
ಕೊಡಗು (ಏ.05): ಕೊಡಗು ಜಿಲ್ಲೆಯ ಅತ್ಯಂತ ಎತ್ತರದ ಶಿಖರ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ ಕೊನೆಗೂ 4 ದಿನದ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ದಟ್ಟಾರಣ್ಯದಲ್ಲಿ ಆಹಾರವಿಲ್ಲದೆ, ಕೇವಲ ಒಂದು ಬಾಟಲಿ ನೀರಿನ ಸಹಾಯದಿಂದ ಬದುಕುಳಿದಿದ್ದ ಈ ಸಾಹಸಿ ಯುವತಿ ಇಂದು ನಗುಮೊಗದಲ್ಲೇ ಕಾಡಿನಿಂದ ಹೊರಬಂದಿದ್ದಾರೆ. ಇದರ ಬೆನ್ನಲ್ಲಿಯೇ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದು, ತಾನು ಹೇಗೆ ದಟ್ಟಾರಣ್ಯದಲ್ಲಿ ಬದುಕುಳಿದೆ ಎಂದು ವಿವರಿಸಿದ್ದಾರೆ.
ಕೊಚ್ಚಿಯ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕೋಯಿಕ್ಕೋಡ್‌ನ ನಾದಾಪುರಂ ಮೂಲದ ಶರಣ್ಯ, ಏಪ್ರಿಲ್ 2 ರಂದು ಕೊಡಗಿಗೆ ಟ್ರೆಕ್ಕಿಂಗ್‌ಗಾಗಿ ಬಂದಿದ್ದರು. ಆನ್‌ಲೈನ್ ಮೂಲಕ ಟ್ರೆಕ್ಕಿಂಗ್ ಬುಕ್ ಮಾಡಿದ್ದ ಅವರು, ಅರಣ್ಯ ಇಲಾಖೆಯ ಅನುಮತಿಯೊಂದಿಗೆ 10 ಜನರ ತಂಡದ ಜೊತೆ ತಡಿಯಂಡಮೋಳ್ ಬೆಟ್ಟ ಹತ್ತಲು ಆರಂಭಿಸಿದ್ದರು. ಆದರೆ, ಬೆಟ್ಟದ ಮೇಲೆ ತಂಡದೊಂದಿಗೆ ಸಾಗುತ್ತಿದ್ದಾಗ ದಾರಿ ಮಧ್ಯೆ ನಾಯಿಯೊಂದರ ಜೊತೆ ಆಟವಾಡುತ್ತಾ ಶರಣ್ಯ ಹಿಂದೆ ಉಳಿದಿದ್ದರು. ಇದೇ ವೇಳೆ ಅವರು ತಂಡದಿಂದ ಬೇರ್ಪಟ್ಟು ದಾರಿ ತಪ್ಪಿದ್ದರು.
ಕಾಡಿನಿಂದ ಹೊರಬಂದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶರಣ್ಯ, ತಮಗಾದ ರೋಚಕ ಅನುಭವವನ್ನು ಹಂಚಿಕೊಂಡಿದ್ದಾರೆ. 'ನಾನು ಆರೋಗ್ಯವಾಗಿದ್ದೇನೆ. ಕಾಡಿನಲ್ಲಿ ದಾರಿ ತಪ್ಪಿದಾಗ ನನ್ನ ಸ್ನೇಹಿತರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಫೋನ್ ಸ್ವಿಚ್ ಆಫ್ ಆಗಿತ್ತು. ನನ್ನ ಬಳಿ ಇದ್ದಿದ್ದು ಕೇವಲ ಒಂದು ಬಾಟಲಿ ನೀರು ಮಾತ್ರ. ರಕ್ಷಣಾ ತಂಡವು ನನ್ನನ್ನು ಹುಡುಕಲು ಡ್ರೋಣ್ ಬಳಸಬಹುದು ಎಂದು ನನಗೆ ತಿಳಿದಿತ್ತು. ಹಾಗಾಗಿ ಡ್ರೋಣ್‌ಗೆ ಕಾಣಿಸುವಂತಹ ಬಯಲು ಜಾಗದಲ್ಲೇ ನಾನು ಹೆಚ್ಚಾಗಿ ನಿಂತಿದ್ದೆ' ಎಂದು ಅವರು ವಿವರಿಸಿದ್ದಾರೆ. ಅವರ ಈ ಸಮಯಪ್ರಜ್ಞೆಯೇ ಅವರ ಪ್ರಾಣ ಉಳಿಸಿದೆ ಎನ್ನಬಹುದು.
ಶರಣ್ಯ ನಾಪತ್ತೆಯಾದ ದಿನದಿಂದಲೂ ಕೊಡಗು ಜಿಲ್ಲಾ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ಎಎನ್‌ಎಫ್ (ನಕ್ಸಲ್ ನಿಗ್ರಹ ಪಡೆ) ಮತ್ತು ಸ್ಥಳೀಯ ನಿವಾಸಿಗಳು ಹಗಲಿರುಳು ಶೋಧ ನಡೆಸಿದ್ದರು. ಡ್ರೋಣ್, ಥರ್ಮಲ್ ಡ್ರೋಣ್ ಮತ್ತು ಶ್ವಾನ ದಳವನ್ನು ಬಳಸಲಾಗಿತ್ತು. ಕೊನೆಗೆ ಸ್ಥಳೀಯ ನಿವಾಸಿಗಳು ಕಾಡಿನ ಒಂದು ಭಾಗದಲ್ಲಿ ವಿಚಿತ್ರ ಶಬ್ದ ಕೇಳಿ ಅಲ್ಲಿಗೆ ಹೋಗಿ ನೋಡಿದಾಗ ಶರಣ್ಯ ಪತ್ತೆಯಾಗಿದ್ದಾರೆ. "ನಾವು ಶಬ್ದ ಕೇಳಿದ ಜಾಗಕ್ಕೆ ಹೋದಾಗ ಶರಣ್ಯ ಅಲ್ಲಿ ಕುಳಿತಿದ್ದರು," ಎಂದು ಅವರನ್ನು ಪತ್ತೆ ಮಾಡಿದ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.
ಶರಣ್ಯ ದಾರಿ ತಪ್ಪಿದ ಕೂಡಲೇ ತಾವು ತಂಗಿದ್ದ ಕಕ್ಕಬ್ಬೆ ಸಮೀಪದ ಯಾವಕಪಾಡಿಯ ಹೋಂಸ್ಟೇ ಸಿಬ್ಬಂದಿಗೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೆಸೇಜ್ ಕಳುಹಿಸಿದ್ದರು. ಆದರೆ ಅದರ ಬೆನ್ನಲ್ಲೇ ಅವರ ಫೋನ್ ಬ್ಯಾಟರಿ ಖಾಲಿಯಾಗಿ ಸ್ವಿಚ್ ಆಫ್ ಆಗಿತ್ತು. ಅವರ ಜೊತೆಗಿದ್ದ ತಂಡದವರು ಸಂಜೆ ವಾಪಸ್ ಬಂದಾಗ ಶರಣ್ಯ ಅವರ ಬಗ್ಗೆ ವಿಚಾರಿಸಿದಾಗ, ಅವರು ನಾಯಿಯೊಂದಿಗೆ ಆಟವಾಡುತ್ತಾ ಬೆಟ್ಟದ ಮೇಲೆಯೇ ನಿಂತಿದ್ದರು ಎಂದು ತಿಳಿಸಿದ್ದರು.
ಕಾಡಿನಿಂದ ಸುರಕ್ಷಿತವಾಗಿ ಕರೆತರಲಾದ ಶರಣ್ಯ ಅವರನ್ನು ಸಮೀಪದ ಕಾಕಬೆ ಗ್ರಾಮಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ತೀವ್ರ ಹಸಿವು ಮತ್ತು ಸುಸ್ತಿನಿಂದ ಬಳಲಿದ್ದರೂ ಅವರ ಮಾನಸಿಕ ಸ್ಥಿತಿ ದೃಢವಾಗಿದೆ. ಮುಂಜಾಗ್ರತಾ ಕ್ರಮವಾಗಿ ಅವರನ್ನು ಮಡಿಕೇರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ವೈದ್ಯರು ಗ್ರೀನ್ ಸಿಗ್ನಲ್ ನೀಡಿದ ನಂತರ ಅವರನ್ನು ಕುಟುಂಬಸ್ಥರೊಂದಿಗೆ ಕೇರಳಕ್ಕೆ ಕಳುಹಿಸಿಕೊಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ