ಬೆಳಗ್ಗೆ 9.50ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿರುವ ಇಂಡಿಗೋ ಸಂಸ್ಥೆಯ ವಿಮಾನ ಬೆಳಗ್ಗೆ 11.05ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದು ಇಳಿಯಲಿದೆ. ಬಳಿಕ ಬೆಳಗ್ಗೆ 11.25ಕ್ಕೆ ಪುನಃ ಬೆಂಗಳೂರಿಗೆ ಯಾನ ಆರಂಭಿಸಲಿದೆ.
ಶಿವಮೊಗ್ಗ (ಆ.31): ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣಗೊಂಡಿರುವ ರಾಜ್ಯದ 9ನೇ ಏರ್‌ಪೋರ್ಟ್ ಗುರುವಾರದಿಂದ ಕಾರ್ಯಾರಂಭ ಮಾಡಲಿದೆ. ಬೆಳಗ್ಗೆ 9.50ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿರುವ ಇಂಡಿಗೋ ಸಂಸ್ಥೆಯ ವಿಮಾನ ಬೆಳಗ್ಗೆ 11.05ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದು ಇಳಿಯಲಿದೆ. ಬಳಿಕ ಬೆಳಗ್ಗೆ 11.25ಕ್ಕೆ ಪುನಃ ಬೆಂಗಳೂರಿಗೆ ಯಾನ ಆರಂಭಿಸಲಿದೆ.
ಜುಲೈ 26ರಿಂದಲೇ ಟಿಕೆಟ್‌ಗಳ ಬುಕಿಂಗ್ ಆರಂಭವಾಗಿದ್ದು, ಮುಂದಿನ 1 ತಿಂಗಳ ಅವಧಿಯಲ್ಲಿನ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ. 72 ಆಸನಗಳ ಈ ವಿಮಾನದ ಟಿಕೆಟ್‌ನ ಆರಂಭಿಕ ಬೆಲೆ ಪ್ರತಿ ಟಿಕೆಟ್‌ಗೆ 2,940 ರು.ಗಳಾಗಿವೆ. ಈ ಮಧ್ಯೆ, 65 ಆಸನಗಳ ನಂತರದ ಹತ್ತು ಸೀಟುಗಳ ಬೆಲೆಯಲ್ಲಿ ಬೇಡಿಕೆಗೆ ಅನುಗುಣವಾಗಿ ದರಗಳು ಏರಿಳಿತ ಕಾಣಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಧುನಿಕ ಚಾರ್ವಾಕನಿದ್ದಂತೆ: ಸಿ.ಟಿ.ರವಿ
ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ, ಮೊದಲ ಯಾನದಲ್ಲಿ ನಾನು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಮಲೆನಾಡು ಭಾಗದ ಜನಪ್ರತಿನಿಧಿಗಳು ಇರಲಿದ್ದೇವೆ. ನಿಲ್ದಾಣದಲ್ಲಿ ವಿಮಾನ ಇಳಿದ ತಕ್ಷಣ ವಾಟರ್ ಸಲ್ಯೂಟ್ ಮೂಲಕ ಸಂಭ್ರಮಾಚರಣೆ ಮಾಡಲಾಗುವುದು. ಇಂಡಿಗೋ ಸಂಸ್ಥೆಯ ವಿಮಾನ ಬೆಂಗಳೂರು-ಶಿವಮೊಗ್ಗ ಮಾರ್ಗದಲ್ಲಿ ವಾರದ ಏಳು ದಿನವೂ ಸಂಚರಿಸಲಿದೆ. ಮುಂದಿನ ದಿನಗಳಲ್ಲಿ ಇತರ ನಗರಗಳಿಗೂ ಯಾನ ಆರಂಭಿಸುವ ಕುರಿತು ಮಾತುಕತೆ ನಡೆದಿದೆ ಎಂದರು.
ಕೇಂದ್ರ ಸರ್ಕಾರದ ‘ಉಡಾನ್’ ಯೋಜನೆಯಡಿ ನಿರ್ಮಾಣಗೊಂಡಿರುವ ಈ ವಿಮಾನ ನಿಲ್ದಾಣದ ಉದ್ಘಾಟನೆಯನ್ನು ಕಳೆದ ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಿದ್ದರು. ಶಿವಮೊಗ್ಗದಿಂದ 15 ಕಿ.ಮೀ. ದೂರದಲ್ಲಿರುವ ಸೋಗಾನೆಯಲ್ಲಿ, 450 ಕೋಟಿ ರು.ಗಳ ವೆಚ್ಚದಲ್ಲಿ 779 ಎಕರೆ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಏರ್‌ಬಸ್ ಮಾದರಿಯ ವಿಮಾನಗಳೂ ಇಲ್ಲಿ ಇಳಿಯಬಹುದು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಂತರದ ಅತಿ ಉದ್ದನೆಯ ರನ್‌ವೇಯನ್ನು ಹೊಂದಿರುವ ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಇದು ಒಳಗಾಗಿದೆ. ನಿಲ್ದಾಣದಲ್ಲಿ 4,320 ಚದರಡಿಯ ಟರ್ಮಿನಲ್ ನಿರ್ಮಿಸಲಾಗಿದ್ದು, ಒಟ್ಟಿಗೆ 200 ರಿಂದ 300 ಪ್ರಯಾಣಿಕರನ್ನು ಇಲ್ಲಿ ನಿರ್ವಹಿಸಬಹುದಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ವ್ಯವಸ್ಥೆ ಇಲ್ಲಿದೆ.
ಸತತ 2 ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದಲ್ಲಿ ಸಕಲ ಸೌಲಭ್ಯ ಕಲ್ಪಿಸುವೆ: ಪ್ರದೀಪ್ ಈಶ್ವರ್
9ನೇ ಏರ್‌ಪೋರ್ಟ್
1. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು.
2. ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು
3. ಹುಬ್ಬಳ್ಳಿ ವಿಮಾನ ನಿಲ್ದಾಣ
4. ಬೆಳಗಾವಿ ವಿಮಾನ ನಿಲ್ದಾಣ
5. ಕಲಬುರಗಿ ವಿಮಾನ ನಿಲ್ದಾಣ
6. ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ, ಬಳ್ಳಾರಿ
7. ಮೈಸೂರು ವಿಮಾನ ನಿಲ್ದಾಣ
8. ಬೀದರ್ ವಿಮಾನ ನಿಲ್ದಾಣ
9. ಶಿವಮೊಗ್ಗ ವಿಮಾನ ನಿಲ್ದಾಣ