ಕರ್ನಾಟಕದ 10 ಜಿಲ್ಲೆಗಳಲ್ಲಿ ಜೂನ್‌ ಮಳೆ ಕೊರತೆ

By Kannadaprabha NewsFirst Published Jul 3, 2022, 5:15 AM IST
Highlights

*   ರಾಜ್ಯದಲ್ಲಿ ಒಟ್ಟಾರೆ ಶೇ.20 ಜೂನ್‌ ಮಳೆ ಕೊರತೆ
*   12 ಜಿಲ್ಲೆಗಳಲ್ಲಿ ವಾಡಿಕೆಯ ಮಳೆ, 9ರಲ್ಲಿ ಹೆಚ್ಚು
*  ನಾಡಿದ್ದಿನಿಂದ ಮಳೆ ಬಿರುಸು?
 

ಬೆಂಗಳೂರು(ಜು.03):  ನೈಋುತ್ಯ ಮುಂಗಾರಿನ ಆರಂಭದ ತಿಂಗಳಾದ ಜೂನ್‌ನಲ್ಲಿ ರಾಜ್ಯದ 10 ಜಿಲ್ಲೆಗಳಲ್ಲಿ ಮಳೆಯ ಕೊರತೆಯಾಗಿದೆ. ಉಳಿದಂತೆ 12 ಜಿಲ್ಲೆಗಳಲ್ಲಿ ವಾಡಿಕೆಯ ಮಳೆ, ಎರಡು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮತ್ತು ಏಳು ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯಾಗಿದೆ. ಜೂನ್‌ 1-30ರ ಅವಧಿಯಲ್ಲಿ ರಾಜ್ಯದಲ್ಲಿ 208 ಮಿಲಿಮೀಟರ್‌ ವಾಡಿಕೆ ಮಳೆ ಆಗುತ್ತದೆ. ಆದರೆ ಈ ಬಾರಿ ಕೇವಲ 166 ಮಿ.ಮೀ. ಮಳೆಯಾಗಿದ್ದು, ಶೇ.20ರಷ್ಟು ಮಳೆ ಕೊರತೆಯಾಗಿದೆ.

ಮಲೆನಾಡಿನ ಜಿಲ್ಲೆಗಳಾದ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಜೂನ್‌ನಲ್ಲಿ 383.6 ಮಿ.ಮೀ. ಮಳೆ ಸುರಿಯುವುದು ವಾಡಿಕೆ. ಆದರೆ ಈ ಬಾರಿ ಕೇವಲ 207.5 ಮಿ.ಮೀ. ಮಳೆ (ಶೇ.46 ಕೊರತೆ) ಸುರಿದಿದೆ. ಅದೇ ರೀತಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 872.7 ಮಿ.ಮೀ. ವಾಡಿಕೆ ಮಳೆ ಆಗುತ್ತಿತ್ತು. ಆದರೆ 585.2 ಮಿ.ಮೀ. ಮಾತ್ರ ಮಳೆ (ಶೇ.33 ಕೊರತೆ) ಸುರಿದಿದೆ.

ಚಿಕ್ಕಮಗಳೂರಲ್ಲಿ ಭಾರೀ ಮಳೆ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿ

ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್‌, ಕೊಪ್ಪಳ, ವಿಜಯಪುರ, ಗದಗ, ಬೆಳಗಾವಿ, ಧಾರವಾಡ, ಕೊಪ್ಪಳ ಜಿಲ್ಲೆಗಳಲ್ಲಿ 106 ಮಿ.ಮೀ. ಮಳೆಯ ಬದಲು 93.6 ಮಿ.ಮೀ. ಮಳೆ (ಶೇ.12 ಕೊರತೆ) ಸುರಿದಿದೆ. ಹವಾಮಾನ ಇಲಾಖೆಯು ವಾಡಿಕೆಗಿಂತ ಶೇ.19ರಷ್ಟು ಮಳೆಯ ಹೆಚ್ಚು ಮತ್ತು ಕಡಿಮೆಯನ್ನು ವಾಡಿಕೆಯ ಮಳೆ ಎಂದೇ ಪರಿಗಣಿಸುತ್ತದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ.56ರಷ್ಟುಮಳೆ ಕೊರತೆ ಆಗಿದೆ. ಉಳಿದಂತೆ ಕೊಡಗು ಶೇ.53, ಹಾವೇರಿ ಶೇ.50, ಚಿಕ್ಕಮಗಳೂರು ಶೇ.41, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಶೇ.35 ಮಳೆಯ ತೀವ್ರ ಅಭಾವವನ್ನು ಎದುರಿಸಿದೆ. ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಹಾಸನವನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಮಳೆಯ ಕೊರತೆ ಹೆಚ್ಚಿದೆ.

ಉತ್ತರ ಒಳನಾಡಿನ ಕಲಬುರಗಿ ಮತ್ತು ಧಾರವಾಡದಲ್ಲಿ ಶೇ.25, ಬೆಳಗಾವಿಯಲ್ಲಿ ಶೇ.22ರಷ್ಟುಮಳೆಯ ಕೊರತೆ ಉಂಟಾಗಿದೆ. ಬೀದರ್‌, ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ, ಗದಗ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದೆ.

ಐದು ಜಿಲ್ಲೆಗಳಲ್ಲಿ ಭಾರೀ ಮಳೆ: ಮಂಗ್ಳೂರಲ್ಲಿ ಪ್ರವಾಹ, ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಸಾಮಾನ್ಯವಾಗಿ ಹಿಂಗಾರು ಋುತುವಿನಲ್ಲಿ ಹೆಚ್ಚು ಮಳೆ ಸುರಿಯುವ ದಕ್ಷಿಣ ಒಳನಾಡಿನಲ್ಲಿ ಈ ಬಾರಿ ಮುಂಗಾರು ಅಬ್ಬರಿಸಿದೆ. ವಾಡಿಕೆಗಿಂತ ಬೆಂಗಳೂರು ಗ್ರಾಮಾಂತರ ಶೇ.198, ಕೋಲಾರ ಶೇ.174, ತುಮಕೂರು ಶೇ.152, ಚಿಕ್ಕಬಳ್ಳಾಪುರ ಶೇ.142, ಕೋಲಾರ ಶೇ.164, ಬೆಂಗಳೂರು ನಗರ ಶೇ.129, ಮಂಡ್ಯ ಶೇ.128, ರಾಮನಗರ ಜಿಲ್ಲೆಯಲ್ಲಿ ಶೇ.124ರಷ್ಟುಹೆಚ್ಚು (ಶೇ. 85ರಷ್ಟು ಹೆಚ್ಚು) ಮಳೆಯಾಗಿದೆ.

ನಾಡಿದ್ದಿನಿಂದ ಮಳೆ ಬಿರುಸು?

ಮೇ ತಿಂಗಳಲ್ಲಿ ಮಳೆ ಜೋರಾಗಿ ಸುರಿದಿದ್ದರಿಂದ, ವಾಡಿಕೆಗೆ ಮುನ್ನ ಮುಂಗಾರು ರಾಜ್ಯ ಪ್ರವೇಶಿಸಿದ್ದರೂ ಜೂನ್‌ ತಿಂಗಳಲ್ಲಿ ಮುಂಗಾರು ಮಂಕಾಗಿದೆ. ಆದರೆ ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆಗಳಿವೆ. ಜುಲೈ 5ರಿಂದ ಮುಂಗಾರು ಅಬ್ಬರಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ಹೇಳುತ್ತಾರೆ.
 

click me!