ಲಷ್ಕರೆ-ಎ-ತಯ್ಯಬಾ ಸೇರಲು ಸಂಚು; ಶಿರಸಿ ಮೂಲದ ಉಗ್ರನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ; ಎನ್‌ಐಎ ಮಹತ್ವದ ತೀರ್ಪು

Published : Jan 23, 2026, 12:13 AM IST
 LeT Conspiracy Sirsi Terrorist Sentenced to 10 Years Rigorous Imprisonment

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಸಯ್ಯದ್ ಮಹಮ್ಮದ್ ಇದ್ರಿಸ್ ಎಂಬ ಯುವಕನಿಗೆ ಲಷ್ಕರೆ-ಎ-ತಯ್ಯಬಾ ಉಗ್ರ ಸಂಘಟನೆಗೆ ಯುವಕರನ್ನು ನೇಮಿಸುತ್ತಿದ್ದ ಆರೋಪದ ಮೇಲೆ ವಿಶೇಷ ಎನ್‌ಐಎ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಪಶ್ಚಿಮ ಬಂಗಾಳದಲ್ಲಿ ದಾಖಲಾಗಿದ್ದ ಈ ಪ್ರಕರಣದ ತನಿಖೆ ನಡೆಸಿದ ಎನ್‌ಐಎ.

ಕಾರವಾರ, ಉತ್ತರಕನ್ನಡ(ಜ.22): ದೇಶವಿರೋಧಿ ಕೃತ್ಯ ಹಾಗೂ ಭಯೋತ್ಪಾದನಾ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಯುವಕನಿಗೆ ವಿಶೇಷ ಎನ್‌ಐಎ (NIA) ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಉಗ್ರ ಸಂಘಟನೆಗೆ ನೇಮಕಾತಿ: ಯುಎಪಿಎ ಅಡಿ ಶಿಕ್ಷೆ

ಲಷ್ಕರೆ-ಎ-ತಯ್ಯಬಾ (LeT) ಉಗ್ರ ಸಂಘಟನೆಗೆ ಯುವಕರನ್ನು ಸೆಳೆಯುವ ಮತ್ತು ತೀವ್ರವಾದದತ್ತ ಪ್ರಚೋದಿಸುವ ಗಂಭೀರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಯ್ಯದ್ ಮಹಮ್ಮದ್ ಇದ್ರಿಸ್ ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಭಾರತೀಯ ದಂಡ ಸಂಹಿತೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆಯ ಜೊತೆಗೆ 70 ಸಾವಿರ ರೂಪಾಯಿ ದಂಡವನ್ನೂ ವಿಧಿಸಿದೆ.

ಪಶ್ಚಿಮ ಬಂಗಾಳದ ಆಪರೇಷನ್; ಬಯಲಾಯ್ತು ಉಗ್ರ ಜಾಲ!

ಈ ಪ್ರಕರಣವು ಮೊದಲು 2020ರ ಏಪ್ರಿಲ್‌ನಲ್ಲಿ ಪಶ್ಚಿಮ ಬಂಗಾಳ ಪೊಲೀಸರಿಂದ ದಾಖಲಾಗಿತ್ತು. ನಂತರ ತನಿಖೆಯನ್ನು ಕೈಗೆತ್ತಿಕೊಂಡ ಎನ್‌ಐಎ, ಶಿರಸಿಯಲ್ಲಿ ಸಯ್ಯದ್ ಮಹಮ್ಮದ್ ಇದ್ರಿಸ್ ಹಾಗೂ ಜಮ್ಮು-ಕಾಶ್ಮೀರದ ಅಲ್ತಾಫ್ ಅಹ್ಮದ್ ರಾಥೆರ್ ಎಂಬುವವರನ್ನು ಬಂಧಿಸಿತ್ತು. ಇವರು ತಾನಿಯಾ ಪರ್ವೀನ್ ಎಂಬ ಮಹಿಳಾ ಉಗ್ರಳೊಂದಿಗೆ ಸೇರಿ ಪಶ್ಚಿಮ ಬಂಗಾಳದಲ್ಲಿ ಲಷ್ಕರ್ ಘಟಕ ಸ್ಥಾಪಿಸಲು ಸಂಚು ರೂಪಿಸಿದ್ದರು. ತಾನಿಯಾ ಬಂಧನದ ಬಳಿಕ ಈ ಜಾಲದ ಕರಾಳ ಮುಖ ಬಯಲಿಗೆ ಬಂದಿತ್ತು.

ಕೂಲಿ ಕೆಲಸದಿಂದ ಉಗ್ರ ಸಂಘಟನೆಯ ವಾಟ್ಸಾಪ್ ಗ್ರೂಪ್‌ವರೆಗೆ!

ಆರಂಭದಲ್ಲಿ ಗೋವಾದಲ್ಲಿ ಗ್ಲಾಸ್ ಕಟ್ಟಿಂಗ್ ಕೆಲಸ ಮಾಡುತ್ತಿದ್ದ ಇದ್ರಿಸ್, ನಂತರ ಶಿರಸಿಯ ಅರೆಕೊಪ್ಪದಲ್ಲಿ ಕೂಲಿ ಕೆಲಸ ಮಾಡುತ್ತಿದ್ದನು. ಕೋವಿಡ್ ಸಮಯದಲ್ಲಿ ತನ್ನ ಅಣ್ಣನ ಚಿಕನ್ ಸೆಂಟರ್ ನೋಡಿಕೊಳ್ಳುತ್ತಿದ್ದ ಈತ, ಸದ್ದಿಲ್ಲದೆ ಉಗ್ರ ಸಂಘಟನೆಗಳ 150 ಸದಸ್ಯರಿದ್ದ ವಾಟ್ಸಾಪ್ ಗ್ರೂಪ್ ಸೇರಿಕೊಂಡಿದ್ದ. ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸುವ ದೇಶದ್ರೋಹಿ ಯೋಜನೆ ಹೊಂದಿದ್ದ ಈತ, ಹೊಸ ಯುವಕರನ್ನು ಉಗ್ರ ಸಂಘಟನೆಗೆ ಸೇರಿಸಲು ಹಣವನ್ನೂ ಪಡೆಯುತ್ತಿದ್ದ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

KRS ಪಕ್ಷದ ಕಾರ್ಯಕರ್ತರಿಗೆ ಡಿಜಿ-ಐಜಿಪಿ ಶಾಕ್; ರಾಜ್ಯಾದ್ಯಂತ ಕೇಸ್ ದಾಖಲಿಸಲು ಆದೇಶ!
ಕೊಪ್ಪಳದ ಜಮೀನಿನಲ್ಲಿ ಅಚ್ಚರಿ ಘಟನೆ: ಹುತ್ತದೊಳಗೆ ಅಲಾಯಿ ದೇವರು ಪತ್ತೆ!