ಕೋಲಾರದಲ್ಲಿ 10 ಸಾವಿರ ಕೋಟಿ ಚಿನ್ನದ ಗಣಿಗಾರಿಕೆ ಯೋಜನೆ!

By Kannadaprabha NewsFirst Published Dec 16, 2022, 8:06 AM IST
Highlights

ಕೋಲಾರದ ಚಿನ್ನದ ಗಣಿಯಲ್ಲಿ ಮತ್ತೆ ಚಿನ್ ತೆಗೆಯುವ ಪ್ರಕ್ರಿಯೆ ಆರಂಭವಾಗಿದೆ. ಹಾಗಂತ ಮತ್ತೆ ಗಣಿಗಾರಿಕೆ ಆರಂಭವಾಗುತ್ತಿಲ್ಲ. ಈಗಾಗಲೇ ಗಣಿಗಾರಿಕೆಗಾಗಿ ತೆಗೆದ ಮಣ್ಣಿನಲ್ಲಿರುವ ಚಿನ್ನವನ್ನು ತೆಗೆಯಲು ಕೇಂದ್ರ ಮುಂದಾಗಿದೆ.  ಆಧುನಿಕ ತಂತ್ರಜ್ಞಾನ ಬಳಕೆ ಮಾಡಿ ಇದನ್ನು ಹೊರತೆಗೆಯಲಾಗುತ್ತದೆ. ಶೀಘ್ರವೇ ಕೇಂದ್ರ ಇದಕ್ಕಾಗಿ ಟೆಂಡರ್‌ ಕರೆಯಲಿದೆ.
 

ನವದೆಹಲಿ (ಡಿ.16): ಕರ್ನಾಟಕದ ಕೋಲಾರದ ಚಿನ್ನದ ಗಣಿದಲ್ಲಿ (ಕೆಜಿಎಫ್‌) ಕೆಲಸ ಸ್ಥಗಿತಗೊಂಡಿದ್ದರೂ ಅದರಲ್ಲಿ ಉಳಿದಿರುವ 50 ದಶಲಕ್ಷ ಟನ್‌ ಚಿನ್ನದ ಅದಿರಿನಿಂದ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಚಿನ್ನ ತೆಗೆಯುವ ಸಿದ್ಧತೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಇದಕ್ಕಾಗಿ ಜಾಗತಿಕ ಟೆಂಡರ್‌ ಕರೆಯಲು ಪ್ರಕ್ರಿಯೆ ಶುರು ಮಾಡಿದೆ. ಬೆಂಗಳೂರಿನಿಂದ ಸುಮಾರು 65 ಕಿ.ಮೀ. ದೂರದಲ್ಲಿರುವ ಕೋಲಾರದ ಗಣಿ ದೇಶದ ಅತಿ ಹಳೆಯ ಗಣಿಗಳಲ್ಲಿ ಒಂದಾಗಿದೆ. ಆದರೆ ಕಳೆದ 20 ವರ್ಷದ ಹಿಂದೆ ಗಣಿಯನ್ನು ಮುಚ್ಚಲಾಗಿತ್ತು. ಚಿನ್ನದ ಲಭ್ಯತೆ ಕ್ಷೀಣ ಆಗಿರುವ ಕಾರಣ ಗಣಿಗಾರಿಕೆ ಸ್ಥಗಿತಗೊಳಿಸಲಾಗಿತ್ತು. ಹಾಗಿದ್ದರೂ ಆಗ ತೆಗೆದಿದ್ದ ಸುಮಾರು 50 ದಶಲಕ್ಷ ಟನ್‌ ಚಿನ್ನದ ಅದಿರು ಇನ್ನೂ ಹಾಗೆಯೇ ಉಳಿಕೊಂಡಿದೆ. ಈಗ ಈ 50 ದಶಲಕ್ಷ ಟನ್‌ ಸಂಸ್ಕರಿತ ಅದಿರನಲ್ಲಿ ಪ್ರತಿ ಟನ್‌ಗೆ 0.7 ಗ್ರಾಂ ಚಿನ್ನವನ್ನು ಸಿದ್ಧಪಡಿಸಬಹುದಾಗಿದೆ. ಹೀಗಾಗಿ ಒಟ್ಟಾರೆ ಸುಮಾರು 20 ಸಾವಿರ ಕೇಜಿ (20 ಟನ್‌) ಚಿನ್ನವು ಇದರಿಂದ ಸಿಗಬಹುದು. ಇದರ ಮೌಲ್ಯ ಸುಮಾರು 10 ಸಾವಿರ ಕೋಟಿ ರು.ನಿಂದ 11 ಸಾವಿರ ಕೋಟಿ ರು. ಆಗಬಹುದು ಎಂದು ಅಂದಾಜಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಈ ಪ್ರಕ್ರಿಯೆಗಾಗಿ ಮುಂದಿನ 4 ಅಥವಾ 6 ತಿಂಗಳಲ್ಲಿ ಸರ್ಕಾರ ಬಿಡ್ಡಿಂಗ್‌ ಆಹ್ವಾನಿಸಲಿದೆ. ಸಂಸ್ಕರಿಸಿದ ಅದಿರಿನಿಂದ ಚಿನ್ನ ಹೊರತೆಗೆಯುವ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಅನುಭವವುಳ್ಳ ವಿದೇಶಿ ಕಂಪನಿಗಳು ಬಿಡ್ಡಿಂಗ್‌ನಲ್ಲಿ ಭಾಗವಹಿಸಬಹುದಾಗಿದೆ. ಆದರೆ ಅವು ಸ್ಥಳೀಯ ಕಂಪನಿಗಳ ಜತೆ ಕೈಜೋಡಿಸಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Assembly election: ಕೋಲಾರ ಕುರುಕ್ಷೇತ್ರದಲ್ಲಿ ಟಿಕೆಟ್‌ ಕೋಲಾಹಲ!

ಈ ಮುನ್ನ 1880ರಲ್ಲಿ ಗಣಿಯಲ್ಲಿನ ಒಂದು ಟನ್‌ ಅದರಿಗೆ 45 ಗ್ರಾಂ ಚಿನ್ನ ಲಭಿಸುತ್ತಿತ್ತು. ಬಳಿಕ ಮುಚ್ಚುವ ಸಂದರ್ಭದಲ್ಲಿ ಕೇವಲ 3 ಗ್ರಾಂ ಲಭಿಸುತ್ತಿತ್ತು. ಆಗ ಚಿನ್ನದ ಬೆಲೆ ಕೂಡ ಗ್ರಾಂಗೆ 400 ರು.ಗೆ ಕುಸಿದಿತ್ತು. ಹೀಗಾಗಿ ಉದ್ಯಮ ಇನ್ನು ಲಾಭದಾಯಕವಲ್ಲ ಎಂಬ ಕಾರಣಕ್ಕೆ ಗಣಿ ಮುಚ್ಚಲಾಗಿತ್ತು. ಆದರೆ ಈಗ ಚಿನ್ನದ ಬೆಲೆ 1 ಗ್ರಾಂಗೆ ಸುಮಾರು 5 ಸಾವಿರ ರು. ದಾಟಿರುವ ಕಾರಣ ಅಳಿದುಳಿದ ಅದಿರಿನಿಂದ ಚಿನ್ನ ತೆಗೆದು ಲಾಭ ಮಾಡಿಕೊಳ್ಳಬಹುದಾಗಿದೆ ಎಂದು ಇನ್ನೊಬ್ಬ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

ticket fight: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸ್ತಾರಾ?


ಇನ್ನೂ ಎಷ್ಟುಚಿನ್ನವಿದೆ?

- ಕೋಲಾರದಲ್ಲಿ 20 ವರ್ಷದ ಹಿಂದೆಯೇ ಗಣಿ ಮುಚ್ಚಲಾಗಿದೆ

- ಚಿನ್ನದ ಲಭ್ಯತೆ ಕಡಿಮೆಯಾದ ಕಾರಣ ಗಣಿಗಾರಿಕೆ ಬಂದ್‌

- ಆಗ ತೆಗೆದಿದ್ದ ಅದಿರಿನಲ್ಲಿ ಇನ್ನೂ 20 ಸಾವಿರ ಕೇಜಿ ಚಿನ್ನ ಲಭ್ಯ

- ಈ ಚಿನ್ನ ತೆಗೆಯಲು ಮುಂದಿನ 4-6 ತಿಂಗಳಲ್ಲಿ ಟೆಂಡರ್‌ ಆಹ್ವಾನ

- ವಿದೇಶಿ, ಸ್ವದೇಶಿ ಕಂಪನಿಗಳಿಂದ ಜಂಟಿಯಾಗಿ ಚಿನ್ನ ತೆಗೆವ ಯತ್ನ
 

click me!