ಕೆಲಸ ಅವಧಿ 10 ತಾಸಿಗೆ ಹೆಚ್ಚಳ ಪ್ರಸ್ತಾವನೆಗೆ ಮಿಶ್ರ ಪ್ರತಿಕ್ರಿಯೆ: ಕಾರ್ಮಿಕ ಸಂಘಟನೆಗಳ ಭಿನ್ನಾಭಿಪ್ರಾಯ

Kannadaprabha News   | Kannada Prabha
Published : Jun 19, 2025, 08:34 AM IST
workers

ಸಾರಾಂಶ

ಕಾರ್ಮಿಕರ ದುಡಿಯುವ ಅವಧಿಯನ್ನು ಹಾಲಿ ಇರುವ ಎಂಟು ಗಂಟೆಯಿಂದ ಹತ್ತು ಗಂಟೆಗೆ ಹೆಚ್ಚಿಸಿ, ವಾರದಲ್ಲಿ ಎರಡು ದಿನ ರಜೆ ನೀಡುವ ಕುರಿತ ಪ್ರಸ್ತಾಪಕ್ಕೆ ಸರ್ಕಾರಿ ಕಾರ್ಮಿಕ ಸಂಘಟನೆಗಳು, ಕೈಗಾರಿಕೆಗಳು ಮತ್ತು ಇತರೆ ಭಾಗೀದಾರರ ಅಭಿಪ್ರಾಯ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.

ಬೆಂಗಳೂರು (ಜೂ.19): ಕಾರ್ಮಿಕರ ದುಡಿಯುವ ಅವಧಿಯನ್ನು ಹಾಲಿ ಇರುವ ಎಂಟು ಗಂಟೆಯಿಂದ ಹತ್ತು ಗಂಟೆಗೆ ಹೆಚ್ಚಿಸಿ, ವಾರದಲ್ಲಿ ಎರಡು ದಿನ ರಜೆ ನೀಡುವ ಕುರಿತ ಪ್ರಸ್ತಾಪಕ್ಕೆ ಸರ್ಕಾರಿ ಕಾರ್ಮಿಕ ಸಂಘಟನೆಗಳು, ಕೈಗಾರಿಕೆಗಳು ಮತ್ತು ಇತರೆ ಭಾಗೀದಾರರ ಅಭಿಪ್ರಾಯ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.

ಕೆಲ ಸಂಘಟನೆಗಳು ಈ ಪ್ರಸ್ತಾಪವನ್ನು ಸ್ವಾಗತಿಸಿದ್ದರೆ, ಕಾರ್ಮಿಕ ಸಂಘಟನೆಗಳು ಬಲವಾಗಿ ವಿರೋಧಿಸಿವೆ. ಕಾರ್ಮಿಕರಿಗೆ ಪ್ರಸ್ತುತ ಇರುವ ದಿನದಲ್ಲಿ 8 ಗಂಟೆಗಳ ಕೆಲಸದ ಅವಧಿಯನ್ನು 10 ಗಂಟೆಗಳಿಗೆ ಹೆಚ್ಚಿಸಿ ಶನಿವಾರ ಮತ್ತು ಭಾನುವಾರ ವಾರ ಎರಡು ದಿನ ರಜೆ ನೀಡುವುದು. ಇದಕ್ಕಾಗಿ ಕೇಂದ್ರ ಕಾರ್ಮಿಕ ಕಾಯ್ದೆಗೆ ಪೂರಕವಾಗಿ ರಾಜ್ಯದ ಅಂಗಡಿ ಮತ್ತು ವಾಣಿಜ್ಯಸ್ಥಾಪನೆ (ಶಾಪ್ ಆ್ಯಂಡ್‌ ಎಸ್ಟಾಬ್ಲಿಷ್ಮೆಂಟ್ ಆಕ್ಟ್) ಕಾಯಿದೆಗೆ ತಿದ್ದುಪಡಿ ತರಲು ಕಾರ್ಮಿಕ ಇಲಾಖೆ ಮುಂದಾಗಿದೆ.

ಈ ಸಂಬಂಧ ಅಭಿಪ್ರಾಯ ಸಂಗ್ರಹಿಸಿಲು ಉತ್ಪಾದನಾ ವಲಯದ ಮುಖ್ಯಸ್ಥರು, ಕಾರ್ಮಿಕ ಸಂಘಟನೆಗಳು ಸೇರಿ ನಾನಾ ವಿಭಾಗದ ಮುಖ್ಯಸ್ಥರ ಜತೆಗೆ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ರೋಹಿಣಿ ಸಿಂದೂರಿ ನೇತೃತ್ವದಲ್ಲಿ ಬುಧವಾರ ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆದಿದೆ. ಸಭೆಯಲ್ಲಿ ಎಫ್‌ಕೆಸಿಸಿಐ ಪ್ರತಿನಿಧಿಗಳು, ಹೊಟೇಲ್ ಉದ್ಯಮ, ಕಾರ್ಮಿಕ ಸಂಘಟನೆ ಮುಖ್ಯಸ್ಥರು, ಉದ್ಯಮಿಗಳು ಭಾಗವಹಿಸಿದ್ದರು. ಇಲಾಖೆ ಮೂಲಗಳ ಪ್ರಕಾರ ಇದೇ ಮಳೆಗಾಲದ ಅಧಿವೇಶನದಲ್ಲಿ ಕಾರ್ಮಿಕ ಇಲಾಖೆ ಈ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸುವ ಸಾಧ್ಯತೆ ಹೆಚ್ಚಿದೆ. ಇದರ ಜತೆಗೆ ಕಾರ್ಮಿಕರ ಕನಿಷ್ಠ ವೇತನ ಕಾಯ್ದೆ ತಿದ್ದುಪಡಿ ಬಗ್ಗೆಯೂ ಚರ್ಚೆ ಪ್ರಾರಂಭವಾಗಿದೆ.

ಕಾರ್ಮಿಕ ಸಂಘಟನೆಗಳ ಭಿನ್ನ ಅಭಿಪ್ರಾಯ: ಸರ್ಕಾರದ ಪ್ರಸ್ತಾಪವನ್ನು ಕೆಲ ಕಾರ್ಮಿಕ ಸಂಘಟನೆಗಳು ಬಲವಾಗಿ ವಿರೋಧಿಸಿದ್ದರೆ, ಇನ್ನು ಕೆಲವು ಸ್ವಾಗತಿಸಿದ್ದು ಜಾರಿಗೆ ಒತ್ತಾಯಸಿವೆ. ದುಡಿಯುವ ಅವಧಿ ಹೆಚ್ಚಿಸುವುದರಿಂದ ಕಾರ್ಮಿಕರಿಗೆ ಒತ್ತಡ ಹೆಚ್ಚುತ್ತದೆ ಮತ್ತು ಶೋಷಣೆಯಾಗುತ್ತದೆ. ಯಾವುದೇ ಕಾರಣಕ್ಕೂ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡಬಾರದು. ಈ ಬಗ್ಗೆ ನಾವು ಸಿದ್ದರಾಮಯ್ಯನವರಿಗೂ ಮನವಿ ಮಾಡುತ್ತೇವೆ ಎಂದು ಸಿಐಟಿಯು ಅಧ್ಯಕ್ಷೆ ವರಲಕ್ಷ್ಮಿ ತಿಳಿಸಿದ್ದಾರೆ.

ಸರ್ಕಾರದ ಚಿಂತನೆಯನ್ನು ಕಾರ್ಮಿಕರು ಅರ್ಥ ಮಾಡಿಕೊಂಡಿಲ್ಲ. ಇದು ಉತ್ತಮವಾಗಿದೆ. 10 ಗಂಟೆ ಅವಧಿ ಹೆಚ್ಚಿಸಿದರೂ ವಾರದಲ್ಲಿ ಎರಡು ದಿನ ರಜೆ ಇರುತ್ತದೆ. ಒಟ್ಟಾರೆ ಕೆಲಸದ ಅವಧಿ 48 ಗಂಟೆ ಇರುತ್ತದೆ. ಇದರಿಂದಾಗಿ ಉತ್ಪಾದನಾ ಸಾಮರ್ಥ್ಯ ಹೆಚ್ಚುವ ಜತೆಗೆ ಬೆಂಗಳೂರಿನಂಥ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಅನುಕೂಲವಾಗುತ್ತದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಬಾಲಕೃಷ್ಣ ಅಭಿಪ್ರಾಯಪಟ್ಟರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌