
ಬೆಂಗಳೂರು (ಏ.5) ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದಾಗಿ ಎಲ್‌ಪಿಜಿ ಸಮಸ್ಯೆಯಾಗಿ ಸಾರ್ವಜನಿಕರು ಗ್ಯಾಸ್ ಏಜೆನ್ಸಿ, ಆಟೋ ಎಲ್‌ಪಿಜಿ ಬಂಕ್‌ಗಳ ಬಳಿ ಕ್ಯೂ ನಿಂತಿದ್ದರೆ ವಿಧಾನಸೌಧದಲ್ಲಿ ಶಾಸಕರ ಆಪ್ತ ಕಾರ್ಯದರ್ಶಿಗಳು ಶನಿವಾರ ಐಪಿಎಲ್ ಟಿಕೆಟ್‌ಗಾಗಿ ಸರತಿ ಸಾಲಲ್ಲಿ ನಿಂತಿದ್ದು ಗಮನ ಸೆಳೆಯಿತು.
ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳ ನಡುವೆ ಹೈವೋಲ್ಟೇಜ್ ಐಪಿಎಲ್ ಪಂದ್ಯವಿದ್ದು, ಈ ಪಂದ್ಯಕ್ಕೆ ಉಚಿತ ವಿಐಪಿ ಟಿಕೆಟ್‌ಗಾಗಿ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಆಪ್ತ ಕಾರ್ಯದರ್ಶಿ ಮಹೇಶ್ ಕರ್ಜಗಿ ಅವರ ಕಚೇರಿ ಎದುರು ಶಾಸಕರ ಆಪ್ತ ಸಿಬ್ಬಂದಿ ಕ್ಯೂ ನಿಂತಿದ್ದರು. ಸರತಿ ಸಾಲಿನಲ್ಲಿ ಬಂದು ತಲಾ 3 ಟಿಕೆಟ್ ಪಡೆದುಕೊಂಡರು.
ಬಜೆಟ್ ಅಧಿವೇಶನದಲ್ಲಿ ಐಪಿಎಲ್ ಪಂದ್ಯಾವಳಿಗಳಿಗೆ ಶಾಸಕರ ಕುಟುಂಬಕ್ಕೆ ಕನಿಷ್ಠ 5 ವಿಐಪಿ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಕೆಎಸ್‌ಸಿಎಗೆ ಸಹಕಾರ ನೀಡಬಾರದು ಎಂದು ಆಗ್ರಹ ಕೇಳಿ ಬಂದಿತ್ತು.
ಇದರ ಬೆನ್ನಲ್ಲೇ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮೊದಲ ಪಂದ್ಯಕ್ಕೆ ತಲಾ ಎರಡು ಟಿಕೆಟ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಬಳಿಕ ನಡೆದ ಸಭೆಯಲ್ಲಿ ಪ್ರತಿ ಪಂದ್ಯಕ್ಕೆ ತಲಾ 3 ಟಿಕೆಟ್ ನೀಡುವುದಾಗಿ ಕೆಎಸ್‌ಸಿಎ ಸಮ್ಮತಿ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ಭಾನುವಾರ ನಡೆಯಲಿರುವ ಪಂದ್ಯದ ಟಿಕೆಟ್‌ಗಳನ್ನು ಶನಿವಾರ ವಿಧಾನಸಭೆ ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ ಕಚೇರಿಯಲ್ಲಿ ವಿತರಿಸಲಾಯಿತು. ಖುದ್ದು ಬಂದು ಟಿಕೆಟ್ ಪಡೆಯಲಾಗದೆ ಶಾಸಕರು ತಮ್ಮ ಪತ್ರಗಳನ್ನು ಕಳುಹಿಸಿದ್ದು, ಅದರ ಆಧಾರದ ಮೇಲೆ ಆಪ್ತ ಸಿಬ್ಬಂದಿಗೆ ಟಿಕೆಟ್ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ