
ಚಾಮರಾಜನಗರ (ನ.21): ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲ ಅಂದರೆ ರಾಜ್ಯದಲ್ಲಿ ಕಾಂಗ್ರೆಸ್ ಇರಲ್ಲ ಮಾಜಿ ಸಚಿವ ಕೆ.ಎನ್.ರಾಜಣ್ಣ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಚಾಮರಾಜನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋ ದೇವೇಗೌಡ, ನೋ ಜೆಡಿಎಸ್. ನೋ ಯಡಿಯೂರಪ್ಪ, ನೋ ಬಿಜೆಪಿ. ಅದೇ ರೀತಿ ನೋ ಸಿದ್ದರಾಮಯ್ಯ, ನೋ ಕಾಂಗ್ರೆಸ್. ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ಪೂರೈಸುತ್ತಾರೆ. ಈ ಬಗ್ಗೆ ನನಗೆ ನಂಬಿಕೆ ಇದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ಹೈಕಮಾಂಡ್ ಮತ್ತು ಸಿದ್ದರಾಮಯ್ಯ ನಡುವೆ ಏನು ಮಾತುಕತೆ ನಡೆದಿದೆ ನಮಗೆ ಗೊತ್ತಿಲ್ಲ. ಡಿ.ಕೆ ಶಿವಕುಮಾರ್ ಸಿಎಂ ಆಗುವ ವಿಚಾರ ಗೊತ್ತಿಲ್ಲ. ಆಸೆ ಎಲ್ಲರಿಗೂ ಇರುತ್ತೆ. ನಾನು ಮಂತ್ರಿಯಾಗುವುದು ಮುಖ್ಯವಲ್ಲ. ಸರ್ಕಾರ ಸುಭದ್ರವಾಗಿರಬೇಕು ಎಂದು ತಿಳಿಸಿದರು. ಇನ್ನು ಸಹಕಾರ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಭಾಷಣ ಮಾಡಿದ ರಾಜಣ್ಣ, ಅನ್ನಭಾಗ್ಯ ಪುಣ್ಯದ ಕಾರ್ಯಕ್ರಮ. ಇಂತಹ ಹಲವು ಕಾರ್ಯಕ್ರಮಗಳನ್ನು ಸಿದ್ದರಾಮಯ್ಯ ನೀಡಿದ್ದಾರೆ ಎಂದು ಹಾಡಿ ಹೊಗಳಿದರು.
ಸಿದ್ದರಾಮಯ್ಯ ಅವರ ಮೆಚ್ಚಿನ ಅನ್ನಭಾಗ್ಯ ಕಾರ್ಯಕ್ರಮದ ಬಗ್ಗೆ ಯಾವುದೇ ಕಾರ್ಯಕ್ರಮದಲ್ಲಿ ಪ್ರಸ್ತಾಪ ಮಾಡಲೇಬೇಕು. ಇಲ್ಲವಾದರೆ ಬೇಜಾರಾಗುತ್ತದೆ ಎಂದರು.
ಕೆಲವರು ಹಿಂದುತ್ವದ ಮೇಲೆ ಭಾಷಣ ಮಾಡುತ್ತಾರೆ. ನಾವುಗಳ ಸಹ ಹಿಂದುಗಳೇ. ಇಲ್ಲಿ ಬಂದಿರುವ ಬಹುತೇಕರು ಹಿಂದುಗಳು. ಎರಡು ರೀತಿಯ ಹಿಂದುತ್ವ ಇದೆ. ಒಂದು ಗಾಂಧಿ ಹಿಂದುತ್ವ, ಮತ್ತೊಂದು ಗೋಡ್ಸೆ ಹಿಂದುತ್ವ. ಗಾಂಧಿ ಹಾಗೂ ಗೋಡ್ಸೆ ಇಬ್ಬರು ಸಹ ಹಿಂದುಗಳು. ಓಟಿಗಾಗಿ ಮಾತನಾಡುವವರು ಗೋಡ್ಸೆ ಹಿಂದುತ್ವದವರು ಎಂದು ಟೀಕಿಸಿದರು.
ಸಹಕಾರ ಮಹಾಮಂಡಲದ ಅಧ್ಯಕ್ಷ ಜಿ.ಟಿ ದೇವೇಗೌಡರು ನನಗೆ ಆಪ್ತ ಗೆಳೆಯ. ಸಹಕಾರಿ ಆಂದೋಲನಕ್ಕೆ ನೂರು ವರ್ಷದ ಇತಿಹಾಸ ಇದೆ. ಸಿದ್ದರಾಮಯ್ಯ ಅವರು ಹೈನುಗಾರಿಕೆ ಮಾಡುವ ರೈತರಿಗೆ ₹5 ಪ್ರೋತ್ಸಾಹ ಧನ ಹೆಚ್ಚಳ ಮಾಡಿದರು. ನಾನು ಸಹಕಾರಿ ಸಚಿವರಾಗಿದ್ದಾಗ ಎಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳಿಗೆ ಸಾಫ್ಟ್‌ವೇರ್ ಅಳವಡಿಸಿಲಾಗಿದೆ. ಸಿಎಂ ಸಿದ್ದರಾಮಯ್ಯ ನಿರ್ದೇಶನದ ಮೇರೆಗೆ ಇದು ಜಾರಿಯಾಯಿತು. ಸಾಫ್ಟ್‌ವೇರ್ ಬಂದ ಮೇಲೆ ಎಮ್ಮೆ ಹಾಲು ಹಾಕುವವರೆಗೆ ₹52 ರಿಂದ ₹57 ಕೊಡಲಾಗುತ್ತಿದೆ. ಇದರಿಂದ ಹಾಲು ಒಕ್ಕೂಟಕ್ಕೆ ಅನುಕೂಲ ಆಗಿದೆ. ಈಗಾಗಲೇ ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಇತ್ತು. ಇತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನದ ಮೇರೆಗೆ ಸಹಕಾರ ಕ್ಷೇತ್ರದಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ತರಲಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ