
ಬೆಂಗಳೂರು (ಜೂ.05): ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಸಚಿವ ಸಂಪುಟ ರಚನೆಯಾಗಿದ್ದರೂ, 'ಖಾತೆ' ಹಂಚಿಕೆಯ ವಿಚಾರ ಈಗ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಪ್ರಮುಖ ಖಾತೆ ಸಿಗಲಿಲ್ಲ ಎಂಬ ಕಾರಣಕ್ಕೆ ಹಿರಿಯ ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದರೆ, ಇತ್ತ ಸಚಿವ ಸ್ಥಾನದ ಆಕಾಂಕ್ಷಿಗಳು 'ಅವರಿಗೆ ಬೇಡವೆಂದರೆ ನಮಗೆ ಕೊಡಿ' ಎಂದು ದಾಳ ಉರುಳಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ನಾಯಕ ರಾಹುಲ್ ಗಾಂಧಿ ಅವರು ಮನವೊಲಿಕೆಗೆ ಪ್ರಯತ್ನ ಮಾಡಿ ಇಲ್ಲವಾದರೆ ರಾಜೀನಾಮೆ ಅಕ್ಸೆಪ್ಟ್ ಮಾಡಿ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದಾರೆ.
ಸಾರಿಗೆ ಖಾತೆ ನೀಡಿದ್ದಕ್ಕೆ ತೀವ್ರ ಅಸಮಾಧಾನಗೊಂಡಿರುವ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಈಗ 'ರೆಬಲ್' ಅವತಾರವೆತ್ತಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ (Bengaluru Development) ಖಾತೆಗಾಗಿ ಪಟ್ಟು ಹಿಡಿದಿರುವ ಅವರು, ಈಗ ಯಾರ ಕೈಗೂ ಸಿಗದಂತೆ ನಾಪತ್ತೆಯಾಗಿದ್ದಾರೆ. ಬೆಂಗಳೂರಿನ ಅತ್ತಿಬೆಲೆ ಬಳಿಯ 'ಲಾ ಕ್ಲಾಸಿಕ್' ಹೋಟೆಲ್‌ನಲ್ಲಿ ತಮ್ಮ ಆಪ್ತರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ರೆಡ್ಡಿ, ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ಖಾಸಗಿ ಕಾರಿನಲ್ಲಿ ತಮಿಳುನಾಡಿನತ್ತ ಪ್ರಯಾಣ ಬೆಳೆಸಿದ್ದಾರೆ. ಪಕ್ಷದ ನಾಯಕರು ಮನವೊಲಿಸಲು ಬರಬಹುದು ಎಂಬ ಮುನ್ಸೂಚನೆಯಿಂದ ಅವರು ಈ ಹಾದಿ ಹಿಡಿದಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ, ತಮಗೆ ನೀಡಲಾಗಿರುವ ಖಾತೆಯ ಬಗ್ಗೆ ಹಿರಿಯ ನಾಯಕ ಕೆ.ಹೆಚ್. ಮುನಿಯಪ್ಪ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ನಾನು ಈ ಖಾತೆಯ ಚಾರ್ಜ್ ತೆಗೆದುಕೊಳ್ಳುವುದಿಲ್ಲ' ಎಂದು ಹಠ ಹಿಡಿದಿರುವ ಅವರು, ದೆಹಲಿಯಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ತಮ್ಮ ನೋವು ತೋಡಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, 'ಈಗಲೇ ಗೊಂದಲ ಮಾಡಬೇಡಿ, ಎಲ್ಲವನ್ನೂ ಬಗೆಹರಿಸೋಣ' ಎಂದು ಸಮಾಧಾನಪಡಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುನಿಯಪ್ಪ ಅವರ ಅಸಮಾಧಾನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. 'ಖಾತೆ ಹಂಚಿಕೆಯನ್ನು ಕೇವಲ ಹಿರಿತನದ ಆಧಾರದ ಮೇಲೆ ಮಾಡಲಾಗುವುದಿಲ್ಲ. ಹೈಕಮಾಂಡ್ ಎಲ್ಲಾ ಆಯಾಮಗಳನ್ನು ಗಮನಿಸಿ ತೀರ್ಮಾನ ಮಾಡಿದೆ. ಸಚಿವರಲ್ಲಿ ಅಸಮಾಧಾನವಿದ್ದರೆ ಅದನ್ನು ಹೈಕಮಾಂಡ್ ಹಂತದಲ್ಲೇ ಬಗೆಹರಿಸಲಾಗುತ್ತದೆ' ಎಂದು ಹೇಳುವ ಮೂಲಕ ಪರೋಕ್ಷವಾಗಿ ಖಾತೆ ಬದಲಾವಣೆ ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಈ ಎಲ್ಲಾ ಗೊಂದಲಗಳ ನಡುವೆ ಶಾಂತಿ ನಗರದ ಶಾಸಕ ಎನ್.ಎ. ಹ್ಯಾರಿಸ್ ಹೊಸ ದಾಳ ಉರುಳಿಸಿದ್ದಾರೆ. 'ಯಾರಿಗೆ ಸಚಿವ ಸ್ಥಾನ ಬೇಡವೋ, ಅವರ ಬದಲಿಗೆ ನಮಗೆ ಆ ಸ್ಥಾನ ನೀಡಿ, ನಾನು ಸಚಿವನಾಗಲು ಸಿದ್ಧನಿದ್ದೇನೆ' ಎಂದು ಹೇಳಿದ್ದಾರೆ. ಸದ್ಯದ ಅಸಮಾಧಾನಗಳು ತಾತ್ಕಾಲಿಕವಾಗಿದ್ದು, ಶೀಘ್ರದಲ್ಲೇ ಎಲ್ಲವೂ ಸರಿಹೋಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ, ಕೈ ಪಡೆಯಲ್ಲಿ ಖಾತೆ ಹಂಚಿಕೆಯ ಕಿಚ್ಚು ಜೋರಾಗಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಈ ಹಿರಿಯ ನಾಯಕರನ್ನು ಹೇಗೆ ಸಮಾಧಾನಪಡಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ