
ಬೆಂಗಳೂರು (ಜ.22): ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ಕಾರ್ಯಕರ್ತರ 'ದುಂಡಾವರ್ತನೆ'ಗೆ ಬ್ರೇಕ್ ಹಾಕಲು ರಾಜ್ಯ ಪೊಲೀಸ್ ಇಲಾಖೆ ಈಗ ಆಕ್ಷನ್ ಮೋಡ್‌ಗೆ ಇಳಿದಿದೆ. ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸುವ ಹಾಗೂ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುವ ಕಾರ್ಯಕರ್ತರ ವಿರುದ್ಧ ರಾಜ್ಯಾದ್ಯಂತ ಪ್ರಕರಣ ದಾಖಲಿಸುವಂತೆ ಪೊಲೀಸ್ ಮಹಾನಿರ್ದೇಶಕರು (DG-IGP) ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಕಚೇರಿಗಳಿಗೆ ನುಗ್ಗಿ ಅಧಿಕಾರಿಗಳ ಜೊತೆ ದುಂಡಾವರ್ತನೆ ಮಾಡುವುದು, ಅವರಿಗೆ ಹಾರ ಹಾಕಿ ಸನ್ಮಾನ ಮಾಡುವ ನೆಪದಲ್ಲಿ ಸಾರ್ವಜನಿಕವಾಗಿ ಅವಮಾನ ಮಾಡುವುದು ಹಾಗೂ ಪೊಲೀಸ್ ಠಾಣೆಗಳ ಒಳಗೆ ಗಲಾಟೆ ಮಾಡುವ ಕೃತ್ಯಗಳು ಇತ್ತೀಚೆಗೆ ಹೆಚ್ಚಾಗಿವೆ. ಈ ಎಲ್ಲವನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿ-ಐಜಿಪಿ ಅವರು, ರಾಜ್ಯದ ಎಲ್ಲಾ ವಲಯಗಳ ಎಸ್ಪಿಗಳು, ಕೆಜಿಎಫ್ ಹಾಗೂ ರೈಲ್ವೇ ಪೊಲೀಸರಿಗೆ ಪತ್ರ ಬರೆದಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದಾರೆ.
ಇತ್ತೀಚೆಗಷ್ಟೇ ಚನ್ನಪಟ್ಟಣದ ಟೌನ್ ಇನ್ಸ್‌ಪೆಕ್ಟರ್ ರವಿಕಿರಣ್ ಅವರೊಂದಿಗೆ ಕೆ.ಆರ್.ಎಸ್ ಕಾರ್ಯಕರ್ತರು ಕಿರಿಕ್ ಮಾಡಿಕೊಂಡಿದ್ದರು. 'ಒನ್ ವೇ' ರಸ್ತೆಯಲ್ಲಿ ಬಸ್ ತಂದು ನಿಯಮ ಉಲ್ಲಂಘಿಸಿದ್ದಲ್ಲದೆ, ಅದನ್ನು ಪ್ರಶ್ನಿಸಿದ ಪೊಲೀಸರ ಜೊತೆಗೇ ಗಲಾಟೆ ನಡೆಸಿದ್ದರು ಎಂಬ ಆರೋಪ. ಈ ಕುರಿತು ಬೆಂಗಳೂರು ದಕ್ಷಿಣ ಎಸ್ಪಿ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸುದೀರ್ಘ ಪತ್ರ ಬರೆದು ವಿವರ ನೀಡಿದ್ದರು. ಈ ಘಟನೆಯನ್ನು ಮೂಲವಾಗಿಟ್ಟುಕೊಂಡು ಈಗ ಇಡೀ ರಾಜ್ಯದ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ರವಾನೆಯಾಗಿದೆ.
ಎಲ್ಲಾ ಇಲಾಖೆಗಳಿಗೂ ಅನ್ವಯವಾಗಲಿದೆ ಹೊಸ ರೂಲ್ಸ್
ಕೇವಲ ಪೊಲೀಸ್ ಇಲಾಖೆ ಮಾತ್ರವಲ್ಲದೆ, ಎಲ್ಲಾ ಸರ್ಕಾರಿ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೂ ಈ ಕುರಿತು ಆದೇಶ ನೀಡಲು ಮನವಿ ಮಾಡಲಾಗಿದೆ. ಯಾವುದೇ ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಅಂತಹ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಿಸಲು ನಿರ್ಧರಿಸಲಾಗಿದೆ. ಅಧಿಕಾರಿಗಳ ಘನತೆಗೆ ಧಕ್ಕೆ ತರುವ ಅಥವಾ ಕಾನೂನು ಕೈಗೆತ್ತಿಕೊಳ್ಳುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಇಲಾಖೆ ರವಾನಿಸಿದೆ.
ಕೆಆರ್‌ಎಸ್ ಕಾರ್ಯಕರ್ತರು ಆಕ್ರೋಶ
ಇದೀಗ ಕೆಆರ್‌ಎಸ್ ಕಾರ್ಯಕರ್ತರ ಪ್ರಶ್ನೆ, ಭ್ರಷ್ಟಾಧಿಕಾರಿಗಳನ್ನ ಪ್ರಶ್ನಿಸಿದರೆ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿಸಿ ಕೇಸ್ ಮಾಡುತ್ತೀರಿ ಆದರೆ ಶಿಡ್ಲಘಟ್ಟದ ಮಹಿಳಾ ಅಧಿಕಾರಿಗೆ ಅವಾಚ್ಯವಾಗಿ ನಿಂದಿಸಿದರೂ ಇದುವರೆಗೂ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನ ಪೊಲೀಸರು ಯಾಕೆ ಬಂಧಿಸಲಾಗಿಲ್ಲ? ಇದು ಕರ್ತವ್ಯಕ್ಕೆ ಅಡ್ಡಿಪಡಿಸಿದಂತಲ್ಲವೇ? ಮಹಿಳಾ ಅಧಿಕಾರಿಗೆ ಕೆಟ್ಟ ಕೊಳಕು ಭಾಷೆಯಲ್ಲಿ ಮಾತನಾಡಿದರೂ ಯಾಕೆ ಬಂಧಿಸಲು ಹಿಂದೇಟು? ಪೊಲೀಸ್ ಕಾನೂನುಗಳು ಕೇವಲ ದುರ್ಬಲ ಮೇಲೆ, ಅನ್ಯಾಯ ಪ್ರಶ್ನಿಸುವವರ ಮೇಲೆಯೇ? ಇದಕ್ಕೆ ಆದೇಶ ಮಾಡುವ ಪೊಲೀಸ್ ಅಧಿಕಾರಿಗಳು ಏನು ಉತ್ತರ ಕೊಡ್ತಾರೆ? ಮಹಿಳಾ ಅಧಿಕಾರಿಗೆ ನಿಂದಿಸಿರುವ ಕಾಂಗ್ರೆಸ್ ಮುಖಂಡನ ಬಂಧಿಸುವ ಧೈರ್ಯ ಪೊಲೀಸರಿಗಿಲ್ಲವೇ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ