ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಈ ಅವಧಿಯಲ್ಲಿ ಕೊನೆಯದು ಎನ್ನಲಾದ ಸಚಿವ ಸಂಪುಟ ಸಭೆಯಲ್ಲಿ ಅತ್ಯಂತ ಮಹತ್ವದ್ದು ಎನ್ನುವಂಥ ‘ಮೀಸಲಾತಿ ನಿರ್ಣಯ’ ಕೈಗೊಂಡಿದೆ.
ಬೆಂಗಳೂರು (ಮಾ.25): ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಈ ಅವಧಿಯಲ್ಲಿ ಕೊನೆಯದು ಎನ್ನಲಾದ ಸಚಿವ ಸಂಪುಟ ಸಭೆಯಲ್ಲಿ ಅತ್ಯಂತ ಮಹತ್ವದ್ದು ಎನ್ನುವಂಥ ‘ಮೀಸಲಾತಿ ನಿರ್ಣಯ’ ಕೈಗೊಂಡಿದೆ. ಮೀಸಲು ಅಸ್ತ್ರವನ್ನು ಪ್ರಯೋಗಿಸುವ ಮೂಲಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿರುವ ವಿವಿಧ ಸಮುದಾಯಗಳನ್ನು ಸಮಾಧಾನಪಡಿಸುವ ಹಾಗೂ ಒಲವು ಗಳಿಸುವ ಪ್ರಯತ್ನ ಮಾಡಿದೆ. ಪ್ರವರ್ಗ 2ಬಿ ಅಡಿ ಮುಸ್ಲಿಂ ಸಮುದಾಯಕ್ಕೆ ಇದ್ದ ಶೇ.4ರಷ್ಟು ಮೀಸಲಾತಿಯನ್ನು ತೆಗೆದು ಹಾಕಲಾಗಿದೆ.
ಇದೇ ಮೀಸಲನ್ನು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಗೆ ತಲಾ ಶೇ.2ರಷ್ಟು ಹಂಚಿಕೆ ಮಾಡಿ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ. ಅಂದರೆ, ಪಂಚಮಸಾಲಿಯನ್ನೂ ಒಳಗೊಂಡಂತೆ ಲಿಂಗಾಯತ ಸಮುದಾಯಕ್ಕೆ ಶೇ.5ರಿಂದ ಶೇ.7ರಷ್ಟು ಹೆಚ್ಚಳ, ಒಕ್ಕಲಿಗ ಸಮುದಾಯಕ್ಕೆ 4ರಿಂದ ಶೇ.6ಕ್ಕೆ ಹೆಚ್ಚಳವಾಗಲಿದೆ. ಅಲ್ಲದೆ, ಬಹುದಿನಗಳ ಬೇಡಿಕೆ ಇದ್ದ ಪರಿಶಿಷ್ಟ ಜಾತಿಯ ಒಳಮೀಸಲಾತಿಗೂ ಸಂಪುಟ ಸಭೆ ಒಪ್ಪಿಗೆ ನೀಡಿ, ಹಂಚಿಕೆ ಮಾಡಿ ನಿರ್ಣಯ ಕೈಗೊಳ್ಳಲಾಗಿದೆ. ಇದನ್ನು ಶೀಘ್ರದಲ್ಲಿಯೇ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಬಗ್ಗೆಯೂ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕೋಲಾರ, ವರುಣಾ ಎರಡೂ ಕಡೆ ಸ್ಪರ್ಧೆಗೆ ಸಿದ್ದರಾಮಯ್ಯ ಸಿದ್ಧತೆ: ಹೈಕಮಾಂಡ್‌ನಿಂದಲೂ ಒಪ್ಪಿಗೆ ಸಾಧ್ಯತೆ
ಮುಸ್ಲಿಮರಿಗೆ ಇಬ್ಲ್ಯುಎಸ್ ಮೀಸಲು: ಒಂದಡೆ ಲಿಂಗಾಯತ, ಒಕ್ಕಲಿಗ ಸಮದಾಯಕ್ಕೆ ಮೀಸಲಾತಿ ಹೆಚ್ಚಿಸಿದರೆ, ಮತ್ತೊಂದೆಡೆ ಮುಸ್ಲಿಂ ಸಮುದಾಯವನ್ನು ಆರ್ಥಿಕ ಹಿಂದುಳಿದ ವರ್ಗಕ್ಕೆ (ಇಡಬ್ಲ್ಯೂಎಸ್) ಇರುವ ಮೀಸಲಾತಿಯಡಿಯಲ್ಲಿ ಸೇರಿಸಲಾಗಿದೆ. ಇಷ್ಟು ವರ್ಷಗಳ ಕಾಲ ಪ್ರವರ್ಗ 2ಬಿ ಅಡಿ ಶೇ.4ರಷ್ಟು ಮೀಸಲಾತಿ ಪಡೆದುಕೊಳ್ಳುತ್ತಿದ್ದ ಮುಸ್ಲಿಂ ಸಮುದಾಯವು ಇನ್ನು ಮುಂದೆ ಇಡಬ್ಲ್ಯೂಎಸ್‌ಗೆ ಇರುವ ಶೇ.10ರಷ್ಟು ಮೀಸಲಾತಿ ಅಡಿಯಲ್ಲಿ ಬರಲಿದೆ. ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಈ ವಿಷಯ ತಿಳಿಸಿದ್ದಾರೆ. ಆದರೆ, ಶೇ.10ರಷ್ಟು ಮೀಸಲಾತಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಎಷ್ಟು ಶೇಕಡಾವಾರು ಪ್ರಮಾಣವನ್ನು ಒದಗಿಸಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ.
ಮೀಸಲು ಬದಲು ಹಿಂದೆ ಲೆಕ್ಕಾಚಾರ: ಸರ್ಕಾರ ಕೈಗೊಂಡಿರುವ ಈ ತೀರ್ಮಾನ ವಿರುದ್ಧ ಮುಸ್ಲಿಂ ಸಮುದಾಯವು ಹೋರಾಟಕ್ಕಿಳಿದರೂ ರಾಜಕೀಯವಾಗಿ ಹಿಂದುತ್ವ ಆಧಾರದ ಮೇಲೆ ನಿಭಾಯಿಸುವ ಲೆಕ್ಕಾಚಾರ ಮಾಡಲಾಗಿದೆ. ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡದೆ ಒಟ್ಟಾರೆ ಲಿಂಗಾಯತ ಸಮುದಾಯಕ್ಕೆ ಇದ್ದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಪ್ರವರ್ಗ 3ಬಿಯಲ್ಲಿ ಪ್ರಸ್ತುತ ಶೇ.5ರಷ್ಟು ಮೀಸಲಾತಿ ಇದೆ. ಇದನ್ನು ಪ್ರವರ್ಗ 2ಡಿ ಎಂದು ಬದಲಿಸಿ ಮೀಸಲಾತಿಯ ಪ್ರಮಾಣವನ್ನು ಶೇ.7ರಷ್ಟು ಹೆಚ್ಚಳ ಮಾಡಲಾಗಿದೆ. ಅಂತೆಯೇ ಒಕ್ಕಲಿಗ ಸಮುದಾಯವು ಸಹ ಮೀಸಲಾತಿಗೆ ಬೇಡಿಕೆ ಇಟ್ಟಿದ್ದರಿಂದ ಪ್ರವರ್ಗ 3ಎನಿಂದ ಪ್ರವರ್ಗ 2ಸಿ ಮಾಡಲಾಗಿದೆ. ಅಲ್ಲದೇ, ಪ್ರಸ್ತುತ ಶೇ.4ರಷ್ಟು ಇರುವ ಮೀಸಲಾತಿಯನ್ನು ಶೇ.6ಕ್ಕೆ ಹೆಚ್ಚಳ ಮಾಡಲಾಗಿದೆ. ಬೆಳಗಾವಿ ಅಧಿವೇಶನದ ವೇಳೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರಿಂದ ಮಧ್ಯಂತರ ವರದಿ ತರಿಸಿಕೊಂಡು ಈ ಬಗ್ಗೆ ಅಧ್ಯಯನ ನಡೆಸಿದ ಸರ್ಕಾರ ಈಗ ಅದನ್ನು ಘೋಷಣೆ ಮಾಡಿದೆ.
ಒಳಮೀಸಲು ನಾಲ್ಕು ಗುಂಪುಗಳಾಗಿ ವಿಂಗಡಣೆ: ಈ ನಡುವೆ ಪರಿಶಿಷ್ಟ ಜಾತಿಯಲ್ಲಿ ಬಹುವರ್ಷಗಳಿಂದ ಕೇಳಿಬರುತ್ತಿದ್ದ ಒಳಮೀಸಲಾತಿಗೂ ರಾಜ್ಯ ಸರ್ಕಾರ ಸ್ಪಂದಿಸಿ ಸಚಿವ ಸಂಪುಟ ಸಭೆ ಅಸ್ತು ಎಂದಿದೆ. ಈಗಾಗಲೇ ಎಸ್‌ಸಿ ಸಮುದಾಯಕ್ಕೆ ಇದ್ದ ಮೀಸಲಾತಿ ಪ್ರಮಾಣವನ್ನು ಶೇ.15ರಿಂದ ಶೇ.17ಕ್ಕೆ ಹೆಚ್ಚಳ ಮಾಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಶೇ.17ಕ್ಕೆ ಅನ್ವಯವಾಗುವಂತೆ ಸಚಿವ ಸಂಪುಟ ಸಭೆಯು ಒಳಮೀಸಲಾತಿಯನ್ನು ಹಂಚಿಕೆ ಮಾಡಿದೆ. ಕಲಂ 341(2) ಅನ್ವಯ ನಾಲ್ಕು ಗುಂಪುಗಳಾಗಿ ವಿಂಗಡಣೆ ಮಾಡಲಾಗಿದೆ. ಎಡಗೈ ಸಮುದಾಯಕ್ಕೆ ಶೇ.6ರಷ್ಟು, ಬಲಗೈ ಸಮುದಾಯಕ್ಕೆ ಶೇ.5.5ರಷ್ಟು, ಸ್ಪೃಶ್ಯ ದಲಿತ ಸಮದಾಯಕ್ಕೆ ಶೇ.4.5ರಷ್ಟು ಇತರರಿಗೆ ಶೇ.1ರಷ್ಟು ಒಳಮೀಸಲಾತಿ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮತ್ತು ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಕಲ್ಪಿಸುವ ಕುರಿತು ಕೈಗೊಂಡಿರುವ ಮಹತ್ವದ ನಿರ್ಣಯವನ್ನು ಅನುಷ್ಠಾನಗೊಳಿಸುವ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಲಿದೆ. ಇದೇ ವೇಳೆ ಕಾಡುಗೊಲ್ಲರ ಬಗ್ಗೆ ಅಭಿಪ್ರಾಯ ತಿಳಿಸಲು ಕೇಂದ್ರ ಸೂಚಿಸಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗಿದೆ. ಕೋಲಿ ಸಮುದಾಯ ವಿಚಾರವು ಸಹ ಕೇಂದ್ರದಲ್ಲಿದೆ. ಕಾಡು ಕುರುಬ, ಗೊಂಡ ಕುರುಬವನ್ನು ಪರಿಶಿಷ್ಟಜಾತಿಗೆ ಸೇರಿಸುವ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದ್ದು, ಕೇಂದ್ರಕ್ಕೆ ಶಿಫಾರಸು ಮಾಡುವ ಬಗ್ಗೆ ಚರ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.
ಮೈಸೂರಲ್ಲಿ ಚಿತ್ರನಗರಿ ನಿರ್ಮಾಣ ಸದ್ಯದಲ್ಲೇ ಆರಂಭ: ಸಿಎಂ ಬೊಮ್ಮಾಯಿ
ಒಕ್ಕಲಿಗ, ಲಿಂಗಾಯತ ಮೀಸಲು ಹೆಚ್ಚಳ ಹೇಗೆ?
- ಪ್ರವರ್ಗ 2ಡಿಯಲ್ಲಿರುವ ಲಿಂಗಾಯತ ಸಮುದಾಯದ ಮೀಸಲು ಶೇ.5ರಿಂದ ಶೇ.7ಕ್ಕೆ ಹೆಚ್ಚಳ
- ಪ್ರವರ್ಗ 2ಸಿಯಲ್ಲಿರುವ ಒಕ್ಕಲಿಗ ಸಮುದಾಯದ ಮೀಸಲು ಶೇ.4ರಿಂದ ಶೇ.6ಕ್ಕೆ ಹೆಚ್ಚಳ
- ಈ 2 ವರ್ಗಕ್ಕೆ ಬೇಕಾದ ಮೀಸಲು ಹೆಚ್ಚಳವನ್ನು ಪಡೆದುಕೊಂಡಿರುವುದು 4% ಮುಸ್ಲಿಂ ಮೀಸಲು ರದ್ದತಿಯಿಂದ
ಎಸ್‌ಸಿ ಒಳಮೀಸಲಾತಿ ಹೇಗೆ?
ಎಡಗೈ ಸಮದಾಯಕ್ಕೆ- ಶೇ.6
ಬಲಗೈ ಸಮುದಾಯಕ್ಕೆ- ಶೇ.5.5
ಸ್ಪಶ್ಯ ದಲಿತ ಸಮದಾಯಕ್ಕೆ- ಶೇ.4.5
ಇತರರಿಗೆ- ಶೇ.1