ಝೀಕಾ ವೈರಸ್‌ ಪತ್ತೆ ಹಿನ್ನೆಲೆ: ಸರ್ಕಾರದ ಮಾರ್ಗಸೂಚಿ, ಪಾಸಿಟಿವ್‌ ಬಂದರೆ 5 ಕಿ.ಮೀ. ಕಂಟೈನ್ಮೆಂಟ್‌..!

By Kannadaprabha News  |  First Published Nov 3, 2023, 4:21 AM IST

ಝೀಕಾ ಸೋಂಕಿನ ಲಕ್ಷಣಗಳಾದ 2 ರಿಂದ 7 ದಿನಗಳವರೆಗೆ ಜ್ವರ, ಕಣ್ಣು ಕೆಂಪಾಗುವುದು, ತಲೆನೋವು, ಚರ್ಮದ ಮೇಲೆ ದದ್ದು, ಮೈಕೈ ಹಾಗೂ ಕೀಲು ನೋವು ಕಂಡುಬಂದ ಪ್ರಕರಣಗಳಲ್ಲಿ ಸೀರಮ್‌ (ರಕ್ತ) ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್‌ಐವಿ)ಗೆ ಕಳುಹಿಸಬೇಕು.


ಬೆಂಗಳೂರು(ನ.03): ಚಿಕ್ಕಬಳ್ಳಾಪುರ ಜಿಲ್ಲೆ ದಿಬ್ಬೂರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಝೀಕಾ ವೈರಸ್‌ ಪತ್ತೆಯಾದ ಬೆನ್ನಲ್ಲೇ ಆರೋಗ್ಯ ಇಲಾಖೆಯು ಕಟ್ಟೆಚ್ಚರ ವಹಿಸಿದ್ದು, ಝೀಕಾ ವೈರಸ್‌ ಹರಡುವುದನ್ನು ನಿಯಂತ್ರಿಸಲು ಮಾರ್ಗಸೂಚಿ ಪ್ರಕಟ ಮಾಡಿದೆ.

ಚಿಕ್ಕಬಳ್ಳಾಪುರದಲ್ಲಿ ಸೊಳ್ಳೆಯ ಮಾದರಿಗಳ ಸಂಗ್ರಹದ ವೇಳೆ ಈಡಿಸ್‌ ಸೊಳ್ಳೆಯಲ್ಲಿ ಝೀಕಾ ವೈರಸ್‌ ಪತ್ತೆಯಾಗಿದ್ದು, ಈವರೆಗೆ ಯಾವುದೇ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿಲ್ಲ. ಹೀಗಿದ್ದರೂ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮಗಳಿಗಾಗಿ ಮಾರ್ಗಸೂಚಿಯನ್ನು ಸರ್ಕಾರ ರವಾನಿಸಿದೆ.

Latest Videos

undefined

ಚಿಕ್ಕಬಳ್ಳಾಪುರದಲ್ಲಿ ಝೀಕಾ ವೈರಸ್ ಪತ್ತೆ: ಹೈಅಲರ್ಟ್ ಆದ ಆರೋಗ್ಯ ಇಲಾಖೆ

ಝೀಕಾ ಸೋಂಕಿನ ಲಕ್ಷಣಗಳಾದ 2 ರಿಂದ 7 ದಿನಗಳವರೆಗೆ ಜ್ವರ, ಕಣ್ಣು ಕೆಂಪಾಗುವುದು, ತಲೆನೋವು, ಚರ್ಮದ ಮೇಲೆ ದದ್ದು, ಮೈಕೈ ಹಾಗೂ ಕೀಲು ನೋವು ಕಂಡುಬಂದ ಪ್ರಕರಣಗಳಲ್ಲಿ ಸೀರಮ್‌ (ರಕ್ತ) ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್‌ಐವಿ)ಗೆ ಕಳುಹಿಸಬೇಕು.

5 ಕಿ.ಮೀ. ಕಂಟೈನ್ಮೆಂಟ್‌:

ಝೀಕಾ ವೈರಸ್‌ ಸೋಂಕು ದೃಢಪಟ್ಟರೆ ಸಂಬಂಧಪಟ್ಟ ಸೋಂಕಿತರ ಕುಟುಂಬ ಸದಸ್ಯರ ಮಾದರಿಗಳನ್ನು ಬೆಂಗಳೂರಿನ ಎನ್‌ಐವಿಗೆ ಕಳುಹಿಸಬೇಕು. ಸುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್‌ ವಲಯ ಎಂದು ಘೋಷಿಸಬೇಕು. ಸೋಂಕಿತರು ಹಾಗೂ ಶಂಕಿತರನ್ನು ಪ್ರತ್ಯೇಕವಾಗಿಡಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಝೀಕಾ ವೈರಸ್‌ ನವಜಾತ ಶಿಶುಗಳಲ್ಲಿ ಮೈಕ್ರೋಸೆಫಾಲಿ ಸೇರಿ ಇತರೆ ಗಂಭೀರ ಸಮಸ್ಯೆ ಉಂಟು ಮಾಡಬಹುದು. ಹೀಗಾಗಿ ಈಡಿಸ್‌ ಸೊಳ್ಳೆಗಳು ಇರುವ ವ್ಯಾಪ್ತಿಯ ಗರ್ಭಿಣಿಯರ ರಕ್ತ ಹಾಗೂ ಮೂತ್ರವನ್ನು ಬೆಂಗಳೂರಿನ ಎನ್‌ಐವಿಗೆ ಕಳುಹಿಸಬೇಕು. ಜತೆಗೆ ಕಳೆದ ಮೂರು ತಿಂಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಜನಿಸಿರುವ ಮಕ್ಕಳ ಆರೋಗ್ಯದ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸೂಚಿಸಲಾಗಿದೆ.

ಖಾಸಗಿ ವೈದ್ಯರು ಸಹ ಝೀಕಾ ವೈರಸ್ ಬಗ್ಗೆ ಅರಿವು ಮೂಡಿಸಬೇಕು. ಈ ವೈರಸ್ ಸಹ ಡೆಂಘೀ, ಚಿಕೂನ್‌ಗುನ್ಯಾ ಮಾದರಿಯಲ್ಲಿ ಈಡಿಸ್ ಸೊಳ್ಳೆಗಳಿಂದ ಹರಡುತ್ತದೆ. ಹೀಗಾಗಿ ಈಡಿಸ್ ಲಾರ್ವಾ ಸಮೀಕ್ಷೆ, ಜ್ವರ ಸಮೀಕ್ಷೆಗಳನ್ನು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ನಡೆಸಬೇಕು.

ಯಾವುದೇ ವ್ಯಕ್ತಿಗೆ ಝೀಕಾ ವೈರಸ್‌ ಸೋಂಕು ದೃಢಪಟ್ಟರೆ ಅಥವಾ ಯಾವುದೇ ನೀರಿನ ಸಂಗ್ರಹದಲ್ಲಿನ ಸೊಳ್ಳೆಯಲ್ಲಿ ವೈರಸ್‌ ಖಚಿತಪಟ್ಟರೆ 5 ಕಿ.ಮೀ. ವ್ಯಾಪ್ತಿಯನ್ನು ಕಂಟೈನ್ಮೆಂಟ್‌ ಮಾಡಬೇಕು. ಕಂಟೈನ್ಮೆಂಟ್ ವಲಯದಲ್ಲಿ ಪ್ರತಿ ಮನೆ ಮನೆಗೂ ಭೇಟಿ ನೀಡಿ ಈಡಿಸ್ ಲಾರ್ವಾ ಸಮೀಕ್ಷೆ ಹಾಗೂ ಜ್ವರ ಸಮೀಕ್ಷೆಗಳನ್ನು ನಡೆಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಈ ಕೆಲಸವನ್ನು ಆರೋಗ್ಯ ಮತ್ತು ಆಶಾ ಕಾರ್ಯಕರ್ತರು ನಡೆಸಬೇಕು. ಇದಕ್ಕಾಗಿ ನೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹೆಚ್ಚುವರಿ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿಯನ್ನು ನೇಮಿಸಬೇಕು. ಇದಕ್ಕಾಗಿ ಎಲ್ಲರಿಗೂ ತರಬೇತಿ ನೀಡಬೇಕು ಎಂದು ಹೇಳಲಾಗಿದೆ.

Zika virus ಪತ್ತೆ: ಸೋಂಕಿತ ಬಾಲಕಿ ಮನೆಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ

ಈಡಿಸ್ ಸೊಳ್ಳೆಯ ಮಾದರಿಗಳ ಪರೀಕ್ಷೆ:

ಈಡಿಸ್ ಸೊಳ್ಳೆಗಳ ಕೊಳದ ಮಾದರಿಗಳನ್ನು ಬೆಂಗಳೂರು ಎನ್‌ಐವಿಗೆ ಕಳುಹಿಸಬೇಕು. ಹೆಚ್ಚು ಜ್ವರ, ಶಂಕಿತ ಝೀಕಾ ಪ್ರಕರಣಗಳಿರುವ ಪ್ರದೇಶದಲ್ಲಿ ಪ್ರತಿ 15 ದಿನಗಳಿಗೊಮ್ಮೆ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಬೇಕು. ಗ್ರಾಮೀಣಾಭಿವೃದ್ಧಿ, ನಗರ ಸ್ಥಳೀಯ ಸಂಸ್ಥೆಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಸೂಚಿಸಲಾಗಿದೆ.

ಮಾರ್ಗಸೂಚಿ ಏನನ್ನುತ್ತೆ?

- ಈಡಿಸ್‌ ಎಂಬ ಮಾದರಿಯ ಸೊಳ್ಳೆಗಳಿಂದ ಹರಡುವ ವೈರಸ್ ಇದು
- ಸಾರ್ವಜನಿಕರು ತಮ್ಮ ಸುತ್ತಲಿನ ಪರಿಸರ ಸೊಳ್ಳೆಮುಕ್ತವಾಗಿರಿಸಿ
- ಹಗಲಿನ ವೇಳೆ ಸೊಳ್ಳೆ ಕಡಿತಕ್ಕೆ ಒಳಗಾಗದಂತೆ ಎಚ್ಚರ ವಹಿಸಿ
- ಝೀಕಾ ಸೋಂಕಿನ ಲಕ್ಷಣ ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಹೋಗಿ
- ಸೌಮ್ಯ ಲಕ್ಷಣವಿರುವ ಸೋಂಕು ಇದು. ಆದರೆ, ನಿರ್ಲಕ್ಷ್ಯ ಬೇಡ
- ಇದಕ್ಕೆ ನಿರ್ದಿಷ್ಟ ಔಷಧವಿಲ್ಲ. ರೋಗ ಲಕ್ಷಣ ಆಧರಿಸಿ ವೈದ್ಯರಿಂದ ಚಿಕಿತ್ಸೆ

click me!