ಕೆಆರ್‌ಎಸ್‌ಗೆ ಭರ್ಜರಿ ಒಳಹರಿವು, ಒಂದೇ ದಿನ 3 ಅಡಿ ನೀರು ಹೆಚ್ಚಳ; ರೈತರಲ್ಲಿ ಸಂಭ್ರಮ

Published : May 27, 2025, 06:15 PM IST
KRS Dam

ಸಾರಾಂಶ

ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಅಣೆಕಟ್ಟಿಗೆ ಭರ್ಜರಿ ಒಳಹರಿವು ದಾಖಲಾಗಿದೆ. ಒಂದೇ ದಿನದಲ್ಲಿ 3 ಅಡಿ ನೀರು ಹೆಚ್ಚಳವಾಗಿದ್ದು, ಕೃಷಿಕ ಸಮುದಾಯದಲ್ಲಿ ಸಂತಸ ಮೂಡಿದೆ. ಮುಂಗಾರು ಮಳೆ ಬೇಗನೆ ಆರಂಭವಾಗಿದ್ದು, ಮೇ ತಿಂಗಳಲ್ಲಿಯೇ ಉತ್ತಮ ಒಳಹರಿವು ಬಂದಿದೆ.

ಮಂಡ್ಯ (ಮೇ 27): ರಾಜ್ಯದಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ಭರ್ಜರಿಯಾಗಿಯೇ ಶುರುವಾಗಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ (ಕೃಷ್ಣರಾಜ ಸಾಗರ) ಅಣೆಕಟ್ಟಿಗೆ ಭರ್ಜರಿಯಾದ ಒಳಹರಿವು ದಾಖಲಾಗಿದೆ. ಹಲವಾರು ವರ್ಷಗಳ ಬಳಿಕ ಮೇ ತಿಂಗಳಲ್ಲಿ ಇಷ್ಟು ಪ್ರಮಾಣದ ಮಳೆ ಹಾಗೂ ಒಳಹರಿವು ಕಂಡುಬಂದಿದ್ದು, ಕೃಷಿಕ ಸಮುದಾಯದಲ್ಲಿ ಸಂತಸ ಮೂಡಿಸಿದೆ. ಇನ್ನು ಒಂದೇ ದಿನದಲ್ಲಿ ಕೆಆರ್‌ಎಸ್ ಜಲಾಶಯದಲ್ಲಿ 3 ಅಡಿ ನೀರು ಹೆಚ್ಚಳವಾಗಿದೆ.

ಒಂದೇ ದಿನ 3 ಅಡಿ ಹೆಚ್ಚಾದ ನೀರಿನ ಮಟ್ಟ:

ಕೆಆರ್‌ಎಸ್ ಜಲಾಶಯದಲ್ಲಿ ಕಳೆದ ಎರಡು ದಿನಗಳಿಂದಲೂ ನೀರಿನ ಸಂಗ್ರಹಣೆ ಮಟ್ಟ 89 ಅಡಿಯಾಗಿತ್ತು. ನಿನ್ನೆ ಮತ್ತಷ್ಟು ಕುಸಿಯುವ ಆತಂಕದ ನಡುವೆಯೇ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಒಂದೇ ದಿನಕ್ಕೆ 92 ಅಡಿಗೆ ತಲುಪಿದೆ. ಅಂದರೆ ಒಂದು ದಿನದಲ್ಲೇ 3 ಅಡಿ ನೀರಿನ ಮಟ್ಟ ಹೆಚ್ಚಾಗಿರುವುದು ಕಳೆದ ಕೆಲವು ವರ್ಷಗಳಲ್ಲಿಯೇ ಅಪರೂಪವಾಗಿತ್ತು. ಇದರಿಂದಾಗಿ ಕೆಆರ್‌ಎಸ್‌ನ ಸಂಗ್ರಹ ಸಾಮರ್ಥ್ಯದಲ್ಲೂ ತುಸು ಹೆಚ್ಚಳವಾಗಿರುವುದು ಕಂಡುಬಂದಿದೆ.

ಕೆಆರ್‌ಎಸ್ ಜಲಾಶಯ ನೀರಿನ ಮಟ್ಟ ಅಂಕಿಅಂಶ:

  • ಗರಿಷ್ಠ ನೀರಿನ ಮಟ್ಟ: 124.80 ಅಡಿ
  • ಇಂದಿನ ನೀರಿನ ಮಟ್ಟ: 92.00 ಅಡಿ
  • ಗರಿಷ್ಠ ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
  • ಇಂದಿನ ನೀರಿನ ಸಂಗ್ರಹ: 17.163 ಟಿಎಂಸಿ
  • ಒಳಹರಿವು: 19,129 ಕ್ಯೂಸೆಕ್
  • ಹೊರ ಹರಿವು: 354 ಕ್ಯೂಸೆಕ್

ಮಡಿಕೇರಿ ಭಾಗದ ಮಳೆಯ ಪ್ರಭಾವ

ಮಡಿಕೇರಿ ಭಾಗದಲ್ಲಿ ಇತ್ತೀಚೆಗೆ ಸುರಿದ ಉತ್ತಮ ಮಳೆಯು ಪ್ರಮುಖ ಜಲಾನಯನ ಪ್ರದೇಶಗಳಲ್ಲಿ ತಕ್ಷಣದ ಪ್ರಭಾವ ಬೀರಿದ್ದು, ಕೆಆರ್‌ಎಸ್‌ಗೆ ಹರಿದುಬರುವ ಒಳಹರಿವಿಗೆ ಕಾರಣವಾಗಿದೆ. ಮುಂದಿನ ಕೆಲ ದಿನಗಳಲ್ಲಿ ಮಳೆ ಮುಂದುವರಿದರೆ, ಇನ್ನಷ್ಟು ಹೆಚ್ಚುವರಿ ಹರಿವು ಕಾಣಬಹುದು ಎನ್ನುವ ನಿರೀಕ್ಷೆಯಿದೆ. ಇತ್ತೀಚಿನ ವರ್ಷಗಳಲ್ಲಿ ಬರಗಾಲ ಹಾಗೂ ಅತ್ಯಂತ ಕಡಿಮೆ ಮಳೆಯಿಂದಾಗಿ ಜಲಾಶಯದಲ್ಲಿ ನೀರಿನ ಸಂಗ್ರಹವೇ ಕಡಿಮೆಯಾಗಿತ್ತು. ಇದರಿಂದಾಗಿ ಕೆಆರ್‌ಎಸ್‌ನ ನೀರಿನ ಮಟ್ಟವು ಸ್ಥಳೀಯ ರೈತರ ನೆಮ್ಮದಿಯನ್ನು ಭಂಗ ಮಾಡಿತ್ತು. ಆದರೆ ಈ ವರ್ಷವೇ ಮುಂಗಾರು ಆರಂಭದ ದಿನದಿಂದಲೇ ಉತ್ತಮ ಒಳಹರಿವು ಕಾಣಿಸಿಕೊಂಡಿರುವುದರಿಂದ ರೈತ ಸಮುದಾಯ, ವಿಶೇಷವಾಗಿ ಮಂಡ್ಯ, ಮೈಸೂರು, ರಾಮನಗರ ಚನ್ನಪಟ್ಟಣ ಭಾಗದ ಬೆಳೆಗಾರರಲ್ಲಿ ಆಶಾಕಿರಣ ಮೂಡಿದೆ.

ಕೃಷಿಕರಲ್ಲಿ ಸಂಭ್ರಮದ ವಾತಾವರಣ

ಕೆಆರ್‌ಎಸ್ ಅಣೆಕಟ್ಟಿಗೆ ಬಂದುಚೇರುತ್ತಿರುವ ನಿರಂತರ ಒಳಹರಿವು, ಇಂದಿನಿಂದಲೇ ರೈತರಿಗೆ ಸಿಂಚನ ನೀರಿನ ಭರವಸೆ ನೀಡುವಂತಾಗಿದೆ. ಸಮರ್ಪಕ ಮಳೆ ಮುಂದುವರೆದರೆ ಈ ವರ್ಷ ಕೃಷಿಕರಿಗೆ ಉತ್ತಮ ನೀರಿನ ಪೂರೈಕೆ ಸಾಧ್ಯವಾಗುತ್ತದೆ. ಇನ್ನು ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಕೆಆರ್‌ಎಸ್ ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ 10 ಸಾವಿರ ಕ್ಯೂಸೆಕ್ ಮೀರುತ್ತಿತ್ತು. ಆದರೆ, ಈ ವರ್ಷ ಮುಂಗಾರು ಮಳೆ ಬೇಗನೇ ಆರಂಭವಾಗಿದ್ದು, ಮೇ ತಿಂಗಳಲ್ಲಿ ಇಷ್ಟು ಮಟ್ಟದ ಒಳಹರಿವು ದಾಖಲಾಗಿದೆ. ಈ ಬಾರಿ ಪ್ರಕೃತಿಯ ಪ್ರೀತಿ ರೈತರ ಬೆನ್ನಿಗೆ ನಿಂತಂತೆ ಕಾಣುತ್ತಿದೆ. ಮುಂಗಾರು ಸರಿಯಾಗಿ ಬಂದು ನದಿ, ಜಲಾಶಯಗಳು ತುಂಬುವ ಮೂಲಕ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿ ಎಂಬುದೇ ಎಲ್ಲರ ಆಶಯವಾಗಿದೆ.

ಬೆಂಗಳೂರು ಜನತೆಗೆ ಕುಡಿಯುವ ನೀರಿಗೂ ನಿರಾತಂಕ: ಇನ್ನು ಬೆಂಗಳೂರಿನ ಜನತೆಗೆ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕೆಆರ್‌ಎಸ್ ಜಲಾಶಯದ ನೀರು ಆಧಾರವಾಗಿದೆ. ಈ ಬಾರಿ ಆಣೆಕಟ್ಟೆಯನ್ನು ಮುಂಗಾರು ಆರಂಭದಿಂದಲೇ ನೀರು ಸಂಗ್ರಹಣೆ ಉತ್ತಮವಾಗಿ ಮುಂದುವರೆದಿದ್ದು, ಬೆಂಗಳೂರಿನ ಜನರಿಗೆ ಕುಡಿಯುವ ನೀರಿನ ಪೂರೈಕೆಗೂ ಚಿಂತನೆ ಇಲ್ಲದಂತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ