
ಬೆಂಗಳೂರು(ಜು.03): ಎರಡು ತಿಂಗಳಿಂದ ಕೈಗೆ ಸಿಗದೆ ರಾಜ್ಯ ಹೊರ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣದ ಆರೋಪಿ ನಂ.1 ಜಾಗೃತ್‌ನನ್ನು ಕೊನೆಗೂ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಪೊಲೀಸರು ಶನಿವಾರ ಸೆರೆ ಹಿಡಿದಿದ್ದಾರೆ.
ಪಿಎಸ್‌ಐ ಪರೀಕ್ಷೆಯಲ್ಲಿ ಒಎಂಆರ್‌ಶೀಟ್ ತಿದ್ದುಪಡಿ ಮಾಡಿ ಆಯ್ಕೆಯಾದ ಆರೋಪ ಹೊತ್ತಿದ್ದ ಬೆಂಗಳೂರಿನ ಜಾಗೃತ್, ತನ್ನ ಮೇಲೆ ಏ.30ರಂದು ಬೆಂಗಳೂರಿನ ಹೈಗ್ರೌಂಡ್ಸ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ. ತಾಂತ್ರಿಕ ಮಾಹಿತಿ ಆಧರಿಸಿ ರಾಮನಗರ ಜಿಲ್ಲೆ ಚನ್ನಪಟ್ಟಣ ಸಮೀಪ ಆರೋಪಿಯನ್ನು ಬಂಧಿಸಲಾಯಿತು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
PSI ಅಕ್ರಮ ನೇಮಕಾತಿ: ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ
ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಜಾಗೃತ್:
ಪಿಎಸ್‌ಐ ನೇಮಕಾತಿ ಹಗರಣ ಬೆಳಕಿಗೆ ಬಂದ ಬಳಿಕ ಪರೀಕ್ಷೆ ರದ್ದುಪಡಿಸಿದ ಸರ್ಕಾರದ ನಿರ್ಧಾರ ವಿರೋಧಿಸಿ ಅಭ್ಯರ್ಥಿಗಳು ನಡೆಸಿದ ಪ್ರತಿಭಟನೆಯಲ್ಲಿ ಜಾಗೃತ್ ಮುಂಚೂಣಿಯಲ್ಲಿದ್ದ. ಅಂದು ಉಪ್ಪಾರಪೇಟೆ ಠಾಣೆ ಪೊಲೀಸರಿಗೆ ಪ್ರತಿಭಟನೆ ನಡೆಸಲು ಅನುಮತಿ ಕೋರಿ ಆತ ಮನವಿ ಸಲ್ಲಿಸಿದ್ದ. ಇನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನೊಂದ ಅಭ್ಯರ್ಥಿಗಳ ಪ್ರತಿಭಟನೆ ನಡೆದಿರುವಾಗಲೇ ಕಲಬುರಗಿ ಬಳಿಕ ಬೆಂಗಳೂರಿನಲ್ಲೂ ಪರೀಕ್ಷಾ ಅಕ್ರಮ ನಡೆದಿದೆ ಎಂದು ಹೈಗ್ರೌಂಡ್‌್ಸ ಠಾಣೆಯಲ್ಲಿ ಸಿಐಡಿ ದೂರು ದಾಖಲಿಸಿತು. ಈ ಪ್ರಕರಣ ದಾಖಲಾದ ಕೂಡಲೇ ನಾಪತ್ತೆಯಾದ ಜಾಗೃತ್, ತನ್ನ ಮೇಲಿನ ಎಫ್‌ಐಆರ್ ರದ್ದು ಕೋರಿ ಹೈಕೋರ್ಚ್ ಮೊರೆ ಹೋಗಿದ್ದ. ಇತ್ತ ಜಾಗೃತ್ ಪತ್ತೆಗೆ ಸಿಐಡಿ ಹುಡುಕಾಟ ನಡೆಸಿತ್ತು.
ಇದೇ ಪಿಎಸ್‌ಐ ನೇಮಕಾತಿ ಪ್ರಕರಣ ಸಂಬಂಧ ಸಿಐಡಿ ಡಿಜಿಪಿ ಪಿ.ಎ.ಸಂಧು ಅವರಿಂದ ಮುಚ್ಚಿದ ಲಕೋಟೆಯಲ್ಲಿ ವರದಿ ಪಡೆದ ಹೈಕೋರ್ಚ್, ಈ ಪ್ರಕರಣದಲ್ಲಿ ಪಾಲ್ಗೊಂಡಿರುವ ಎಲ್ಲರನ್ನು ಬಂಧಿಸುವಂತೆ ಸೂಚಿಸಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಜಾಗೃತ್‌ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ