15 ದಿನದಿಂದ ಜಿಗಣಿ ಸುತ್ತ ಮುತ್ತ ಕಾಣಿಸಿಕೊಳ್ಳುತ್ತಿದ್ದ ಚಿರತೆ ಈಗ ದಿಡೀರ್ ಐಟಿ ಬಿಟಿ ಸಿಟಿ ಎಲೆಕ್ಟ್ರಾನಿಕ್ ಸಿಟಿ ಬಿಟಿ ಬಳಿ ಪ್ರತ್ಯಕ್ಷ ಆಗಿದ್ದು ಮತ್ತೆ ಆತಂಕ ಸೃಷ್ಟಿಸಿದೆ.
ಬೆಂಗಳೂರು (ಸೆ.17): ಹೀಗೆ ಹೆದ್ದಾರಿಯನ್ನು ದಾಟಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುತ್ತಿರುವ ಚಿರತೆ, ಮತ್ತೊಂದು ಕಡೆ ಚಿರತೆ ಬಂದ ಆತಂಕದಲ್ಲಿ ಇರುವ ಎನ್ ಟಿ ಟಿ ಎಫ್ ಆವರಣದ ಉದ್ಯೋಗಿಗಳು. ಹೌದು ಬೆಂಗಳೂರಿನಲ್ಲಿ ಚಿರತೆಗೂ ಹಾಗೂ ಜನರಿಗೂ ಅವಿನಾಭಾವ ಸಂಬಂಧ ಎಂಬಂತಾಗಿದೆ ಇತ್ತೀಚಿನ ಚಿರತೆಗಳ ಓಡಾಟ. ಕಳೆದ 15 ದಿನದಿಂದ ಜಿಗಣಿ ಕೈಗಾರಿಕಾ ಪ್ರದೇಶದ ಸುತ್ತಮುತ್ತ ಕಾಣಿಸಿಕೊಂಡಿದ್ದ ಚಿರತೆ ಈಗ ದಿಡೀರ್ ಐಟಿಬಿಟಿ ಹಬ್ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕಾಣಿಸಿಕೊಂಡಿದೆ.
ನಿನ್ನೆ ರಾತ್ರಿ 3:00 ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿ ಟೋಲ್ ಬಳಿ ಎನ್.ಟಿ ಟಿ.ಎಫ್ ಆವರಣದ ಒಳಗೆ ಜಂಪ್ ಮಾಡಿದ್ದ ಚಿರತೆ ಮತ್ತೆ ಅದೇ ರಸ್ತೆಗೆ ವಾಪಸ್ ಬಂದು ಇನ್ನೊಂದು ಬಾಗಕ್ಕೆ ಜಿಗಿದಿದೆ. ಚಿರತೆ ಬಂದು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವುದನ್ನು ನೋಡಿ ಐಟಿ ಬಿಟಿ ಉದ್ಯೋಗಿಗಳು ಆತಂಕಕ್ಕೀಡಾಗಿದ್ದಾರೆ.
ಬೆಂಗ್ಳೂರಿನ ಜಿಗಣಿಯಲ್ಲಿ ಚಿರತೆ ಓಡಾಟ: ಮನೆಯಿಂದ ಹೊರಬಾರದೆ ಜನರ ಪೀಕಲಾಟ..!
ಇನ್ನು ಮೊದಲೇ ಹೇಳಬೇಕಾ ಐಟಿಬಿಟಿ ಉದ್ಯೋಗಿಗಳು ಹೆಚ್ಚಾಗಿರುವ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಚಿರತೆ ಬಂದಿದೆ ಎನ್ನುವ ಮಾಹಿತಿ ಗೊತ್ತಾಗುತ್ತಿದ್ದಂತೆ ಕೂಡಲೇ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಎನ್‌ಟಿಟಿಎಫ್ ಆವರಣ ಹಾಗೂ ಸುತ್ತಮುತ್ತ ಚಿರತೆಗಾಗಿ ಹುಡುಕಾಟ ನಡೆಸಿದ್ದಾರೆ ಕಾಲೇಜಿನ ಆವರಣದ ಒಳಗು ಇರುವ ಸಿಸಿಟಿವಿ ಹಾಗೂ ಕೊಠಡಿಗಳನ್ನು ಜಾಲಾಡಿದ್ದಾರೆ, ಆದರೆ ಚಾಲಾಕಿ ಚಿರತೆ ಮಾತ್ರ ಪತ್ತೆ ಆಗಿಲ್ಲ. ಇಂದು ಸಂಜೆ ಮತ್ತೆ ಚಿರತೆಗಾಗಿ ಹುಡುಕಾಟ ನಡೆಸುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ ಎಂದು ಎನ್‌ಟಿಟಿಎಫ್ ಪ್ರಿನ್ಸಿಪಲ್ ಸುನಿಲ್ ಜೋಶಿ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಚಿರತೆ ದಾಳಿಗೆ ಹಸು ಬಲಿ: ಅರಣ್ಯಾಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
ಒಟ್ಟಿನಲ್ಲಿ ಆಹಾರ ಅರಸಿ ಆಗಾಗ ಕೈಗಾರಿಕಾ ಪ್ರದೇಶ ಹಾಗೂ ಪಟ್ಟಣದತ್ತ ಬರುತ್ತಿರುವ ಚಿರತೆಗಳು ಆತಂಕ ಸೃಷ್ಟಿ ಮಾಡುತ್ತಿದ್ದು, ಜನ ಕೂಡ ಎಚ್ಚರಿಕೆಯಿಂದ ಇರಬೇಕಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಆದಷ್ಟು ಬೇಗ ಚಿರತೆಯನ್ನು ಸೆರೆಹಿಡಿಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.