
ಬೆಂಗಳೂರು: ಆಡಳಿತರೂಢ ಕಾಂಗ್ರೆಸ್ ಪಕ್ಷವು ಗೆಲುವಿಗೆ ಬೇಕಾಗಿರುವ ಮ್ಯಾಜಿಕ್ ನಂಬರ್ ಸಾಧಿಸುವ ವಿಶ್ವಾಸದೊಂದಿಗೆ ಕೆಪಿಸಿಸಿ ಖಚಾಂಚಿ ವಿನಯ್ ಕಾರ್ತಿಕ್ ಅವರನ್ನು ಮುಂಬರುವ ವಿಧಾನ ಪರಿಷತ್ ಚುನಾವಣೆಗೆ ತನ್ನ ಐದನೇ ಅಭ್ಯರ್ಥಿಯಾಗಿ ಘೋಷಿಸಿದೆ.
ಮೊದಲ ಪಟ್ಟಿಯಲ್ಲಿ 4 ಮಂದಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಕಾಂಗ್ರೆಸ್ ಪಕ್ಷವು, ಶುಕ್ರವಾರ ಸಂಜೆ 5ನೇ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿರುವುದಾಗಿ ಪ್ರಕಟಿಸಿದೆ.
ಪ್ರಸ್ತುತ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಆಯ್ಕೆಯಾಗುವ ಏಳು ಸ್ಥಾನಗಳಿಗೆ ಚುನಾವಣೆ ನಡೆಯಲಿವೆ.
ಈಗ ವಿಧಾನಸಭೆಯ ಸಂಖ್ಯಾಬಲವು 222 ಆಗಿದ್ದು, ನಿಯಮಗಳ ಪ್ರಕಾರ ಒಬ್ಬ ವಿಧಾನಪರಿಷತ್ ಸದಸ್ಯ ಗೆಲ್ಲಲು 28 (27.5) ಮತಗಳು ಅಗತ್ಯವಿದೆ. ಈ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತನ್ನ 5 ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು 140 ಮತಗಳ ಅಗತ್ಯವಿದೆ. ಕಾಂಗ್ರೆಸ್ ಬಳಿ 135 ಶಾಸಕರು, ಇಬ್ಬರು ಪಕ್ಷೇತರರು ಹಾಗೂ ದರ್ಶನ್ ಪುಟ್ಟಣ್ಣಯ್ಯ ಸೇರಿ 138 ಸಂಖ್ಯಾಬಲ ಇದೆ.
ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಎಸ್.ಟಿ. ಸೋಮಶೇಖರ್, ಶಿವರಾಂ ಹೆಬ್ಬಾರ್, ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ವಿಪ್ ನೀಡಲು ಬರುವುದಿಲ್ಲ. ಹೀಗಾಗಿ ಅವರಲ್ಲಿ ಇಬ್ಬರನ್ನು ಸೆಳೆದರೂ ಕಾಂಗ್ರೆಸ್‌ಗೆ ಅವಕಾಶ ಸಿಗಲಿದೆ. ಅವರ ಮತ ಪಡೆಯದಿದ್ದರೂ ಅವರು ಚುನಾವಣೆ ಮತದಾನದಲ್ಲಿ ಭಾಗವಹಿಸದಿದ್ದರೆ ಒಟ್ಟು ಚಲಾವಣೆಯಾಗುವ ಮತಗಳ ಮೇಲೆ ಒಂದು ಸ್ಥಾನಕ್ಕೆ ಬೇಕಿರುವ ಮತಗಳ ಅಗತ್ಯ ಸಂಖ್ಯೆ ಕಡಿಮೆಯಾಗಲಿದೆ. ಆಗಲೂ ಕಾಂಗ್ರೆಸ್ ಸುಲಭವಾಗಿ ಗೆಲುವು ಸಾಧಿಸಬಹುದು.
ಮತ್ತೊಂದೆಡೆ ಜೆಡಿಎಸ್ ನಾಯಕರ ಕುರಿತು ಪಕ್ಷದ ನಾಯಕ ಜಿ.ಟಿ. ದೇವೇಗೌಡ ಅವರ ಮುನಿಸು ಮುಂದುವರೆದಿದ್ದು, ಅವರು ಚುನಾವಣೆಗೆ ಗೈರಾದರೂ ಕಾಂಗ್ರೆಸ್‌ಗೆ ಲಾಭವಾಗಬಹುದು.
ಮತ್ತೊಂದೆಡೆ ಬಿಜೆಪಿಗೆ 62 ಹಾಗೂ ಜೆಡಿಎಸ್‌ಗೆ 18 ಸದಸ್ಯರ ಬಲ ಇದೆ. ಬಿಜೆಪಿಯವರು ಯಾವುದೇ ಗೊಂದಲ ಬೇಡ ಎಂದು ಇಬ್ಬರು ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಿದರೆ, ಕಾಂಗ್ರೆಸ್‌ನ 5 ಅಭ್ಯರ್ಥಿಗಳೂ ಸಹ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೊದಲೇ ಸುಳಿವು ನೀಡಿದ್ದ ಡಿಕೆಶಿ:ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನ ಪರಿಷತ್ ಚುನಾವಣೆಗೆ ತಮ್ಮ ಪಕ್ಷದಿಂದ ಐದನೇ ಅಭ್ಯರ್ಥಿಯನ್ನೂ ಕಣಕ್ಕಿಳಿಸುವುದಾಗಿ ಗುರುವಾರವಷ್ಟೇ ಹೇಳಿಕೆ ನೀಡಿದ್ದರು.
ಇದರ ಬೆನ್ನಲ್ಲೇ ಅಭ್ಯರ್ಥಿಯ ಘೋಷಣೆಯಾಗಿದೆ. ಮುಖ್ಯಮಂತ್ರಿಯವರ ಆಪ್ತ ವಲಯದ ವಿನಯ್ ಕಾರ್ತಿಕ್ ಅವರನ್ನು 5ನೇ ಅಭ್ಯರ್ಥಿಯಾಗಿ ಪಕ್ಷ ಘೋಷಿಸಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆಯಲ್ಲಿ ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದು. ಜೊತೆಗೆ ಇನ್ನೂ ಒಂದು ಸ್ಥಾನ ಗೆಲ್ಲಲು ಕೆಲವು ಮತಗಳಷ್ಟೇ ಕೊರತೆಯಾಗುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ನಾಲ್ಕು ಅಭ್ಯರ್ಥಿಗಳನ್ನು ಘೋಷಿಸಿತ್ತು. ಬಿ.ಕ.ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರ, ಪಿ.ವಿ.ಮೋಹನ್ ಮತ್ತು ಶಿವಣ್ಣ ಮಳವಳ್ಳಿ ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಿತ್ತು.
ಇದೀಗ ಗೆಲುವಿನ ಲೆಕ್ಕಾಚಾರದಲ್ಲಿ ಐದನೇ ಅಭ್ಯರ್ಥಿಯಾಗಿ ವಿನಯ್ ಕಾರ್ತಿಕ್ ಅವರನ್ನು ಕಣಕ್ಕಿಳಿಸಲು ಘೋಷಣೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ