'ನೀವು ಪೋಸ್ಟ್ ಮಾಡಿ ನಮ್ಮನ್ನು ಪೋಸ್ಟ್‌ ಮಾರ್ಟಮ್ ಮಾಡ್ತೀರಿ..' ಗವಿಸಿದ್ದೇಶ್ವರ ಶ್ರೀಗಳು ಕಣ್ಣೀರು ಹಾಕಿದ್ದು ಯಾಕೆ?

Published : Jan 18, 2025, 07:59 AM IST
'ನೀವು ಪೋಸ್ಟ್ ಮಾಡಿ ನಮ್ಮನ್ನು ಪೋಸ್ಟ್‌ ಮಾರ್ಟಮ್ ಮಾಡ್ತೀರಿ..' ಗವಿಸಿದ್ದೇಶ್ವರ ಶ್ರೀಗಳು ಕಣ್ಣೀರು ಹಾಕಿದ್ದು ಯಾಕೆ?

ಸಾರಾಂಶ

ಯಾವುದೇ ಸಾರ್ವಜನಿಕ ಯೋಜನೆಗಳಿಗೆ ಗವಿಸಿದ್ಧೇಶ್ವರರ ಹೆಸರನ್ನು ನಾಮಕರಣ ಮಾಡದಂತೆ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಜನತೆಯಲ್ಲಿ ಮನವಿ ಮಾಡಿದ್ದಾರೆ. ರೈಲ್ವೆ ನಿಲ್ದಾಣಕ್ಕೆ ಗವಿಸಿದ್ದಪ್ಪಜ್ಜನ ಹೆಸರಿಡುವಂತೆ ಕೆಲವರು ಮನವಿ ಮಾಡಿದ್ದಾರೆ. ಗವಿಮಠವನ್ನು ಬೇರೆ ಮಠಗಳ ಜತೆ ಹೋಲಿಸಬಾರದು ಎಂದೂ ಶ್ರೀಗಳು ಹೇಳಿದ್ದಾರೆ.

ಕೊಪ್ಪಳ (ಜ.18): ರೈಲ್ವೆ ನಿಲ್ದಾಣ ಸೇರಿದಂತೆ ಯಾವುದೇ ಸಾರ್ವಜನಿಕ ಯೋಜನೆಗಳಿಗೆ ಗವಿಸಿದ್ಧೇಶ್ವರರ ಹೆಸರನ್ನು ನಾಮಕರಣ ಮಾಡದಂತೆ ಅಭಿನವ ಗವಿದ್ಧೇಶ್ವರ ಮಹಾಸ್ವಾಮೀಜಿ ಜನತೆಯಲ್ಲಿ ಮನವಿ ಮಾಡಿದರು.

ನಗರದ ಗವಿಮಠದ ಕೈಲಾಸ ಮಂಟಪದಲ್ಲಿ ಶುಕ್ರವಾರ ರಾತ್ರಿ ಜರುಗಿದ ಜಾತ್ರೆಯ ಸಮಾರೋಪ ಸಮಾರಂಭದಲ್ಲಿ ತೀರಾ ಭಾವುಕರಾಗಿ ಈ ಮಾತನ್ನು ಹೇಳಿ ಶ್ರೀಗಳು ಕಣ್ಣೀರಿಟ್ಟರು.

2 ಸೂಚನೆಗಳಿವೆ ಎಂದು ಮಾತು ಆರಂಭಿಸಿದ ಶ್ರೀಗಳು, ವೇದಿಕೆಯಲ್ಲಿ ಹೇಳಬಾರದು ಎಂದು ಅಂದುಕೊಂಡಿದ್ದೆ, ಹೇಳದೆ ಇರದೆ ಇದ್ದರೆ ನಡೆಯವುದಿಲ್ಲ. ಗವಿಸಿದ್ದಪ್ಪಜ್ಜನ ಹೆಸರನ್ನು ರೈಲ್ವೆ ನಿಲ್ದಾಣಕ್ಕೆ ಇಡಬೇಕು ಎಂದು ಕೆಲವು ದಿನಗಳ ಹಿಂದೆ ಪೋಸ್ಟ್ ಮಾಡುವುದು, ಆ ಸಂಘಟನೆ ಮನವಿ ಕೊಡುವುದು, ಈ ಸಂಘಟನೆ ಮನವಿ ಕೊಡುವುದು ಮಾಡಿದರು. ದಯವಿಟ್ಟು ಗವಿಸಿದ್ದಪ್ಪಜ್ಜನ ಮಠವನ್ನು ನಮ್ಮ ಆವರಣ ಬಿಟ್ಟು ಹೊರಗೆ ಕರೆದುಕೊಂಡು ಹೋಗಬೇಡಿ ಎಂದರು.

ಕೊಪ್ಪಳ: ಗವಿಮಠ ಜಾತ್ರೆಗೆ 338 ಕ್ವಿಂಟಲ್‌ ಅಕ್ಕಿ ದೇಣಿಗೆ!

ಇವತ್ತು ರೈಲ್ವೆ ನಿಲ್ದಾಣಕ್ಕೆ ಅಂತೀರಿ, ವಿಮಾನ ನಿಲ್ದಾಣಕ್ಕೆ ಅಂತೀರಿ, ವಿವಿಗೆ ಅಂತೀರಿ ಏನು ಅವರ ಜತೆ ಗುದ್ದಾಡಲು ಆಗುತ್ತಾ? ಎಷ್ಟೋ ಮಂದಿ ಹೋರಾಟ ಮಾಡುವವರು ಅಲ್ಲೆ ಕುಳಿತಿದ್ದಾರೆ. ಗವಿಸಿದ್ದಪ್ಪಜ್ಜ ನಿಮ್ಮಲ್ಲೆರ ಉಸಿರಿನಲ್ಲಿರುವಾಗ, ಮತ್ತೊಂದಕ್ಕೆ ಅವನ ಹೆಸರು ಏನಕ್ಕೆ? ಇದೇ ಕೊನೆ ನಾನು ಎಂದೂ ಹೇಳುವುದಿಲ್ಲ. ನೀವು ಪೋಸ್ಟ್ ಮಾಡಿ ನಮ್ಮನ್ನು ಪೋಸ್ಟ್‌ ಮಾರ್ಟಮ್ ಮಾಡುತ್ತೀರಿ ಅಷ್ಟೆ ಎಂದು ಭಾವುಕರಾದರು.

ಇನ್ನೊಂದು ವಿಷಯ, ಗವಿಮಠವನ್ನು ಇನ್ನೊಂದು ಮಠದ ಜತೆ ಹೋಲಿಸುವುದು, ಗವಿಮಠದ ಸ್ವಾಮೀಜಿಯವರನ್ನು ಬೇರೆ ಸ್ವಾಮೀಜಿ ಜತೆಗೆ ಹೋಲಿಸುವುದು, ಅದಕ್ಕೆ ಪೋಸ್ಟ್ ಹಾಕುವುದು ಬೇಡ. ನಾನು ತಿಳಿದುಕೊಂಡಿರುವುದು ಇಡೀ ನಾಡಿನ ಎಲ್ಲ ಶರಣದ ಪಾದದ ಧೂಳಾಗಿ ನಾನಿದ್ದೇನೆ ಅಷ್ಟೆ. ಯಾರಿಗೂ ಹೋಲಿಸಬೇಡಿ ಎಂದು ಮನವಿ ಮಾಡಿದರು.
ಮೂರನೆಯದ್ದು, ನೀವು ಸುಮ್ಮನೆ ಕೂಡುವ ಮಂದಿಯಲ್ಲ. ಅಜ್ಜಾರಿಗೆ ಆ ಪ್ರಶಸ್ತಿ ಕೊಡ್ರಿ, ಈ ಪ್ರಶಸ್ತಿ ಕೊಡ್ರಿ ಎಂದು ಹೇಳೋಕೆ ಶುರು ಮಾಡ್ತೀರಿ. ಬರುವ ಪ್ರಶಸ್ತಿ ತಿರಸ್ಕರಿಸುವಷ್ಟು ದೊಡ್ಡವ ನಾನಲ್ಲ. ಅದನ್ನು ಸ್ವೀಕರಿಸುವ ಅರ್ಹತೆಯೂ ನನಗಿಲ್ಲ ಎಂಬ ವಿನಯತೆ, ವಿನಮ್ರತೆ ಇದೆ. ಅರ್ಹತೆ ನನಗಿಲ್ಲ. ನಮ್ಮ ಅಜ್ಜಾರ ಮಠದಲ್ಲಿ ಇರಲು ಜಾಗ ಕೊಟ್ಟಿದ್ದೀರಲ್ಲ, ಅದೇ ನನಗೆ ದೊಡ್ಡ ಪ್ರಶಸ್ತಿ. ದಯವಿಟ್ಟು ಇನ್ನು ಮುಂದೆ ಯಾರೂ ಈ ಮೂರು ವಿಷಯ ಕುರಿತು ಮಾತಾಡಬೇಡಿ ಎಂದು ನಮಸ್ಕಾರ ಮಾಡಿ ಹೊರಟರು. ಮತ್ತೆ ಭಾವುಕರಾಗಿ ಮೈಕ್ ಕಡೆ ಬಂದು, ಅಜ್ಜಾರು ನನಗೆ ಹೇಳಿಬಿಟ್ಟಿದ್ದಾರೆ ಇದನ್ನು, ಪೂಜೆ, ಓದು ಮತ್ತು ಸೇವೆ ಮಾಡಲು ಹೇಳಿದ್ದಾರೆ. ನನ್ನನ್ನು ಆ ಜಾತಿ, ಆ ಧರ್ಮದ, ಈ ಧರ್ಮ, ಈ ಜಾತಿಗೆ ಸೆಳೆಯಬೇಡಿ, ನನ್ನ ಧರ್ಮದ ಪರಿಭಾಷೆ ಎಂದರೆ ಎಲ್ಲರನ್ನು ಪ್ರೀತಿಸು, ಎಲ್ಲರ ಸೇವೆ ಮಾಡೋದು ಎಂಬುದು. ನನಗೆ ಗೊತ್ತಿರೋದು ಇಷ್ಟೆ. ಇದನ್ನು ಬಿಟ್ಟು ನನಗೆ ಯಾರೂ ಹೊರಗಡೆ ಕರೆದುಕೊಂಡು ಹೋಗಬೇಡಿ ಎನ್ನುವಾಗ ಕಣ್ಣಂಚಲ್ಲಿ ನೀರಿತ್ತು.ಶಿಕ್ಷಣ, ಮಠ, ಪತ್ರಿಕೆಯಲ್ಲಿ ನನ್ನ ಫೋಟೋ ಇಲ್ಲ. ಗುಲಬುರ್ಗಾದ ಯಾರೋ ಒಬ್ಬರು ಕೇಳಿದರು, ನಿಮ್ಮ ಫೋಟೋ ಇಲ್ಲವಲ್ಲ ಎಂದು. ಯಾರದು ಕಂಡಿತು ಎಂದೆ, ಗುರುಗಳಾದ ಶಿವಶಾಂತವೀರರ ಫೋಟೋ ಕಂಡಿತು ಎಂದರು. ನಾನು ಹೇಳಿದೆ, ಮನೆಯಲ್ಲಿ ಮಾಲೀಕರ ಫೋಟೋ ಇರುತ್ತದೆ. ಸೇವಕರದು ಇರಲ್ಲ. ಸೇವೆ ಮಾಡೋದು ಅಷ್ಟೆ ನನಗೆ ಗೊತ್ತಿದೆ. ನನ್ನ ಭಾವನೆ ಅರ್ಥ ಮಾಡಿಕೊಳ್ಳಿ. ಸಮಾಜ ಅತಿ ಸೂಕ್ಷ್ಮದಿಂದ ಹೋಗುತ್ತಿದೆ. ನನಗೆ ಹೊರಗಡೆ ವಿಷಯಗಳಿಗೆ ಆಸಕ್ತಿ ಇಲ್ಲ ಎಂದರು. ಮತ್ತೆ ನಾನು ಈ ಕುರಿತು ಮಾತನಾಡುವುದಿಲ್ಲ, ಮಾತನಾಡುವಂತೆ ಮಾಡಬೇಡಿ ಎಂದರು.

Koppal: ಕೊಪ್ಪಳದಲ್ಲಿ ಗವಿಸಿದ್ದೇಶ್ವರ ಮಹಾರಥೋತ್ಸವ, 10 ಲಕ್ಷಕ್ಕೂ ಅಧಿಕ ಜನ ಭಾಗಿ

ಸೇರಿದ್ದ ಭಕ್ತರು ನೀವು ಭಾವುಕರಾಗಬೇಡಿ, ನೀವು ದುಃಖ ಮಾಡಿಕೊಳ್ಳಬೇಡಿ ಎಂದು ಕೂಗಿದರು. ನೀವು ಇರುವಂತೆ ಇರಿ, ಯಾರು ಏನಾದರೂ ಮಾಡಿಕೊಳ್ಳಲಿ ಎನ್ನುವ ಮಾತು ಕೇಳಿ ಬಂದಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ಯಾರಂಟಿ ಹೆಸರಲ್ಲಿ ಲೂಟಿ, ಇದು ನುಂಗಣ್ಣಗಳ, ಲೂಟಿಕೋರರ ಸರ್ಕಾರ:ಆರ್ ಅಶೋಕ್ ತೀವ್ರ ವಾಗ್ದಾಳಿ
ಕೋಳಿಗೆ ಚೀಪ್ ಆಗಿ ಮೊಟ್ಟೆ ಇಡು ಅನ್ನೋಕಾಗುತ್ತಾ?' BJP MLA ಪ್ರಶ್ನೆಗೆ ಶಿಕ್ಷಣ ಸಚಿವರ ಉತ್ತರ