
ಬೆಂಗಳೂರು (ಮೇ.8) ಸಾರಿಗೆ ವ್ಯಾಪ್ತಿಗೆ ಬರುವ ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಮಿಕ ಇಲಾಖೆಯಡಿ ರಚಿಸಿರುವ ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಮಂಡಳಿಯನ್ನು ಸಾರಿಗೆ ಇಲಾಖೆ ವ್ಯಾಪ್ತಿಗೆ ತರಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
‘ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ (ತಿದ್ದುಪಡಿ) ವಿಧೇಯಕ- 2026’ ಅಡಿ ಸಾರಿಗೆಯೇತರ ವಾಹನಗಳಿಂದ ಸಂಗ್ರಹಿಸುವ ನಿಧಿಯನ್ನು ಸಾರಿಗೆ ಇಲಾಖೆ ಮೂಲಕವೇ ಬಳಸಲು ಸಚಿವ ಸಂಪುಟ ತೀರ್ಮಾನಿಸಿದೆ.
ಪ್ರಸ್ತುತ ವಿಧೇಯಕದಡಿ ಸಾರಿಗೆ ಇಲಾಖೆ ಸಾರಿಗೆಯೇತರ (ವಾಣಿಜ್ಯ) ವಾಹನಗಳಿಂದ ಸೆಸ್ ಸಂಗ್ರಹಿಸಿ, ಅದನ್ನು ಕಾರ್ಮಿಕ ಇಲಾಖೆ ಅಡಿ ಬರುವ ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಮಂಡಳಿಗೆ ನೀಡುತ್ತಿತ್ತು. ಮಂಡಳಿಯು ಸಾರಿಗೆ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಈಗ ಆ ಮಂಡಳಿಯನ್ನು ಸಾರಿಗೆ ಇಲಾಖೆ ಅಧೀನಕ್ಕೆ ತರುವ ಸಂಬಂಧ ಅಗತ್ಯ ತಿದ್ದುಪಡಿ ತರಲಾಗಿದೆ.
ತಿದ್ದುಪಡಿಯಿಂದಾಗಿ ಇನ್ನು ಮುಂದೆ ಸಾರಿಗೆ ಇಲಾಖೆ ಸಂಗ್ರಹಿಸುವ ನಿಧಿಯಿಂದ ಸಾರಿಗೆ ಕಾರ್ಮಿಕರ ಕಲ್ಯಾಣಕ್ಕಾಗಿ ಸಾರಿಗೆ ಇಲಾಖೆಯೇ ಕಾರ್ಯಕ್ರಮಗಳನ್ನು ರೂಪಿಸಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಸ್ತುತ ವಿಧೇಯಕದಡಿ ಸಾರಿಗೆಯೇತರ ವಾಹನಗಳಾದ ದ್ವಿಚಕ್ರ ಮತ್ತು ಕಾರುಗಳಿಗೆ ಕ್ರಮವಾಗಿ 500 ರು. ಹಾಗೂ ಸಾವಿರ ರು. ಸೆಸ್ ವಿಧಿಸಲಾಗುತ್ತಿದೆ. 2025ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ವಾಹನಗಳ ಮೇಲೆ ಶೇ.3ರಂತೆ ವಿಧಿಸಿದ ಹೆಚ್ಚುವರಿ ಸೆಸ್ ಹಾಗೂ ದ್ವಿಚಕ್ರ ಮತ್ತು ಕಾರುಗಳಿಗೆ ವಿಧಿಸಲಾದ ಸೆಸ್‌ನಿಂದ ಒಟ್ಟಾರೆ 92.25 ಕೋಟಿ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ