ಕೃಷ್ಣರಾಜಸಾಗರ ಅಣೆಕಟ್ಟು ನೀರಿನ ಮಟ್ಟ ಇದೀಗ 100 ಅಡಿಗೆ ಕುಸಿತವಾಗಿದೆ. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಜಲಾಶಯದ ನೀರಿನ ಮಟ್ಟದಲ್ಲಿ ಕಡಿಮೆಯಾಗಿದೆ.
ಮಂಡ್ಯ (ಮಾ.25): ಕೃಷ್ಣರಾಜಸಾಗರ ಅಣೆಕಟ್ಟು ನೀರಿನ ಮಟ್ಟ ಇದೀಗ 100 ಅಡಿಗೆ ಕುಸಿತವಾಗಿದೆ. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಜಲಾಶಯದ ನೀರಿನ ಮಟ್ಟದಲ್ಲಿ ಕಡಿಮೆಯಾಗಿದೆ. ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಕುಡಿವ ನೀರಿಗೆ ತೊಂದರೆಯಾಗದಿದ್ದರೂ, ಬೇಸಿಗೆ ಬೆಳೆಗಳಿಗೆ ನೀರು ಪೂರೈಸುವುದು ಕಷ್ಟಕರ ಎನ್ನುವ ಪರಿಸ್ಥಿತಿ ಸೃಷ್ಟಿಯಾಗಿದೆ. ಪ್ರಸ್ತುತ ಜಲಾಶಯದಲ್ಲಿ 100.08 ಅಡಿ ನೀರು ಸಂಗ್ರಹವಾಗಿದ್ದು, 138 ಕ್ಯುಸೆಕ್ ಒಳಹರಿವು, 4420 ಕ್ಯುಸೆಕ್ ಹೊರಹರಿವು ದಾಖಲಾಗಿತ್ತು.
ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯದಲ್ಲಿ 9 ಅಡಿಯಷ್ಟು ನೀರು ಕಡಿಮೆ ಇರುವುದು ಕಂಡು ಬಂದಿದೆ. ಕಳೆದ ನಾಲ್ಕು ವರ್ಷಗಳಿಂದ ಕಾವೇರಿ ಕಣಿವೆ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ನೀರಿಗೆ ಕೊರತೆ ಎದುರಾಗಿರಲಿಲ್ಲ. ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿದ್ದದ್ದು ಕಾವೇರಿ ಕಣಿವೆ ಭಾಗದ ಜನರಲ್ಲೂ ನೆಮ್ಮದಿಯನ್ನು ತರಿಸಿತ್ತು. ಇದೀಗ ಬೇಸಿಗೆ ಆರಂಭಗೊಂಡಿದೆ. ನಿರೀಕ್ಷೆಯಂತೆ ಜಲಾಶಯದಲ್ಲಿ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಮಳೆಗಾಲ ಆರಂಭಕ್ಕೆ ಇನ್ನೂ ಮೂರು ತಿಂಗಳಿದೆ.
ರಾಹುಲ್ ಗಾಂಧಿಗೆ ಜೈಲು ಶಿಕ್ಷೆ, ಅನರ್ಹ: ಇವೆಲ್ಲದಕ್ಕೂ ಕಾರಣ ಮುಳಬಾಗಿಲು ಸಾಕ್ಷಿ ರಘುನಾಥ್
ಈ ಸಮಯದಲ್ಲಿ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಜಿಲ್ಲೆಗಳ ಜನರ ಕುಡಿವ ನೀರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಏಕೆಂದರೆ, ಜಲಾಶಯದಲ್ಲಿ 60 ಅಡಿಯವರೆಗೂ ಕುಡಿವ ನೀರು ಪೂರೈಸುವುದಕ್ಕೆ ಅವಕಾಶವಿದೆ. ಹಾಲಿ ಬೇಸಿಗೆ ಬೆಳೆಗಳಿಗೆ ನೀರನ್ನು ಹರಿಸಲಾಗುತ್ತಿದೆ. 15 ದಿನಗಳಿಗೊಮ್ಮೆ 4420 ಕ್ಯೂಸೆಕ್ ನೀರನ್ನು ನಾಲೆಗಳಿಗೆ ಹರಿಯಬಿಡಲಾಗುತ್ತಿದೆ. ಮಾಚ್‌ರ್ ತಿಂಗಳ ಕೊನೆಯ ವಾರದಲ್ಲಿ ಕೆಆರ್‌ಎಸ್ ನೀರಿನ ಮಟ್ಟ100 ಅಡಿ ತಲುಪಿದೆ. ಹೀಗಾಗಿ ಬೇಸಿಗೆ ಅಂತ್ಯದವರೆಗೆ ಜಲಾಶಯದಿಂದ ಬೆಳೆಗಳಿಗೆ ನೀರು ಹರಿಸಲು ಕಷ್ಟಸಾಧ್ಯವಾಗುವ ಸಾಧ್ಯತೆಗಳಿವೆ.
ಕಳೆದ ವರ್ಷ ಮುಂಗಾರು ಬಿರುಸಾಗಿದ್ದರಿಂದ ಜುಲೈ ತಿಂಗಳಲ್ಲೇ ಅಣೆಕಟ್ಟು ಭರ್ತಿಯಾಗಿತ್ತು. ನಾಲ್ಕು ವರ್ಷಗಳಿಂದಲೂ ಬೇಸಿಗೆ ಅವಧಿಯಲ್ಲೂ ನೀರಿನ ಮಟ್ಟತೃಪ್ತಿದಾಯಕ ಹಂತದಲ್ಲಿತ್ತು. ಇದೀಗ ಜಲಾಶಯದ ನೀರಿನ ಮಟ್ಟ100 ಅಡಿಗೆ ಕುಸಿದಿರುವುದು ಸ್ವಲ್ಪ ಪ್ರಮಾಣದ ಆತಂಕ ಸೃಷ್ಟಿಸಿದೆ. ಬೇಸಿಗೆ ಕಳೆಯಲು ಇನ್ನೂ ಎರಡು ತಿಂಗಳಿದೆ. ಈ ವರ್ಷ ಮಳೆಯ ಪರಿಸ್ಥಿತಿ ಏನಾಗುವುದೋ ಇನ್ನೂ ಗೊತ್ತಾಗಿಲ್ಲ. ಕಳೆದ ಮೂರು ವರ್ಷದಂತೆ ಮಳೆಯ ಆಗಮನವಾದ್ರೆ ರೈತರು ಸಂತಸದಿಂದ ಇರಬಹುದು.
ಕೋಲಾರ, ವರುಣಾ ಎರಡೂ ಕಡೆ ಸ್ಪರ್ಧೆಗೆ ಸಿದ್ದರಾಮಯ್ಯ ಸಿದ್ಧತೆ: ಹೈಕಮಾಂಡ್‌ನಿಂದಲೂ ಒಪ್ಪಿಗೆ ಸಾಧ್ಯತೆ
ನಾಲ್ಕು ವರ್ಷಗಳಲ್ಲಿ ನೀರಿನ ಪ್ರಮಾಣ
ವರ್ಷ ಅಡಿ ಒಳಹರಿವು ಹೊರಹರಿವು
2018 80.34 169 ಕ್ಯೂ. 1134 ಕ್ಯೂ.
2019 100.67 122 ಕ್ಯೂ. 3871 ಕ್ಯೂ.
2020 107.69 106 ಕ್ಯೂ. 3736 ಕ್ಯೂ.
2021 103.67 200 ಕ್ಯೂ. 4142 ಕ್ಯೂ.
2022 109.11 208 ಕ್ಯೂ. 4310 ಕ್ಯೂ.