ಬಗರ್‌ ಹುಕುಂ ಜಮೀನಿನವರಿಗೆ ಇನ್ನು ಮಾಲಿಕತ್ವ ಇಲ್ಲ: ಅಶೋಕ್‌

By Govindaraj SFirst Published Jul 5, 2022, 5:20 AM IST
Highlights

ಬಗರ್‌ ಹುಕುಂ ಸಾಗುವಳಿ ಹೆಸರಿನಲ್ಲಿ ನಡೆಯುತ್ತಿರುವ ಸರ್ಕಾರಿ ಜಮೀನು ಕಬಳಿಕೆ ತಡೆಗೆ ಮುಂಬರುವ ಅಧಿವೇಶನದಲ್ಲೇ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತರಲು ವಿಧೇಯಕ ಮಂಡಿಸಲಾಗುವುದು. 

ಬೆಂಗಳೂರು (ಜು.05): ಬಗರ್‌ ಹುಕುಂ ಸಾಗುವಳಿ ಹೆಸರಿನಲ್ಲಿ ನಡೆಯುತ್ತಿರುವ ಸರ್ಕಾರಿ ಜಮೀನು ಕಬಳಿಕೆ ತಡೆಗೆ ಮುಂಬರುವ ಅಧಿವೇಶನದಲ್ಲೇ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತರಲು ವಿಧೇಯಕ ಮಂಡಿಸಲಾಗುವುದು. ತನ್ಮೂಲಕ ಸರ್ಕಾರಿ ಭೂ ಮಂಜೂರಾತಿಗೆ ಅರ್ಜಿ ಸಲ್ಲಿಸುವ ಸಾಗುವಳಿದಾರರಿಗೆ ಮಾಲೀಕತ್ವದ ಹಕ್ಕು ನೀಡದೆ ಕೇವಲ ಗುತ್ತಿಗೆ ಆಧಾರದ ಮೇಲೆ ಭೂಮಿ ನೀಡಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ. ಇದರಿಂದ ಹೊಸದಾಗಿ ಸರ್ಕಾರಿ ಭೂಮಿ ಒತ್ತುವರಿಯಾಗುವುದನ್ನು ತಡೆಯಬಹುದು. 

ಜತೆಗೆ ಪ್ರಸ್ತುತ ಸಾಗುವಳಿದಾರರಿಂದ ಸಾಗುವಳಿ ಆಗುತ್ತಿರುವ ಸರ್ಕಾರಿ ಜಮೀನನ ಮಾಲೀಕತ್ವವೂ ಸರ್ಕಾರದ ಬಳಿಯೇ ಉಳಿಯಲಿದ್ದು, ಗುತ್ತಿಗೆ ಆಧಾರದ ಮೇಲೆ ಸಾಗುವಳಿಗೆ ನೀಡುವುದರಿಂದ ಆದಾಯವೂ ಬರಲಿದೆ ಎಂದು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನಿಂದಲೂ ಸರ್ಕಾರಿ ಗೋಮಾಳ, ಬೆಟ್ಟ, ಗುಡ್ಡ, ಅರಣ್ಯ ಪ್ರದೇಶದ ಜಾಗದಲ್ಲಿ ದೀರ್ಘಾವಧಿ ಕಾಲದಿಂದ ಸಾಗುವಳಿ ಮಾಡುತ್ತಿದ್ದೇವೆ ಎಂದು ಅರ್ಜಿ ಸಲ್ಲಿಸಿ ಸರ್ಕಾರ ಜಮೀನನ್ನು ಮಂಜೂರು ಮಾಡಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಭೂ ರಹಿತ ರೈತರ ಜತೆಗೆ ಸರ್ಕಾರಿ ಜಮೀನು ಕಬಳಿಕೆ ಮಾಡುವ ಮಾಫಿಯಾವು ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಇದರಿಂದ ಬಹುತೇಕ ಜಿಲ್ಲೆಗಳಲ್ಲಿ ಸರ್ಕಾರಿ ಜಮೀನುಗಳೇ ಖಾಲಿಯಾಗುವ ಸ್ಥಿತಿ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪರಿಷ್ಕೃತ ಪಠ್ಯಪುಸ್ತಕ ವಾಪಸಿಲ್ಲ: ಸಚಿವ ಅಶೋಕ್‌

ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆಯಲ್ಲಿ 40 ಸಾವಿರ ಎಕರೆ, ಹಾಸನದಲ್ಲಿ 50 ಸಾವಿರ ಎಕರೆ, ಕೊಡಗು 9 ಸಾವಿರ ಎಕರೆ ಭೂಮಿಗೆ ಬಗರ್‌ ಹುಕುಂ ಅಡಿ ಅರ್ಜಿ ಸಲ್ಲಿಸಿದ್ದಾರೆ. ಈ ರೀತಿ ಲಕ್ಷಾಂತರ ಎಕರೆ ಸರ್ಕಾರಿ ಜಮೀನು ಮಂಜೂರು ಮಾಡುವಂತೆ ಅರ್ಜಿಗಳು ಬಂದಿವೆ. ಈ ರೀತಿ ಸರ್ಕಾರಿ ಜಮೀನು ಖಾಸಗಿಯವರ ಪಾಲಾಗುವುದನ್ನು ತಡೆಯಲು ಕಾನೂನು ತರಲಾಗುತ್ತಿದೆ. ಈ ಕಾಯಿದೆ ಈಗಾಗಲೇ ಅರ್ಜಿ ಸಲ್ಲಿಸಿ ಮಂಜೂರಾತಿ ಹಂತದಲ್ಲಿರುವ ಸಾಗುವಳಿದಾರರಿಗೂ ಅನ್ವಯಿಸುತ್ತದೆಯೇ ಎಂಬ ಪ್ರಶ್ನೆಗೆ, ಯಾರಾರ‍ಯರಿಗೆ ಅನ್ವಯವಾಗಲಿದೆ, ಹೇಗೆ ಅನ್ವಯವಾಗಲಿದೆ ಎಂಬುದನ್ನು ಕಾಯಿದೆಯಲ್ಲಿ ವಿವರಿಸಲಾಗುವುದು ಎಂದು ಹೇಳಿದರು.

ಜು.16ರಿಂದ ಪೌತಿಖಾತೆ ಅಭಿಯಾನ: ಸಚಿವ ಅಶೋಕ್‌

ಈಗಾಗಲೇ ಬಗರ್‌ಹುಕುಂ ಸಾಗುವಳಿ ಅಡಿ ಕುಮ್ಕಿ, ಕಾನು, ಬೆಟ್ಟ, ಸೊಪ್ಪಿನಬೆಟ್ಟ, ಜುಮ್ಮ-ಬಾನೆ ಇತರೆ ವರ್ಗಗಳ ಜಮೀನು ಮಂಜೂರಾತಿಗೆ 2010ರಲ್ಲೇ ನಿರ್ಬಂಧ ವಿಧಿಸಲಾಗಿದೆ. ಒಂದು ವೇಳೆ ನಿರ್ಬಂಧಿತ ಜಮೀನು ಒತ್ತುವರಿ ಮಾಡಿದರೆ 192 (ಎ) ನಿಯಮದಡಿ 3 ವರ್ಷ ಜೈಲು ಶಿಕ್ಷೆ, ದಂಡ ಶುಲ್ಕ ವಿಧಿಸುವ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಅವಕಾಶವಿದೆ. ಭೂ ಕಬಳಿಕೆ ಪ್ರಕರಣದ ವಿಚಾರಣೆಗೆ ಸರಕಾರ ಬೆಂಗಳೂರಿನಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. ಇದೀಗ ಈ ಕಾಯಿದೆ ಜಾರಿಯಾದರೆ ಸರ್ಕಾರಿ ಭೂ ಕಬಳಿಕೆ ತಕ್ಕ ಮಟ್ಟಿಗೆ ನಿಯಂತ್ರಣಕ್ಕೆ ಬರಬಹುದು ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

click me!