ಮೈಸೂರು ಮುಡಾದ್ದು ಮೆಗಾ ಅಕ್ರಮ: ಜಾರಿ ನಿರ್ದೇಶನಾಲಯ

Published : Sep 19, 2025, 06:36 AM IST
Former MUDA Commissioner Dinesh Kumar

ಸಾರಾಂಶ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ ಮುಡಾ (ಮೈಸೂರು ನಗಾರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತೊಂದು ಸ್ಫೋಟಕ ಆರೋಪ ಮಾಡಿದೆ. ‘

ನವದೆಹಲಿ : ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ ಮುಡಾ (ಮೈಸೂರು ನಗಾರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತೊಂದು ಸ್ಫೋಟಕ ಆರೋಪ ಮಾಡಿದೆ. ‘ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ವಿವಿಧ ಕಾನೂನುಗಳು ಮತ್ತು ಸರ್ಕಾರಿ ಆದೇಶಗಳ ಉಲ್ಲಂಘನೆಯಾಗಿದೆ ಹಾಗೂ ಬೃಹತ್‌ ಪ್ರಮಾಣದ ಹಗರಣ ನಡೆದಿರುವುದು ಅಕ್ರಮ ಹಣ ವರ್ಗಾವಣೆ ತನಿಖೆಯಿಂದ ಪತ್ತೆಯಾಗಿದೆ’ ಎಂದು ಹೇಳಿದೆ.

ಜತೆಗೆ, ‘ಪ್ರಕರಣದಲ್ಲಿ 2 ದಿನ ಹಿಂದೆ ಬಂಧಿತರಾಗಿದ್ದ ಮುಡಾ ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್‌ ಈ ಅಕ್ರಮ ಹಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅನರ್ಹರಿಗೆ ಸೈಟು ಹಂಚಿಕೆಯಲ್ಲಿ ಅವರ ಪಾತ್ರ ದೊಡ್ಡದಿತ್ತು. ಇದಕ್ಕಾಗಿ ಅವರು ಲಂಚ ಸ್ವೀಕರಿಸುತ್ತಿದ್ದರು’ ಎಂದೂ ಆರೋಪಿಸಿದೆ.

ಕರ್ನಾಟಕ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ಬಳಿಕ, ಅದನ್ನು ಆಧರಿಸಿ ಹಗರಣದ ತನಿಖೆಯನ್ನು ಇ.ಡಿ. ವಹಿಸಿಕೊಂಡಿತ್ತು. ಈ ನಡುವೆ, ಸೆ.16ರಂದು (ಮಂಗಳವಾರ) ದಿನೇಶ್‌ ಬಂಧನವಾಗಿತ್ತು ಹಾಗೂ ಸೆ.26ರವರೆಗೆ ಅವರನ್ನು ಕೋರ್ಟ್‌ ಇ.ಡಿ. ವಶಕ್ಕೆ ನೀಡಿತ್ತು. ಇದಾದ 2 ದಿನದ ಬಳಿಕ ಇ.ಡಿ. ಈ ಹೇಳಿಕೆ ನೀಡಿದೆ.

ಮುಡಾ ಹಗರಣ ಮುನ್ನೆಲೆಗೆ ಬಂದ ಕಾರಣ, ಆಂತರಿಕ ತನಿಖೆ ಆಧರಿಸಿ ಕಳೆದ ಸೆಪ್ಟೆಂಬರ್‌ನಲ್ಲಿ ದಿನೇಶ್‌ರನ್ನು ಸರ್ಕಾರ ಅಮಾನತು ಮಾಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮುಡಾ ಸೈಟು ಹಂಚಿದ ಹಿಂದೆಯೂ ದಿನೇಶ್‌ ಹೆಸರು ಕೇಳಿಬಂದಿತ್ತು. ಆದರೆ ಪ್ರಕರಣದಲ್ಲಿ ಸಿಎಂ ಪತ್ನಿ ಹಾಗೂ ಮತ್ತಿಬ್ಬರ ವಿರುದ್ಧ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌, ತನಿಖೆ ರದ್ದು ಮಾಡಿ ಕ್ಲೀನ್‌ಚಿಟ್ ನೀಡಿದ್ದವು. ಆದರೆ ದಿನೇಶ್‌ ಸೇರಿ ಉಳಿದವರ ವಿರುದ್ಧ ಪ್ರಕರಣಗಳು ಮುಂದುವರಿದಿವೆ.

ದಿನೇಶ್‌ರಿಂದ ಭಾರಿ ಅಕ್ರಮ- ಇ.ಡಿ.:

‘ಜಿ.ಟಿ. ದಿನೇಶ್ ಕುಮಾರ್ ಅವರು ಆಯುಕ್ತರಾಗಿದ್ದ ಅವಧಿಯಲ್ಲಿ ಮುಡಾದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಈ ಪ್ರಕರಣದ ತನಿಖೆಯ ವೇಳೆ ಸಂಗ್ರಹಿಸಲಾದ ಪುರಾವೆಗಳು ಮತ್ತು ದಾಖಲೆಗಳಿಂದ ಇದು ತಿಳಿದುಬಂದಿದೆ’ ಎಂದು ಇ.ಡಿ. ಹೇಳಿದೆ.

ಅಂತೆಯೇ, ‘ತನಿಖೆಯ ಸಮಯದಲ್ಲಿ ಸೈಟುಗಳ ಅಕ್ರಮ ಹಂಚಿಕೆ ಮಾಡಲು ನಗದು, ಬ್ಯಾಂಕ್ ವರ್ಗಾವಣೆ, ಚರ/ಸ್ಥಿರ ಆಸ್ತಿಗಳ ರೂಪದಲ್ಲಿ ಲಂಚ ಪಡೆಯಲಾಗಿದೆ ಎಂಬ ಬಗ್ಗೆ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ’ ಎಂದು ಅದು ತಿಳಿಸಿದೆ.

ಅಕ್ರಮ ನಡೆದಿದ್ದು ಹೇಗೆ?:

ಇದಲ್ಲದೆ, ಈ ಅಕ್ರಮ ಹೇಗೆ ನಡೆದಿತ್ತು ಎಂಬುದನ್ನು ವಿವರಿಸಿರುವ ನಿರ್ದೇಶನಾಲಯ, ‘ಅನರ್ಹ ಫಲಾನುಭವಿಗಳನ್ನು ಗುರುತಿಸಿ, ನಕಲಿ ಅಥವಾ ಅಪೂರ್ಣ ದಾಖಲೆಗಳನ್ನು ಬಳಸಿಕೊಂಡು ನಿವೇಶನ ಹಂಚಿಕೆ ಮಾಡಲಾಗುತ್ತಿತ್ತು. ಕೆಲವೊಮ್ಮೆ ಹಂಚಿಕೆ ಪತ್ರಗಳ ತಾರೀಖನ್ನೂ ಬದಲಿಸಿ, ಹಿಂದಿನ ದಿನಾಂಕವನ್ನು ನಮೂದಿಸಲಾಗುತ್ತಿತ್ತು. ಇದಕ್ಕಾಗಿ ಪಡೆದ ಲಂಚ ಪಡೆಯಲಾಗುತ್ತಿತ್ತು. ಈ ಲಂಚದ ಹಣವನ್ನು ಸಹಕಾರ ಸಂಘ ಮತ್ತು ದಿನೇಶ್ ಅವರ ಸಂಬಂಧಿಕರು/ಸಹಚರರ ಬ್ಯಾಂಕ್ ಖಾತೆಗಳ ಮೂಲಕ ವರ್ಗಾಯಿಸಲಾಗಿದೆ. ಹೀಗೆ ಪಡೆದ ಲಂಚದ ಹಣವನ್ನು, ದಿನೇಶ್ ಕುಮಾರ್ ಅವರ ಸಂಬಂಧಿಕರ ಹೆಸರಿಗೆ ಅಕ್ರಮವಾಗಿ ಮಂಜೂರು ಮಾಡಲಾದ ಮುಡಾ ನಿವೇಶನಗಳಲ್ಲಿ ಕೆಲವನ್ನು ಖರೀದಿಸಲು ಬಳಸಲಾಗಿದೆ’ ಎಂದು ತಿಳಿಸಿದೆ.

ಇದಕ್ಕೆ ಪುರಾವೆಯಾಗಿ, ‘ಮಾರುಕಟ್ಟೆಯಲ್ಲಿ 400 ಕೋಟಿ ರು.ಗೂ ಅಧಿಕ ಬೆಲೆಬಾಳುವ 252 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ’ ಎಂದು ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಉತ್ತರದ ಮಹಿಳೆಯರು ಬರೀ ಮನೆಗೆಲಸಕ್ಕೆ ಸೀಮಿತ - ದಯಾನಿಧಿ
ತುರ್ತು ಸಂಪುಟ ಸಭೆ ತೀರ್ಮಾನ : ಜಿ ರಾಮ್‌ ಜಿ ವಿರುದ್ಧ 22ರಿಂದ ಸಮರಾಧಿವೇಶನ