ಕೆಎಸ್‌ಆರ್‌ಟಿಸಿ ಮೊದಲ ಎಲೆಕ್ಟ್ರಿಕ್‌ ಬಸ್‌ ಸಂಚಾರ ಶೀಘ್ರ

By Kannadaprabha NewsFirst Published Oct 12, 2022, 9:31 AM IST
Highlights

ನಿಗಮಕ್ಕೆ 350 ಇ-ಬಸ್‌ ಖರೀದಿಗೆ ಒಪ್ಪಂದ, ಅ.15ರವೇಳೆಗೆ ಪ್ರಾಯೋಗಿಕ ಸಂಚಾರ, ಸರ್ಕಾರಿ ಬಸ್‌ಗಳಲ್ಲಿ ಇ-ಟಿಕೆಟ್‌ ಜಾರಿಗೆ ಚಿಂತನೆ: ಚಂದ್ರಪ್ಪ

ಮಂಗಳೂರು(ಅ.12):  ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿಗಾಗಿ ಒಟ್ಟು 350 ಎಲೆಕ್ಟ್ರಿಕ್‌ ಬಸ್‌(ಇ-ಬಸ್‌) ಖರೀದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು, ಅ.15ರ ವೇಳೆಗೆ ಮೊದಲ ಇ-ಬಸ್‌ ಪ್ರಾಯೋಗಿಕ ಸಂಚಾರ ನಡೆಸಲಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ)ಅಧ್ಯಕ್ಷ ಎಂ.ಚಂದ್ರಪ್ಪ ಹೇಳಿದ್ದಾರೆ. ಬೆಂಗಳೂರಿನಿಂದ ಮೈಸೂರು, ಶಿವಮೊಗ್ಗ, ಮಡಿಕೇರಿ, ದಾವಣಗೆರೆಗೆ ಪ್ರಯೋಗಿಕವಾಗಿ ಎಲೆಕ್ಟ್ರಿಕ್‌ ಬಸ್‌ ಸಂಚರಿಸುವ ಸಾಧ್ಯತೆ ಇದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್‌ ಕಾರಣಕ್ಕೆ ಕಳೆದೆರಡು ವರ್ಷ ಯಾವುದೇ ಹೊಸ ಬಸ್‌ಗಳ ಖರೀದಿ ಸಾಧ್ಯವಾಗಲಿಲ್ಲ. 650 ಹೊಸ ಬಸ್‌ಗಳ ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗೆ ಒಪ್ಪಿಗೆ ನೀಡುವ ನಿರೀಕ್ಷೆ ಇದೆ ಎಂದರು.

ಪ್ರಸ್ತುತ ಖರೀದಿಸುವ ಇ-ಬಸ್‌ಗಳು ಅತ್ಯಾಧುನಿಕ ಮಾದರಿಯದ್ದಾಗಿದ್ದು, ಮೊದಲ ಹಂತದಲ್ಲಿ 50 ಇ-ಬಸ್‌ ಆಗಮಿಸಲಿದೆ. ಭವಿಷ್ಯದಲ್ಲಿ ಡೀಸೆಲ್‌, ಪೆಟ್ರೋಲ್‌ ಬದಲು ಇ-ಬಸ್‌ಗಳ ಓಡಾಟ ಹೆಚ್ಚಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

Electric Buses in Karnataka: 2030ಕ್ಕೆ ಎಲ್ಲ ಸರ್ಕಾರಿ ಬಸ್‌ ಎಲೆಕ್ಟ್ರಿಕ್‌: ಸಚಿವ ರಾಮುಲು

ಇ-ಟಿಕೆಟ್‌ಗೆ ಯೋಚನೆ: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಇ-ಟಿಕೆಟ್‌ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಈಗಾಗಲೇ ಕೆಲ ಖಾಸಗಿ ಬಸ್‌ಗಳಲ್ಲಿ ಇ-ಟಿಕೆಟ್‌ ಸೌಲಭ್ಯ ಗಮನಕ್ಕೆ ಬಂದಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಇಟಿಎಂ ಮಿಷನ್‌ ಮೂಲಕ ಇ-ಟಿಕೆಟ್‌ ಯೋಜನೆ ಕಾರ್ಯಗತಗೊಳಿಸಲು ಯೋಚಿಸಲಾಗುವುದು. ಇಂಧನ ಬೆಲೆ ಏರಿಕೆಯಾದರೂ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಯಾಣ ದರ ಏರಿಕೆ ಮಾಡದಿರಲು ನಿರ್ಧರಿಸಲಾಗಿದೆ ಎಂದರು.
ಒಂದೇ ದಿನ .22.56 ಕೋಟಿ: ಕೆಎಸ್‌ಆರ್‌ಟಿಸಿ ಸೋಮವಾರ ಒಂದೇ ದಿನದಲ್ಲಿ .22.56 ಕೋಟಿ ಗರಿಷ್ಠ ಲಾಭ ಗಳಿಸಿದೆ. ಕಳೆದ ಎರಡು ವರ್ಷದ ಇತಿಹಾಸದಲ್ಲಿ ದಿನವೊಂದರ ದಾಖಲೆಯ ಗಳಿಕೆ ಇದು. ಬಾಕಿ ದಿನಗಳಲ್ಲಿ ಸರಾಸರಿ .12 ಕೋಟಿ ಆದಾಯ ಬರುತ್ತಿದೆ ಎಂದರು.

ಕರಾವಳಿಯಲ್ಲಿ ಪ್ಯಾಕೆಜ್‌ ಟೂರ್‌

ಕರಾವಳಿಯಲ್ಲಿ ವಾರಾಂತ್ಯ ಹಾಗೂ ಹಬ್ಬದ ದಿನಗಳಲ್ಲಿ ಪ್ಯಾಕೆಜ್‌ ಟೂರ್‌ ಆಯೋಜಿಸುವ ಬಗ್ಗೆ ಕೆಎಸ್‌ಆರ್‌ಟಿಸಿ ವಿಭಾಗೀಯ ಅಧಿಕಾರಿಗಳಿಗೆ ಅಧ್ಯಕ್ಷ ಚಂದ್ರಪ್ಪ ಒಪ್ಪಿಗೆ ಸೂಚಿಸಿದರು. ಅ.21ರಿಂದ 27ರ ವರೆಗೆ ದೀಪಾವಳಿ ಟೂರ್‌ ಪ್ಯಾಕೇಜ್‌ ಮಾಡಲಾಗುವುದು. ಮಂಗಳೂರು, ಉಡುಪಿ ಹಾಗೂ ಕುಂದಾಪುರ ವಿಭಾಗದಲ್ಲಿ ದೇವಸ್ಥಾನಗಳಿಗೆ ಒಂದೇ ದಿನದಲ್ಲಿ ಬಂದುಹೋಗುವ ಪ್ಯಾಕೆಜ್‌ ಹಮ್ಮಿಕೊಳ್ಳಲಾಗುವುದು. ವಾರಾಂತ್ಯದಲ್ಲೂ ವಿಶೇಷ ಟೂರ್‌ ಪ್ಯಾಕೆಜ್‌ ಒದಗಿಸಲಾಗುವುದು. 2 ದಿನಗಳ ದೇವಸ್ಥಾನ ಟೂರ್‌ಗೂ ಅವಕಾಶ ಕಲ್ಪಿಸಲಾಗುವುದು ಎಂದು ಚಂದ್ರಪ್ಪ ಹೇಳಿದರು.
 

click me!