂಚರಿಸಿ ಬೆಂಗಳೂರಿಗೆ ಆಗಮಿಸಲಿದ್ದು, ನಾವೆಲ್ಲರೂ ಸೇರಿ ೨೦೨೪ರ ನವೆಂಬರ್ ಒಂದರಂದು ಹೊಸ ಸಂಕಲ್ಪದೊಂದಿಗೆ ಕನ್ನಡ ರಾಜ್ಯೋತ್ಸವ ಆಚರಿಸೋಣ ಎಂದು ಕರೆನೀಡಿದರು. ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್.ಆರ್. ಗವಿಯಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್ ಖಾನ್, ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್ ತಂಗಡಗಿ, ಕಾನೂನು ಸಚಿವರಾದ ಎಚ್.ಕೆ. ಪಾಟೀಲ್, ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಈ. ತುಕಾರಾಂ, ಡಾ. ಎನ್.ಟಿ. ಶ್ರೀನಿವಾಸ್, ಜಿ.ಎನ್. ಗಣೇಶ್, ಲತಾ, ಮಂಜುನಾಥ್, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್, ಮಾಜಿ ಸಂಸದ ಉಗ್ರಪ್ಪ ಸೇರಿ ಇಲಾಖಾ ಅಧಿಕಾರಿಗಳು ಹಾಗೂ ಮುಖಂಡರು ಮತ್ತಿತರರಿದ್ದರು.

click me!