ರಾಜ್ಯದ ಬಯಲುಸೀಮೆಯನ್ನು ಕರಾವಳಿಯೊಂದಿಗೆ ಸಂಪರ್ಕಿಸುವ ಶಿರಾಡಿ ಮತ್ತು ಚಾರ್ಮಾಡಿ ಘಾಟ್ ರಸ್ತೆಗಳಲ್ಲಿ ಗುರುವಾರ ಮತ್ತೆ ರಸ್ತೆ ಕುಸಿತವಾಗಿದ್ದು, ಸಂಚಾರ ಬಂದ್ ಆಗುವ ಭೀತಿ ಎದುರಾಗಿದೆ.
ಬೆಂಗಳೂರು (ಜು.15): ರಾಜ್ಯದ ಬಯಲುಸೀಮೆಯನ್ನು ಕರಾವಳಿಯೊಂದಿಗೆ ಸಂಪರ್ಕಿಸುವ ಶಿರಾಡಿ ಮತ್ತು ಚಾರ್ಮಾಡಿ ಘಾಟ್ ರಸ್ತೆಗಳಲ್ಲಿ ಗುರುವಾರ ಮತ್ತೆ ರಸ್ತೆ ಕುಸಿತವಾಗಿದ್ದು, ಸಂಚಾರ ಬಂದ್ ಆಗುವ ಭೀತಿ ಎದುರಾಗಿದೆ. ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಕರಾವಳಿ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬರುವ ಶಿರಾಡಿ ಘಾಟ್‌ನ ದೋಣಿಗಲ್‌ನಲ್ಲಿ ವಾರದ ಬಳಿಕ ಮತ್ತೆ ರಸ್ತೆ ಕುಸಿತವಾಗಿದೆ.
ಇದರಿಂದಾಗಿ ಅಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಇಲ್ಲಿ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಏಕಮುಖ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಉಳಿದಂತೆ ಸಂಜೆ 6ರಿಂದ ಬೆಳಗ್ಗೆ 6ರ ವರೆಗೆ ಎಲ್ಲ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು, ಕಾರು, ಜೀಪು, ದ್ವಿಚಕ್ರ ವಾಹನ ಹಾಗೂ ತುರ್ತು ವಾಹನಗಳಿಗೆ ಮಾತ್ರ ದ್ವಿಮುಖ ಸಂಚಾರಕ್ಕೆ ಅನುಮತಿಸಲಾಗಿದೆ. ಭಾರಿ ಮಳೆ ಮುಂದುವರಿದರೆ ಘಾಟ್ ಪ್ರದೇಶ ಸಂಚಾರ ಪೂರ್ತಿ ಬಂದ್ ಆಗುವ ಭೀತಿ ಎದುರಾಗಿದೆ.
Chikkamagaluru: ಮಲೆನಾಡಿನಲ್ಲಿ ಮಹಾಮಳೆಯಿಂದ ತತ್ತರಿಸಿದ ಜನರು: ಕುಸಿದ ಶಾಲಾ ಕೊಠಡಿ
ಇನ್ನು ಶಿರಾಡಿ ಘಾಟ್ ರಸ್ತೆಗೆ ಪರ್ಯಾಯ ರಸ್ತೆಯಾಗಿರುವ ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟ್‌ನ ಸೋಮನಕಾಡು ಸಮೀಪ ರಸ್ತೆಗೆ ಗುಡ್ಡ ಕುಸಿದ ಹಿನ್ನೆಲೆಯಲ್ಲಿ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ವಾಹನಗಳು ಸಾಲುಗಟ್ಟಿನಿಂತಿದ್ದವು. ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ರಸ್ತೆಗೆ ಬಿದ್ದ ಮಣ್ಣು ಹಾಗೂ ಬಂಡೆಯನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇಲ್ಲಿ ಆಗಾಗ ಗುಡ್ಡ ಕುಸಿತ ಹಾಗೂ ಮರ ಬೀಳುವ ಹಿನ್ನೆಲೆಯಲ್ಲಿ ಮೂರು ಜೆಸಿಬಿ ಯಂತ್ರಗಳು ಸ್ಥಳದಲ್ಲೇ ಬೀಡುಬಿಟ್ಟಿವೆ.
ಸದ್ಯ ಏಕಮುಖ ಸಂಚಾರ: ರಸ್ತೆ ಕುಸಿತ ಕಂಡ ಪ್ರದೇಶದಲ್ಲಿ ಸದ್ಯ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಪರಾಹ್ನ ಭಾರಿ ವಾಹನಗಳ ಸಾಲು ಉಂಟಾಗಿದ್ದು, ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸ್ಥಳಕ್ಕೆ ಜಿಲ್ಲಾಡಳಿತ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಎಸ್ಪಿ ಹರಿರಾಂ ಶಂಕರ್, ಸಹಾಯಕ ಕಮಿಷನರ್ ಪ್ರತೀಕ್ ಬಯಾಲ್ ಇವರು ಭೂಕುಸಿತ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಘಾಟ್ ಪ್ರದೇಶದಲ್ಲಿ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮತ್ತೆ ರಸ್ತೆ ಕುಸಿಯುವ ಭೀತಿ ಎದುರಾಗಿದೆ.
ಭಾರಿ ವಾಹನ ಸಂಚಾರ ನಿಷೇಧ: ಶಿರಾಡಿ ಘಾಟ್ ರಸ್ತೆ ಕುಸಿತ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಿ ಹಾಸನ ಜಿಲ್ಲಾಡಳಿತ ಗುರುವಾರ ಆದೇಶ ಹೊರಡಿಸಿದೆ. ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಏಕಮುಖ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಉಳಿದಂತೆ ಸಂಜೆ 6ರಿಂದ ಬೆಳಗ್ಗೆ 6ರ ವರೆಗೆ ಎಲ್ಲ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು, ಕಾರು, ಜೀಪು, ದ್ವಿಚಕ್ರ ವಾಹನ ಹಾಗೂ ತುರ್ತು ವಾಹನಗಳು(ಆ್ಯಂಬುಲೆನ್ಸ್, ಅಗ್ನಿಶಾಮಕ ವಾಹನ)ಮಾತ್ರ ಸಂಚರಿಸಲು ಅನುಮತಿಸಲಾಗಿದೆ.
Bagalkote: ಪ್ರವಾಹ ನಿರ್ವಹಣೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಸಚಿವ ಸಿ.ಸಿ.ಪಾಟೀಲ್
ಇನ್ನಿತರ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ಹೊರಡಿಸಿದ್ದಾರೆ. ಪರ್ಯಾಯವಾಗಿ ಮಂಗಳೂರು-ಹಾಸನ ನಡುವೆ ಸಂಚರಿಸುವ ಭಾರಿ ವಾಹನಗಳು ವಯಾ ಬೇಲೂರು, ಮೂಡಿಗೆರೆ ಮಾರ್ಗವಾಗಿ ಚಾರ್ಮಾಡಿ ಮೂಲಕ ಸಂಚರಿಸಬೇಕಾಗಿದೆ. ಇಲ್ಲವೆ ಅರಕಲಗೂಡು, ಕುಶಾಲನಗರ, ಮಡಿಕೇರಿ ಮಾರ್ಗವಾಗಿ ಸಂಚರಿಸಬಹುದಾಗಿದೆ.