ಕೆಂಪಣ್ಣ ಶೀಘ್ರ ದಾಖಲೆ ನೀಡಲಿ: ಇಲ್ಲದಿದ್ರೆ ಶಿಕ್ಷೆ ಅನುಭವಿಸಲಿ: ಮುನಿರತ್ನ

By Kannadaprabha NewsFirst Published Jan 17, 2023, 11:26 AM IST
Highlights

ಗುತ್ತಿಗೆದಾರರ ಸಂಘದ ಅಧ್ಯಕ್ಷರು ಆದಷ್ಟುಬೇಗ ದಾಖಲೆ ಬಿಡುಗಡೆ ಮಾಡಲಿ. ಅವರಿಗೆ ನಾನು ಶುಭಕೋರುತ್ತೇನೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ. ಆದಷ್ಟು ಬೇಗ ದಾಖಲೆ ಬಿಡುಗಡೆ ಮಾಡಲಿ, ಇಲ್ಲದಿದ್ರೆ ಶಿಕ್ಷೆ ಅನುಭವಿಸಲಿ ಎಂದರು.

ಬೆಂಗಳೂರು (ಜ.17) : ಗುತ್ತಿಗೆದಾರರ ಸಂಘದ ಅಧ್ಯಕ್ಷರು ಆದಷ್ಟುಬೇಗ ದಾಖಲೆ ಬಿಡುಗಡೆ ಮಾಡಲಿ. ಅವರಿಗೆ ನಾನು ಶುಭಕೋರುತ್ತೇನೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದರು. ಸೋಮವಾರ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು, ಲೋಕಾಯುಕ್ತದಲ್ಲಿ ಮುನಿರತ್ನ ಅವರ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ದಾಖಲೆ ಒದಗಿಸುವಂತೆ ಆರ್‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಕುರಿತು ಅವರು ಪ್ರತಿಕ್ರಿಯಿಸಿದರು.

ಸಾರ್ವಜನಿಕ ಜೀವನದಲ್ಲಿ ಏನಾದರು ನ್ಯೂನತೆಗಳು, ತಪ್ಪುಗಳು ಇದ್ದರೆ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಅದನ್ನು ಪ್ರಶ್ನೆ ಮಾಡುವ ಅಧಿಕಾರವಿದೆ. ಕಾನೂನು ಚೌಕಟ್ಟಿನಲ್ಲಿ ಏನು ಉತ್ತರ ಕೊಡಬೇಕೋ ಅದನ್ನು ಕೊಡುತ್ತೇನೆ. ಲೋಕಾಯುಕ್ತಕ್ಕೆ ಹೋಗಿ ದೂರು ಕೊಡಲು ಮತ್ತು ದಾಖಲೆ ಕೇಳಲು ಕಾನೂನಿನಲ್ಲಿ ಅವಕಾಶವಿದೆ. ಅದನ್ನು ಅವರು ಮಾಡಿಕೊಳ್ಳಲಿ. ಆ ನಂತರ ಏನು ಉತ್ತರ ಕೊಡಬೇಕೋ ನಾನು ಕೊಟ್ಟೇ ಕೊಡುತ್ತೇನೆ ಎಂದು ಹೇಳಿದರು.

ಸಚಿವ ಮುನಿರತ್ನ ಆಸ್ತಿ ಮೂಲಕ್ಕೆ ಕೈ ಹಾಕಿದ ಕೆಂಪಣ್ಣ: ಮುಂದುವರೆದ ಜಟಾಪಟಿ

ಈಗಾಗಲೇ ಅವರ ವಿರುದ್ಧ ನಾನು ಮಾನನಷ್ಟಮೊಕದ್ದಮೆ ಹೂಡಿದ್ದೇನೆ. ಕಾನೂನಿನಲ್ಲಿ ಏನೆಲ್ಲಾ ಅವಕಾಶಗಳು ಇವೆಯೋ ಅಷ್ಟನ್ನು ಕೈಗೊಳ್ಳುತ್ತೇನೆ. ಅದನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಆದಷ್ಟುಬೇಗ ದಾಖಲೆ ಬಿಡುಗಡೆ ಮಾಡಲಿ. ಇಲ್ಲವೇ ಕಾನೂನು ಚೌಕಟ್ಟಿನಲ್ಲಿ ಶಿಕ್ಷೆ ಅನುಭವಿಸಲು ಸಿದ್ದರಾಗಲಿ. ದಾಖಲೆ ಕೊಟ್ಟರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ. ಇಲ್ಲದಿದ್ದರೆ ಶಿಕ್ಷೆಗೆ ಸಿಕ್ಕಿಕೊಳ್ಳುತ್ತಾರೆ ಎಂದರು.

ಕಾನೂನು ಎಲ್ಲರಿಗೂ ಒಂದೇ. ಕಾನೂನಿನಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವೇ ಇಲ್ಲ. ದಾಖಲೆಯನ್ನು ಆದಷ್ಟುಬೇಗ ಕೊಡಲಿ ಎಂದು ಬಯಸುತ್ತೇನೆ. ಕಾನೂನು ಚೌಕಟ್ಟಿನಲ್ಲಿ ಏನು ಕ್ರಮ ಕೈಗೊಳ್ಳಬೇಕೋ ಆ ಕಾರ್ಯ ಮಾಡುತ್ತೇನೆ ಎಂದರು. 

ತಿಪ್ಪಾರೆಡ್ಡಿ ವಿರುದ್ಧ ತನಿಖೆಗೆ ತನಿಖೆಗೆ ರಘು ಆಚಾರ್‌ ಆಗ್ರಹ

ಗುತ್ತಿದಾರರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಂಜುನಾಥ್‌ ಅವರು ದಾಖಲೆ ಸಮೇತ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಕಮಿಷನ್‌ ಆರೋಪ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ರಘು ಆಚಾರ್‌ ಆಗ್ರಹಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿತ್ರದುರ್ಗದಲ್ಲಿ ಭ್ರಷ್ಟಾಚಾರ ಕುರಿತು ದನಿ ಎತ್ತಿದವರ ವಿರುದ್ಧ ದೂರು ದಾಖಲಿಸುವ ಮೂಲಕ ಶಾಸಕರು ಬೆದರಿಕೆ ಹಾಕುತ್ತಿದ್ದಾರೆ. ಒಂದು ವೇಳೆ ಗುತ್ತಿಗೆದಾರರಿಗೆ ಏನಾದರೂ ತೊಂದರೆಯಾದರೆ ಶಾಸಕರೇ ಅದಕ್ಕೆ ನೇರ ಹೊಣೆಗಾರರು. ಶಾಸಕರ ವಿರುದ್ಧ ಆರೋಪ ಮಾಡಿರುವ ಗುತ್ತಿಗೆದಾರರಿಗೆ ಸೂಕ್ತ ರಕ್ಷಣೆ ನೀಡಬೇಕು. ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಶಾಸಕರ ಮೇಲೆ ಆರೋಪ ಮಾಡಿರುವುದರಿಂದ ಕಾಂಗ್ರೆಸ್‌ ಪ್ರತಿಕ್ರಿಯೆ ನೀಡುತ್ತಿದೆ. ಯಾವುದೇ ದಾಖಲೆಗಳಿಲ್ಲದೆ ನಾವ್ಯಾರೂ ದೂರುವುದಿಲ್ಲ ಎಂದು ತಿಳಿಸಿದರು.

ಚಿತ್ರದುರ್ಗ ನಗರದಲ್ಲಿ ಕೈಗೆತ್ತಿಕೊಳ್ಳಲಾದ ಡಿವೈಡರ್‌ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಜನರಿಂದ ಗಂಭೀರ ಆರೋಪಗಳು ಕೇಳಿ ಬಂದಿದೆ. ಹೀಗಾಗಿ ಸರ್ಕಾರ ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು. ಕಳೆದ ಹತ್ತು ತಿಂಗಳಿನಿಂದ ಚಿತ್ರದುರ್ಗ ನಗರ, ಸುತ್ತ ಮುತ್ತಲ ಹತ್ತಾರು ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಕ್ಷೇತ್ರ ಪ್ರವಾಸದ ವೇಳೆ ಜನರು ನನ್ನ ಬಳಿ ಶಾಸಕ ಜಿ.ಎಚ್‌ ತಿಪ್ಪಾರೆಡ್ಡಿ ಅವರ ಮೇಲೆ ಕಮೀಷನ್‌ ಆರೋಪ ಮಾಡಿದ್ದಾರೆ ಎಂದರು.

25 ರಿಂದ 40 ಪರ್ಸೆಂಟ್‌ವರೆಗೆ ಕಮಿಷನ್‌ ಕೇಳುತ್ತಾರೆ ಎಂದಿದ್ದಾರೆ. ನಮ್ಮೂರಿನ ರಸ್ತೆಗಳು ಸರಿಯಿಲ್ಲ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಗುತ್ತಿಗೆದಾರರು ಕೂಡಾ ತಿಪ್ಪಾರೆಡ್ಡಿ ಅವರಿಂದ ಅನುಭವಿಸಿರುವ ಕಮಿಷನ್‌ ಕಿರುಕುಳದ ಬಗ್ಗೆ ಆರೋಪಿಸಿದ್ದಾರೆ ಎಂದರು.

ಸಿದ್ದರಾಮಯ್ಯಗೆ ಮುಖಂಡರು ದಾರಿ ತಪ್ಪಿಸುತ್ತಿದ್ದಾರೆ: ಸಚಿವ ಮುನಿರತ್ನ

ಎಲ್ಲೆಡೆ ರಸ್ತೆಗಳು ಗುಂಡಿ ಬಿದ್ದಿವೆ. ಚಿತ್ರದುರ್ಗ ನಗರದಲ್ಲಿ ಅವೈಜ್ಞಾನಿಕ ರಸ್ತೆ ವಿಭಜಕಗಳಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಹಲವು ಬಾರಿ ಅಪಘಾತಗಳು ಸಂಭವಿಸಿದ್ದು, ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಕಾಮಗಾರಿಗಳು ತೀರಾ ಕಳಪೆಯಾಗಿದ್ದು, ಈ ಬಗ್ಗೆ ನನ್ನ ಬಳಿ ಹಲವಾರು ದಾಖಲೆಗಳಿವೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಾಗಿರುವ ಭ್ರಷ್ಟಾಚಾರದ ಬಗ್ಗೆ ಪ್ರತಿಯೊಬ್ಬ ಮತದಾರರ ಮನೆ ಬಾಗಿಲಿಗೆ ಮಾಹಿತಿ ತಲುಪಿಸುತ್ತೇವೆ ಎಂದರು.

click me!