ಬಂಗಾರಿ ವಂಚನೆ ಕೇಸ್‌ ಸಿಐಡಿಗೆ: ರಾಜ್ಯ ಸರ್ಕಾರ ಆದೇಶ

Kannadaprabha News   | Kannada Prabha
Published : Jun 19, 2025, 06:54 AM IST
aishwarya gowda

ಸಾರಾಂಶ

ರಿಯಲ್ ಎಸ್ಟೇಟ್ ಏಜೆಂಟ್‌ ಐಶ್ವರ್ಯಗೌಡ ವಿರುದ್ಧ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸೋದರಿ ಸೋಗಿನಲ್ಲಿ ಜನರಿಗೆ ಕೋಟ್ಯಂತರ ರುಪಾಯಿ ವಂಚನೆ ಪ್ರಕರಣಗಳ ಕುರಿತು ಅಪರಾಧ ತನಿಖಾ ಇಲಾಖೆ (ಸಿಐಡಿ) ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.

ಬೆಂಗಳೂರು (ಜೂ.19): ರಿಯಲ್ ಎಸ್ಟೇಟ್ ಏಜೆಂಟ್‌ ಐಶ್ವರ್ಯಗೌಡ ವಿರುದ್ಧ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸೋದರಿ ಸೋಗಿನಲ್ಲಿ ಜನರಿಗೆ ಕೋಟ್ಯಂತರ ರುಪಾಯಿ ವಂಚನೆ ಪ್ರಕರಣಗಳ ಕುರಿತು ಅಪರಾಧ ತನಿಖಾ ಇಲಾಖೆ (ಸಿಐಡಿ) ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ. ಈ ಆದೇಶ ಹೊರ ಬಿದ್ದ ಬೆನ್ನಲ್ಲೇ ಸಿಐಡಿಗೆ ಪ್ರಕರಣಗಳ ಕಡತಗಳನ್ನು ಬ್ಯಾಟರಾಯನಪುರ ಉಪ ವಿಭಾಗದ ಎಸಿಪಿ ಭರತ್ ರೆಡ್ಡಿ ಹಾಗೂ ವಿಜಯನಗರ ಉಪ ವಿಭಾಗದ ಎಸಿಪಿ ಚಂದನ್ ಕುಮಾರ್ ಹಸ್ತಾಂತರಿಸಿದ್ದಾರೆ.

ಚಿನ್ನಾಭರಣ ವ್ಯಾಪಾರಿ, ವೈದ್ಯ ಹಾಗೂ ಉದ್ಯಮಿ ಹೀಗೆ ಕೆಲವರಿಗೆ ತನಗೆ ರಾಜಕೀಯ ನಾಯಕರ ಪರಿಚಯವಿದೆ ಎಂದು ಹೇಳಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಐಶ್ವರ್ಯಗೌಡ ಕೋಟ್ಯಂತರ ರು. ವಂಚಿಸಿದ್ದಳು. ಕೆಲ ತಿಂಗಳ ಹಿಂದೆ ಚಂದ್ರಾಲೇಔಟ್‌ನ ಚಿನ್ನದ ವ್ಯಾಪಾರಿ ವನಿತಾ ಐತಾಳ್ ಅವರಿಗೆ ₹8.5 ಕೋಟಿ ಮೌಲ್ಯದ 14.6 ಚಿನ್ನ ಪಡೆದು ಆಕೆ ವಂಚಿಸಿದ್ದಳು. ಈ ಮೋಸದ ಕೃತ್ಯಕ್ಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸೋದರಿ ಎಂದು ಹೇಳಿ ಐಶ್ವರ್ಯ ವಂಚಿಸಿದ್ದ ಆರೋಪ ಕೇಳಿ ಬಂದಿತ್ತು.

ಈ ವಂಚನೆ ಕೃತ್ಯಗಳ ಬಗ್ಗೆ ಚಂದ್ರಾಲೇಔಟ್‌, ರಾಜರಾಜೇಶ್ವರಿ ನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಎರಡು ಪ್ರಕರಣಗಳು ಸೇರಿ ಒಟ್ಟು 5 ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳ ಸಂಬಂಧ ಐಶ್ವರ್ಯಗೌಡ ದಂಪತಿಯನ್ನು ಪೊಲೀಸರು ಬಂಧಿಸಿದ್ದರು. ಬಳಿಕ ನ್ಯಾಯಾಲಯವು ತಡೆಯಾಜ್ಞೆ ನೀಡಿದ ಪರಿಣಾಮ ದಂಪತಿ ಬಂಧ ಮುಕ್ತರಾಗಿದ್ದರು. ಈ ವಂಚನೆ ಕೃತ್ಯಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದವು. ಈಗ ಪ್ರಕರಣಗಳ ತನಿಖೆಗೆ ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಬಂಗಾರಿ ಕೇಸಲ್ಲಿ ಡಿಕೆಸುಗೆ ಇ.ಡಿ. ವಿಚಾರಣೆ ಸಂಕಷ್ಟ: ಬಂಗಾರ ಪಡೆದು ಐಶ್ವರ್ಯಾ ಗೌಡ ನಡೆಸಿದ ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು(ಇ.ಡಿ.) ಮಾಜಿ ಸಂಸದ ಡಿ.ಕೆ.ಸುರೇಶ್‌ಗೆ ಸಮನ್ಸ್‌ ಜಾರಿಗೊಳಿಸಿದೆ. ಪ್ರಕರಣದ ಪ್ರಮುಖ ಆರೋಪಿ ಐಶ್ವರ್ಯಾ ಗೌಡ ತಾನು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ತಂಗಿ ಹಾಗೂ ತನಗೆ ಹಲವು ಪ್ರಭಾವಿ ರಾಜಕೀಯ ವ್ಯಕ್ತಿಗಳ ಪರಿಚಯವಿದೆ ಎಂದು ಹೇಳಿಕೊಂಡು ಚಿನ್ನಾಭರಣ ವ್ಯಾಪಾರಿಗಳು, ಪರಿಚಿತರು ಸೇರಿದಂತೆ ಕೆಲವರಿಂದ ಚಿನ್ನಾಭರಣ ಹಾಗೂ ಕೋಟ್ಯಂತರ ರು. ಹಣ ಪಡೆದು ವಂಚಿಸಿದ ಆರೋಪದಡಿ ಬೆಂಗಳೂರಿನ ಚಂದ್ರಾಲೇಔಟ್‌ ಸೇರಿದಂತೆ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು.

ಈ ಪ್ರಕರಣಗಳಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ಪ್ರತ್ಯೇಕ ಪ್ರಕರಣ ದಾಖಲಿಸಿತ್ತು. ಈ ಸಂಬಂಧ ಆರೋಪಿ ಐಶ್ವರ್ಯಾ ಗೌಡ ಅವರನ್ನು ಬಂಧಿಸಿತ್ತು. ಆಕೆಯ ಮನೆ ಮೇಲೆ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿತ್ತು. ಮುಂದುವರೆದ ತನಿಖೆಯಲ್ಲಿ ಆರೋಪಿ ಐಶ್ವರ್ಯಾ ಗೌಡ ಅವರ ಬ್ಯಾಂಕ್‌ ಖಾತೆಗಳ ಪರಿಶೀಲನೆ ವೇಳೆ ಸುಮಾರು 70 ಕೋಟಿ ರು.ಗೂ ಅಧಿಕ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಐಶ್ವರ್ಯಾ ಹಲವು ರಾಜಕೀಯ ನಾಯಕರೊಂದಿಗೆ ಹಣಕಾಸು ವ್ಯವಹಾರ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಇ.ಡಿ. ಅಧಿಕಾರಿಗಳು ಮಾಜಿ ಸಂಸದ ಡಿ.ಕೆ.ಸುರೇಶ್‌ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

112 ಹುದ್ದೆ ನೇಮಕಾತಿ ಮುಂದುವರಿಕೆಗೆ ಕೆಪಿಎಸ್ಸಿಗೆ ನೀಡಿದ್ದ ಅನುಮತಿ ವಾಪಸ್!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌