ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿಲ್ಲ, ಜಾತಿ ನಿಂದನೆ ಮಾಡಿಲ್ಲ, ಬ್ಲ್ಯಾಕ್ ಮೇಲ್ ಮಾಡಿಲ್ಲ ಎಂದು ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ನಾವೂ ಸಹ ಕಾಯುತ್ತೇವೆ ಎಂದು ನೊಂದ ಸಂತ್ರಸ್ತರು ಶಾಸಕ ಮುನಿರತ್ನಗೆ ಪ್ರತಿ ಸವಾಲು ಹಾಕಿದರು.
ನಾಗಮಂಗಲ (ಡಿ.29): ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿಲ್ಲ, ಜಾತಿ ನಿಂದನೆ ಮಾಡಿಲ್ಲ, ಬ್ಲ್ಯಾಕ್ ಮೇಲ್ ಮಾಡಿಲ್ಲ ಎಂದು ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ನಾವೂ ಸಹ ಕಾಯುತ್ತೇವೆ ಎಂದು ನೊಂದ ಸಂತ್ರಸ್ತರು ಶಾಸಕ ಮುನಿರತ್ನಗೆ ಪ್ರತಿ ಸವಾಲು ಹಾಕಿದರು. ತಾಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ಬೆಂಗಳೂರಿನಿಂದ ಆಗಮಿಸಿದ್ದ ಶಾಸಕ ಮುನಿರತ್ನ ವಿರುದ್ಧದ ವಿವಿಧ ಪ್ರಕರಣಗಳ ಸಂತ್ರಸ್ತರು ಹಾಗೂ ದೂರುದಾರರು ಶ್ರೀಕಾಲಭೈರವೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಕರ್ಪೂರ ಹಚ್ಚಿ ಪೂಜೆ ಸಲ್ಲಿಸಿದ ಬಳಿಕ ಶಾಸಕರ ಬರುವಿಕೆಗಾಗಿ ದೇಗುಲದ ಮುಖ್ಯದ್ವಾರದಲ್ಲಿ ಕಾಯ್ದು ಕುಳಿತು ಆಣೆ ಪ್ರಮಾಣಕ್ಕೆ ಬಹಿರಂಗವಾಗಿ ಪಂಥಾಹ್ವಾನ ಕೊಟ್ಟರು.
ನಾನು ಯಾವುದೇ ತಪ್ಪು ಮಾಡಿಲ್ಲ, ಬೇಕಿದ್ದರೆ ಶ್ರೀಕಾಲಭೈರವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಆಣೆ ಪ್ರಮಾಣ ಮಾಡುತ್ತೇನೆಂದು ಮಾಧ್ಯಮದ ಎದುರು ಸವಾಲು ಹಾಕುತ್ತಿರುವ ಬಿಜೆಪಿ ಶಾಸಕ ಮುನಿರತ್ನ ತನ್ನ ಮೇಲಿರುವ ಆರೋಪಗಳು ಸುಳ್ಳು ಎನ್ನುವುದಾದರೆ ಆದಿಚುಂಚನಗಿರಿ ಕ್ಷೇತ್ರಕ್ಕೆ ಬರಲಿ ಎಂದು ಆಗ್ರಹಿಸಿದರು. ಈ ವೇಳೆ ಬೆಂಗಳೂರಿನ ಲಗ್ಗೆರೆ ನಾರಾಯಣಸ್ವಾಮಿ ಮಾತನಾಡಿ, ಸ್ತ್ರೀ ಪೀಡಿತ ಹಾಗೂ ಹನಿಟ್ರ್ಯಾಪರ್ ಆಗಿ ಬಾಯಲ್ಲಿ ಹೇಳಲು ಅಸಹ್ಯವಾಗುವಂತಹ ಸಾಂಕ್ರಾಮಿಕ ರೋಗವನ್ನು ಹಬ್ಬಿಸುತ್ತಿರುವ ಶಾಸಕ ಮುನಿರತ್ನ ಪೊಲೀಸ್ ವಿಚಾರಣೆ ಎದುರಿಸುತ್ತಿದ್ದಾನೆ. ಇಷ್ಟಾದರೂ ಕೂಡ ನಾನೇನೂ ಮಾಡಿಲ್ಲ ಎಂದು ಪದೇ ಪದೆ ಕಾಲಭೈರವನ ಹೆಸರು ಹೇಳಿ ಆಣೆ ಪ್ರಮಾಣ ಮಾಡುತ್ತೇನೆಂದು ಮಾಧ್ಯಮದ ಮುಂದೆ ಹೇಳಿರುವುದರಿಂದ ನಾವೆಲ್ಲರೂ ಬಂದಿದ್ದೇವೆ ಎಂದರು.
ಮೈಸೂರಿನ ಕೆಆರ್‌ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ರೆ ತಪ್ಪಿಲ್ಲ: ಶಾಸಕ ಜಿ.ಟಿ.ದೇವೇಗೌಡ
ನಾವುಗಳು ಕೊಟ್ಟಿರುವ ದೂರುಗಳು ಸುಳ್ಳಲ್ಲ ಎಂದು ಪ್ರಮಾಣ ಮಾಡಲು ಇಲ್ಲಿಗೆ ಬಂದಿದ್ದೇವೆ. ನೀನೊಬ್ಬ ಸಾಚಾ ಯಾವುದೇ ದೌರ್ಜನ್ಯ, ಅತ್ಯಾಚಾರ, ದಲಿತರ ಜಾತಿ ನಿಂದನೆ ಮಾಡಿಲ್ಲ ಎನ್ನುವುದಾದರೆ ಬಂದು ಆಣೆ ಪ್ರಮಾಣ ಮಾಡು ನಾವು ಕಾಯುತ್ತೇವೆ ಎಂದು ಸವಾಲು ಹಾಕಿದರು. ಒಕ್ಕಲಿಗ ಸಮಾಜದ ನಾಯಕರಾದ ಆರ್.ಅಶೋಕ್, ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಕುಟುಂಬಗಳನ್ನು ಟಾರ್ಗೆಟ್ ಮಾಡಿ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸುವುದು ಶಾಸಕ ಮುನಿರತ್ನನ ಚಾಳಿಯಾಗಿದೆ. ಆತನೇ ತನ್ನ ಮೇಲೆ ಕೋಳಿ ಮೊಟ್ಟೆ ಹೊಡೆಸಿಕೊಂಡು ಒಕ್ಕಲಿಗ ಸಮುದಾಯದವರ ವಿರುದ್ಧ ಆರೋಪ ಮಾಡಿದ್ದಾನೆ ಎಂದು ದೂರಿದರು.
ಒಕ್ಕಲಿಗರು ಎಲ್ಲರಿಗೂ ಅನ್ನ ಕೊಡುತ್ತಾರೇ ಹೊರತು ಯಾರಿಗೂ ಹೊಡೆಯುವುದಿಲ್ಲ. ಎಲ್ಲ ಸಮುದಾಯದವರ ಜೊತೆ ಪ್ರೀತಿ ಸ್ನೇಹದಿಂದ ಇದ್ದೇವೆ. ಆದರೆ, ಅವನು ಮಾಡುತ್ತಿರುವ ಕೆಲಸ ಒಳ್ಳೆಯದಲ್ಲ ಎಂದು ಮುನಿರತ್ನ ವಿರುದ್ಧ ಕಿಡಿಕಾರಿದರು. ಮುನಿರತ್ನ ವಿರುದ್ಧ ನಾವು ಕೊಟ್ಟಿರುವ ಎಲ್ಲಾ ದೂರುಗಳಲ್ಲಿ ಸತ್ಯವಿದೆ. ಪೊಲೀಸ್ ತನಿಖೆಯಲ್ಲಿ ಆಚೆ ಬಂದಿರುವುದೂ ಕೂಡ ಸತ್ಯವಿದೆ. ಇದು ಸುಳ್ಳು ಎನ್ನುವುದಾದರೆ ಮಧ್ಯಾಹ್ನ 2 ಗಂಟೆ ನಂತರ ದೇವಸ್ಥಾನದ ಬಾಗಲು ತೆರೆದಾಗ ಬಂದು ಆಣೆ ಮಾಡಲಿ. ಇಲ್ಲದಿದ್ದರೆ ನಾವು ದೇವರ ದರ್ಶನ ಮಾಡಿ ಎಲ್ಲವನ್ನೂ ಭಗವಂತನಿಗೆ ಒಪ್ಪಿಸಿ ಹೋಗುತ್ತೇವೆ ಎಂದರು. ಹಿಂದೊಮ್ಮೆ ಮೂವರು ಹೆಣ್ಣು ಮಕ್ಕಳು ಇದೇ ರೀತಿ ಭಗವಂತನಿಗೆ ಒಪ್ಪಿಸಿ ಹೋಗಿದ್ದರಿಂದ ಒಂದು ತಿಂಗಳು ಜೈಲಿಗೆ ಹೋಗಿದ್ದಾನೆ. ಈ ಸಲ ಒಪ್ಪಿಸಿ ಹೋದರೆ ನ್ಯಾಯಾಲಯ ಆತನಿಗೆ ಮರಣದಂಡನೆ ವಿಧಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಸಮುದಾಯದ ವೇಲು ನಾಯಕ್ ಮಾತನಾಡಿ, ಕಳೆದ ಮೂರು ತಿಂಗಳಿಂದ ಶಾಸಕ ಮುನಿರತ್ನನ ಕರ್ಮಕಾಂಡಗಳು ಎಲ್ಲಾ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿವೆ. ಮಾಡಿರುವ ಹಳೆಯ ತಪ್ಪುಗಳನ್ನು ತಿದ್ದಿಕೊಂಡು ಒಳ್ಳೆಯ ಮನುಷ್ಯನಾಗಿ ಬದುಕುತ್ತೇನೆಂಬ ಮಾತು ಮುನಿರತ್ನನ ಬಾಯಲ್ಲಿ ಬರುತ್ತಿಲ್ಲ. ಮಾಡಿರುವುದನ್ನು ತಪ್ಪನ್ನು ಮಾಡಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾನೆ ಎಂದು ಏಕ ವಚನದಲ್ಲೆ ಕಿಡಿಕಾರಿದರು. ಅವನು ಎಷ್ಟೆಲ್ಲಾ ಹಗರಣ ಮಾಡಿ ಎಷ್ಟು ಜನರಿಗೆ ತೊಂದರೆ ಕೊಟ್ಟಿದ್ದಾನೆಂಬುದು ನಮಗೆ ಗೊತ್ತಿದೆ. ಕಾರ್ಪೊರೇಟರ್ ಮಾಡುವುದಾಗಿ ಮಹಿಳೆಯರಿಗೆ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ಕಣ್ಣಾರೆ ಕಂಡಿದ್ದೇವೆ. ಇದನ್ನು ನಾವು ಪ್ರಶ್ನೆ ಮಾಡಲು ಹೋದಾಗ ಜಾತಿ ನಿಂದನೆ ಮಾಡಿ ಅಪಮಾನಿಸಿದ್ದಾನೆ ಎಂದು ದೂರಿದರು.
ಅಕ್ರಮ ಹಣ ವರ್ಗಾವಣೆ ಪ್ರಕರಣ: ತೆಲಂಗಾಣ ಮಾಜಿ ಸಿಎಂ ಪುತ್ರ ರಾಮ್‌ರಾವ್‌ಗೆ ಇ.ಡಿ. ಸಮನ್ಸ್
ಬಹಿರಂಗ ಚರ್ಚೆಗೂ ಪಂಥಾಹ್ವಾನ: ಆದಿಚುಂಚನಗಿರಿ ಕ್ಷೇತ್ರಕ್ಕೆ ಶಾಸಕ ಮುನಿರತ್ನ ಬಂದು ಆಣೆ ಪ್ರಮಾಣ ಮಾಡಿದ ಬಳಿಕ ಬಹಿರಂಗ ಚರ್ಚೆಗೂ ಬರಲಿ. ಈ ದಿನ ಬರಲಿಲ್ಲವೆಂದರೆ ಅವರು ಬರುವ ದಿನವೇ ನಾವೂ ಕೂಡ ಸಿದ್ಧ ಇರ್ತೀವಿ. ಮಾಧ್ಯಮದ ಮುಂದೆ ಇಲ್ಲ ಅಂದ್ರೆ ಬಿಜೆಪಿ ಕಚೇರಿಯಲ್ಲಿ ಚರ್ಚೆಗೆ ಕರೆದೂ ನಾವು ಸಿದ್ಧವಿದ್ದೇವೆ ಎಂದು ಮತ್ತೊಂದು ಓಪನ್ ಚಾಲೆಂಜ್ ಮಾಡಿದರು. ಈ ವೇಳೆ ಗುತ್ತಿಗೆದಾರ ಚಲುವರಾಜು, ಸಿದ್ದೇಗೌಡ, ಭಗತ್‌ಸಿಂಗ್, ಮಂಜುಳ ನಾರಾಯಣಸ್ವಾಮಿ ಸೇರಿದಂತೆ ಶಾಸಕ ಮುನಿರತ್ನರಿಂದ ದೌರ್ಜನ್ಯಕ್ಕೊಳಗಾದ ಸಂತ್ರಸ್ತರು ಇದ್ದರು.