ಎಸ್ಸಿ ಎಸ್ಟಿಗೆ ಮೋದಿ, ಬೊಮ್ಮಾಯಿ ದ್ರೋಹ: ಸುರ್ಜೇವಾಲಾ

By Kannadaprabha NewsFirst Published Mar 25, 2023, 4:00 AM IST
Highlights

ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಮಾಡಲು ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು ಐದು ತಿಂಗಳಾದರೂ 9ನೇ ಶೆಡ್ಯೂಲ್‌ಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಿಲ್ಲ. ತನ್ಮೂಲಕ ಕೇವಲ ಚುನಾವಣಾ ಲಾಭಕ್ಕಾಗಿ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳದ ನಾಟಕವಾಡಿರುವುದು ಬಹಿರಂಗವಾಗಿದೆ: ರಣದೀಪ್‌ಸಿಂಗ್‌ ಸುರ್ಜೆವಾಲಾ 

ಬೆಂಗಳೂರು(ಮಾ.25): ಪರಿಶಿಷ್ಟಜಾತಿ ಹಾಗೂ ಪಂಗಡಗಳ ಮೀಸಲಾತಿ ಬಗ್ಗೆ ಸುಳ್ಳು ಭರವಸೆ ನೀಡುವ ಮೂಲಕ ಪರಿಶಿಷ್ಟರಿಗೆ ನರೇಂದ್ರ ಮೋದಿ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರ ದ್ರೋಹ ಮಾಡಿದ್ದಾರೆ. ಮುಂಬರುವ ಚುನಾವಣೆಯಲ್ಲಿನ ಹೀನಾಯ ಸೋಲಿನಿಂದ ಪಾರಾಗಲು ಮೀಸಲಾತಿ ಹೆಚ್ಚಳದ ನಾಚಿಕೆಗೇಡು ತಂತ್ರಕ್ಕೆ ಇಳಿದಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲಾ ಕಿಡಿ ಕಾರಿದ್ದಾರೆ. 

ಶನಿವಾರ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದಲಿತರಿಗೆ ಮಾಡಿರುವ ದ್ರೋಹದ ಬಗ್ಗೆ ಹೊಣೆ ಹೊತ್ತು ಕ್ಷಮೆ ಕೇಳುವರೇ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಮಾಡಲು ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು ಐದು ತಿಂಗಳಾದರೂ 9ನೇ ಶೆಡ್ಯೂಲ್‌ಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಿಲ್ಲ. ತನ್ಮೂಲಕ ಕೇವಲ ಚುನಾವಣಾ ಲಾಭಕ್ಕಾಗಿ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳದ ನಾಟಕವಾಡಿರುವುದು ಬಹಿರಂಗವಾಗಿದೆ ಎಂದಿದ್ದಾರೆ.

ಮೋದಿಯಿಂದ ಅಪೂರ್ಣ ಮೆಟ್ರೋ ಉದ್ಘಾಟನೆ: ಸುರ್ಜೇವಾಲಾ

ಇದೀಗ ಕಾಂಗ್ರೆಸ್‌ ಹೋರಾಟಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ನಾಮ್‌-ಕೆ ವಾಸ್ತೆ ಎಂಬಂತೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಪರಿಶಿಷ್ಟರ ವಿಚಾರದಲ್ಲಿ ನಕಲಿ, ಮೋಸ ಹಾಗೂ ದ್ರೋಹದ ತಂತ್ರ ಅನುಸರಿಸುತ್ತಿವೆ ಎಂದು ಟೀಕಿಸಿದ್ದಾರೆ.

ಮೋದಿ ಹಾಗೂ ಬಿಜೆಪಿ ಸರ್ಕಾರ ಪರಿಶಿಷ್ಟರ ಡಿಎನ್‌ಎ ಹೊಂದಿದೆ. ಪರಿಶಿಷ್ಟರನ್ನು ಸುಳ್ಳುಗಳ ಮೂಲಕ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಬಿಜೆಪಿಯ ಕುತಂತ್ರ, ಮೋಸ ಎಲ್ಲವೂ ಈಗ ಬಟಾಬಯಲಾಗಿದೆ. ಬೊಮ್ಮಾಯಿ ಅವರ ಸರ್ಕಾರ ಸುಮಾರು ನಾಲ್ಕು ವರ್ಷಗಳ ಕಾಲ ನಾಗಮೋಹನ್‌ ದಾಸ್‌ ಅವರ ಸಮಿತಿ ವರದಿಯನ್ನು ಜಾರಿ ಮಾಡಲಿಲ್ಲ. ಭಾರತ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ… ಗಾಂಧಿ ಅವರು ಈ ವಿಚಾರವಾಗಿ ಧ್ವನಿ ಎತ್ತುವವರೆಗೂ ಬಿಜೆಪಿ ಸರ್ಕಾರ ಪರಿಶಿಷ್ಟರ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಮೌನವಾಗಿತ್ತು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಮಾ.14 ರಂದು ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಎಸ್ಸಿ,ಎಸ್ಟಿಮೀಸಲಾತಿ ಹೆಚ್ಚಳ ಸಾಧ್ಯವಿಲ್ಲ. ಒಟ್ಟಾರೆ ಮೀಸಲಾತಿ ಶೇ.50ಕ್ಕಿಂತ ಹೆಚ್ಚು ಮಾಡಲ್ಲ ಎಂದು ಹೇಳಿದೆ. ಮಾ.24 ರಂದು ಕಾಂಗ್ರೆಸ್‌ ಪಕ್ಷ ರಾಜಭವನ ಚಲೋಗೆ ಕರೆ ನೀಡಿದ ಬಳಿಕ ಇದೀಗ ಕೇಂದ್ರಕ್ಕೆ ಶಿಫಾರಸು ಸಲ್ಲಿಸಿದ್ದಾರೆ. ಕೇಂದ್ರವು ಮೀಸಲಾತಿ ಹೆಚ್ಚಳ ಮಾಡುವುದಿಲ್ಲ ಎಂದಾದರೆ ರಾಜ್ಯದಲ್ಲಿ ಈ ನಾಟಕ ಯಾಕೆ? ಎಂದು ಕಿಡಿ ಕಾರಿದರು.

click me!