ಜಿಕೆವಿಕೆ ಕೃಷಿ ಮೇಳದಲ್ಲಿ 3 ಹೊಸ ತಳಿಗಳು ಲೋಕಾರ್ಪಣೆ; ಬರಗಾಲದಲ್ಲೂ ಬಂಪರ್ ಇಳುವರಿ ಖಚಿತ

Sathish Kumar KH   | Kannada Prabha
Published : Nov 03, 2026, 07:38 AM IST
bengaluru gkvk krishi mela Ragi

ಸಾರಾಂಶ

ಬೆಂಗಳೂರಿನ ಜಿಕೆವಿಕೆಯಲ್ಲಿ ನವೆಂಬರ್ 13ರಂದು ನಡೆಯಲಿರುವ ಕೃಷಿ ಮೇಳದಲ್ಲಿ ಮೂರು ಹೊಸ ಬೆಳೆ ತಳಿಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಬರ ಸಹಿಷ್ಣು ಜಿಪಿಯು 101 ರಾಗಿ, ಹೆಚ್ಚು ಪ್ರೋಟೀನ್ ಇರುವ ಕೆಬಿಜೆಎ 18 ಬೀಜದ ದಂಟು ಮತ್ತು ಬಹುಪಯೋಗಿ ಎಂಎಎಚ್‌ 20-45 ಮುಸುಕಿನ ಜೋಳವನ್ನು ರೈತರಿಗಾಗಿ ಪರಿಚಯಿಸಲಾಗುತ್ತಿದೆ.

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ನ.03): ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಹೆಬ್ಬಾಳದ ಜಿಕೆವಿಕೆಯಲ್ಲಿ ನ.13ರಂದು ಆಯೋಜಿಸಲಿರುವ ಬಹು ನಿರೀಕ್ಷಿತ ‘ಕೃಷಿ ಮೇಳ’ದಲ್ಲಿ ಈ ಬಾರಿ 3 ಹೊಸ ತಳಿಗಳನ್ನು ಲೋಕಾರ್ಪಣೆ ಮಾಡಲು ಸಿದ್ಧತೆ ನಡೆದಿದೆ. ಕಡಿಮೆ ನೀರಿನಲ್ಲೂ ಹುಲುಸಾಗಿ ಬೆಳೆ ಬರುವ ರಾಗಿಯ ಜಿಪಿಯು 101, ಮುಸುಕಿನ ಜೋಳದ ಎಂಎಎಚ್‌ 20-45 ಹಾಗೂ ಬೀಜದ ದಂಟಿನ ಕೆಬಿಜೆಎ 18 ತಳಿಗಳನ್ನು ನೂತನವಾಗಿ ಸಂಶೋಧಿಸಲಾಗಿದ್ದು ಕೃಷಿ ಮೇಳದಲ್ಲಿ ಬಿಡುಗಡೆಗೊಳಿಸಲಾಗುವುದು. ನೂತನ ತಳಿಗಳನ್ನು ಅಂದು ಸಾರ್ವಜನಿಕರು ವೀಕ್ಷಿಸಬಹುದಾಗಿದೆ.

ಜಿಪಿಯು 101 ನೂತನ ರಾಗಿ ತಳಿಯು 110 ರಿಂದ 115 ದಿನದಲ್ಲಿ ಕಟಾವಿಗೆ ಸಿದ್ಧವಾಗಲಿದೆ. ಹೆಕ್ಟೇರ್‌ಗೆ 37 ರಿಂದ 40 ಕ್ವಿಂಟಾಲ್‌ ಇಳುವರಿ ಬರಲಿದ್ದು 6.5 ಟನ್‌ ಮೇವು ಸಿಗುವುದು ಈ ತಳಿಯ ವಿಶೇಷವಾಗಿದೆ. ಕಡಿಮೆ ನೀರಿನಲ್ಲೂ ಹುಲುಸಾಗಿ ಬೆಳೆ ಬರುವುದರಿಂದ ಬರಗಾಲಕ್ಕೆ ಈ ತಳಿ ಸೂಕ್ತವಾಗಿದೆ. ಬೆಂಕಿರೋಗ ನಿರೋಧಕತೆ ಹೊಂದಿದ್ದು ಬಾಗುವಿಕೆಗೆ ಪ್ರತಿರೋಧ ಸಾಮರ್ಥ್ಯವನ್ನು ಹೊಂದಿದೆ. ಈ ರಾಗಿಯಲ್ಲಿ ಕಬ್ಬಿಣದ ಅಂಶ ಅಧಿಕವಾಗಿದೆ ಎಂದು ವಿವಿ ಮೂಲಗಳು ಸ್ಪಷ್ಟಪಡಿಸಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಳಿ ಅಭಿವೃದ್ಧಿ ವಿಜ್ಞಾನಿ ಡಾ.ಮಾರಪ್ಪ, ‘ರಾಗಿಯ ಜಿಪಿಯು 101 ತಳಿಯು ಮಧ್ಯಮಾವಧಿ ತಳಿಯಾಗಿದ್ದು ಕಡಿಮೆ ನೀರಿನಲ್ಲೂ ಉತ್ತಮವಾಗಿ ಬೆಳೆಯುತ್ತದೆ. ಬೆಂಕಿರೋಗ ನಿರೋಧಕತೆಯನ್ನು ಹೊಂದಿದೆ. ಕೆಫು ಬಣ್ಣ ಹೊಂದಿದ್ದು ಇದರಿಮದ ತಯಾರಿಸಿದ ರಾಗಿ ಮುದ್ದೆಯ ಬಣ್ಣ, ಗುಣಮಟ್ಟವೂ ಚೆನ್ನಾಗಿದೆ. ಮುದ್ದೆ ಬೇಗ ಹಳಸುವುದಿಲ್ಲ’ ಎಂದು ವಿವರಿಸಿದರು.

ಪ್ರೋಟೀನ್‌ ಯುಕ್ತ ಬೀಜದ ದಂಟು

‘ಹೆಚ್ಚು ಪ್ರೋಟೀನ್‌ ಇರುವ ಕೆಬಿಜಿಎ 18 ಬೀಜದ ದಂಟನ್ನು ಸಂಶೋಧನೆ ಮಾಡಿದ್ದು ಹೆಕ್ಟೇರ್‌ಗೆ 22 ರಿಂದ 24 ಕ್ವಿಂಟಾಲ್‌ ಇಳುವರಿ ಸಿಗಲಿದೆ. ಸದೃಢ ಕಾಂಡ ಹೊಂದಿದ್ದು ಬಾಗುವಿಕೆಗೆ ನಿರೋಧತೆಯನ್ನು ಹೊಂದಿದೆ. ಎಲೆ ತುಕ್ಕು ಮತ್ತು ಎಲೆ ಚುಕ್ಕೆ ರೋಗಕ್ಕೆ ಹಾಗೂ ಪ್ರಮುಖ ಕೀಟಗಳಿಗೆ ನಿರೋಧಕ ಶಕ್ತಿ ಹೊಂದಿದೆ. ಬೀಜ ಉದುರುವ ಪ್ರಮಾಣ ಕಡಿಮೆ ಇದೆ. ಹೆಚ್ಚು ಪ್ರೋಟೀನ್‌ ಅಂಶಗಳನ್ನು ಈ ಬೀಜದ ದಂಟು ಹೊಂದಿದೆ’ ಎಂದು ತಳಿ ಅಭಿವೃದ್ಧಿ ವಿಜ್ಞಾನಿ ಡಾ.ನಂದಿನಿ ತಿಳಿಸಿದ್ದಾರೆ.

ಬಹುಪಯೋಗಿ ಮುಸುಕಿನ ಜೋಳ

ಮುಸುಕಿನ ಜೋಳದ ಎಂಎಎಚ್‌ 20-45 ಹೈಬ್ರಿಡ್‌ ತಳಿಯನ್ನು ಸಂಶೋಧಿಸಲಾಗಿದ್ದು 125 ರಿಂದ 130 ದಿನದಲ್ಲಿ ಕಟಾವಿಗೆ ಬರಲಿದೆ. ಹೆಕ್ಟೇರ್‌ಗೆ 110 ರಿಂದ 115 ಕ್ವಿಂಟಾಲ್‌ ಇಳುವರಿ ಬರಲಿದ್ದು ಗಟ್ಟಿಯಾದ ಹಾಗೂ ಬಲಿಷ್ಠ ಕಾಂಡ, ಅಗಲ ಮತ್ತು ಮಂದ ಎಲೆಗಳನ್ನು ಹೊಂದಿದ್ದು ಮೇವಿಗೂ ಸಹಕಾರಿಯಾಗಲಿದೆ. ಎಲೆ ಅಂಗಮಾರಿ ರೋಗಕ್ಕೆ ಸಹಿಷ್ಣುತೆ ಹಾಗೂ ಕೇದಿಗೆ ರೋಗಕ್ಕೆ ಮಧ್ಯಮ ಸಹಿಷ್ಣುತೆಯನ್ನು ಹೊಂದಿದೆ. ಈ ತಳಿಯ ವಿಶೇಷತೆ ಬಗ್ಗೆ ಮಾಹಿತಿ ನೀಡಿದ ತಳಿ ಅಭಿವೃದ್ಧಿ ವಿಜ್ಞಾನಿ ಡಾ.ಪಿ.ಮಹದೇವು, ‘ಸಾಮಾನ್ಯ ಹವಾಮಾನ ಸಂದರ್ಭದಲ್ಲಿಯೂ ಉತ್ಕೃಷ್ಟ ಇಳುವರಿ ಪಡೆಯಬಹುದು. ಎಲೆಗಳು ಅಗಲವಾಗಿದ್ದು ದಪ್ಪ ಕಾಂಡ ಹೊಂದಿದೆ. ಎಕರೆಗೆ 18 ರಿಂದ 20 ಟನ್‌ ಹಸಿರು ಮೇವು ಸಿಗುತ್ತದೆ. ಎಥೆನಾಲ್‌ ಉತ್ಪಾದನೆಗೂ ಇದನ್ನು ಬಳಸಬಹುದು’ ಎಂದು ಸ್ಪಷ್ಟಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಂದಿನಿ ಹಾಲು, ಮೊಸರಿನ ದರ ಏರಿಕೆಗೆ ಜನಾಕ್ರೋಶ: ಸಿಎಂ ಸೂಚನೆ ಬೆನ್ನಲ್ಲೇ ಮೊಸರಿಗೆ ₹2 ಬೆಲೆ ಇಳಿಸಿದ ಕೆಎಂಎಫ್!
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಕೇಸ್: ಕೃಪಾ ಆಳ್ವಾ ಸೇರಿ 3 ಆರೋಪಿಗಳಿಗೆ ನಿರೀಕ್ಷಣಾ ಜಾಮೀನು!