65 ಸಾವಿರ ಅಂಗನವಾಡಿಗಳ 2.60 ಲಕ್ಷ ಮಕ್ಕಳಿಗಿಲ್ಲ ಹಾಲು: 5 ತಿಂಗಳಿಂದ ಹಾಲಿನ ಪೌಡರ್ ಪೂರೈಕೆ ಮಾಡದ ಕೆಎಂಎಫ್!

By Kannadaprabha News  |  First Published Jun 16, 2023, 6:07 AM IST

ರಾಜ್ಯದ 65 ಸಾವಿರ ಅಂಗನವಾಡಿ ಕೇಂದ್ರಗಳ 3ರಿಂದ 6 ವರ್ಷದ 2.60 ಲಕ್ಷ ಮಕ್ಕಳಿಗೆ ಕಳೆದ ಫೆಬ್ರವರಿಯಿಂದ ಈ ವರೆಗೂ ಹಾಲಿನ ಪೌಡರ್‌ ಪೂರೈಕೆ ಸ್ಥಗಿತವಾಗಿದ್ದು, ಇದರಿಂದ ಮಕ್ಕಳು ಹಾಲಿನ ಭಾಗ್ಯದಿಂದ ವಂಚಿತರಾಗಿದ್ದಾರೆ


ಚಂದ್ರು ಕೊಂಚಿಗೇರಿ

ಹೂವಿನಹಡಗಲಿ (ಜೂ.16): ರಾಜ್ಯದ 65 ಸಾವಿರ ಅಂಗನವಾಡಿ ಕೇಂದ್ರಗಳ 3ರಿಂದ 6 ವರ್ಷದ 2.60 ಲಕ್ಷ ಮಕ್ಕಳಿಗೆ ಕಳೆದ ಫೆಬ್ರವರಿಯಿಂದ ಈ ವರೆಗೂ ಹಾಲಿನ ಪೌಡರ್‌ ಪೂರೈಕೆ ಸ್ಥಗಿತವಾಗಿದ್ದು, ಇದರಿಂದ ಮಕ್ಕಳು ಹಾಲಿನ ಭಾಗ್ಯದಿಂದ ವಂಚಿತರಾಗಿದ್ದಾರೆ.

Tap to resize

Latest Videos

undefined

ಹೌದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಆರಂಭದ ದಿನದಿಂದ ಹಾಲಿನ ಪೌಡರ್‌ ಪೂರೈಕೆ ಮಾಡಲಾಗಿದೆ. ಇದರಿಂದ ನಿತ್ಯ ಮಕ್ಕಳಿಗೆ ಹಾಲು ವಿತರಣೆ ಮಾಡಲಾಗುತ್ತಿದೆ. ಆದರೆ ಅಂಗನವಾಡಿ ಕೇಂದ್ರಗಳಿಗೆ ಮಾತ್ರ ಈ ವರೆಗೂ ಕೆಎಂಎಫ್‌ನಿಂದ ಹಾಲಿನ ಪೌಡರ್‌ ಪೂಕೈರೆಯೇ ಆಗಿಲ್ಲ. ಇದರಿಂದ ಸಣ್ಣಮಕ್ಕಳಿಗೆ ಹಾಲು ಇಲ್ಲದಂತಾಗಿದೆ.

ಚಿತ್ರದುರ್ಗ: ಗಾಂಧಿನಗರದಲ್ಲಿದೆ ಮಾದರಿ ಸರ್ಕಾರಿ ಅಂಗನವಾಡಿ ಕೇಂದ್ರ..!

ಸಣ್ಣ ಮಕ್ಕಳು ಅಪೌಷ್ಟಿಕತೆ ಬಳಲಿಕೆಯನ್ನು ದೂರ ಮಾಡಲು, ಸರ್ಕಾರ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಹಾಲಿನ ಪೌಡರ್‌ ಪೂರೈಕೆ ಮಾಡಿ ಹಾಲು ನೀಡಲಾಗುತ್ತಿತ್ತು. ಆದರೆ ಕಳೆದ 5 ತಿಂಗಳಿಂದ ಕೆಎಂಎಫ್‌ ಹಾಲಿನ ಪೌಡರ್‌ ಪೂರೈಕೆ ಮಾಡಿಲ್ಲ. ಹಾಲಿನ ಪೌಡರ್‌ ಕೊರತೆ ಇದೆ, ಹಾಗಾಗಿ ಪೂರೈಕೆ ಇಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.

ಬೇಸಿಗೆಯ ಸಂದರ್ಭದಲ್ಲಿ ಹಾಲಿನ ಉತ್ಪಾದನೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆ ಇತ್ತು. ಆದರೀಗ ಮಳೆಗಾಲ ಬಂದಿದ್ದು, ಹಾಲಿನ ಉತ್ಪಾದನೆಯಲ್ಲಿ ತುಸು ಚೇತರಿಕೆ ಕಾಣಿಸಿಕೊಂಡಿದೆ. ಪೌಡರ್‌ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡಿದರೆ, ಅಂಗನವಾಡಿ ಕೇಂದ್ರಗಳಿಗೆ ಹಾಲಿನ ಪೌಡರ್‌ ಪೂರೈಕೆ ಮಾಡುತ್ತೇವೆಂದು ಕೆಎಂಎಫ್‌ ಅಧಿಕಾರಿಗಳು ಹೇಳುತ್ತಾರೆಂಬ ಮಾತು ಕೇಳಿ ಬರುತ್ತಿದೆ.

ಅದೇ ರೀತಿ ಹೂವಿನಹಡಗಲಿ ತಾಲೂಕಿನ 237 ಅಂಗನವಾಡಿ ಕೇಂದ್ರಗಳಲ್ಲಿ 13,871 ಮಕ್ಕಳಿಗೆ ಹಾಲು ಸಿಗುತ್ತಿಲ್ಲ. ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಕೆಎಂಎಫ್‌ನಿಂದ 7500 ಕೆಜಿ ಹಾಲಿನ ಪೌಡರ್‌ ಪೂರೈಕೆಯಾಗಬೇಕಿದೆ.

ತಾಲೂಕು ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ 67 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿವೆ. ವೈದ್ಯರಿಂದ 15 ದಿನಕ್ಕೊಮ್ಮೆ ಆರೋಗ್ಯ ತಪಾಸಣೆ, ಮಕ್ಕಳ ತೂಕ ಪರೀಕ್ಷೆ ಮಾಡಲಾಗುತ್ತಿದೆ. ಈ ಮಕ್ಕಳಿಗೆ ದಿನಕ್ಕೆ 4 ಬಾರಿ ಪೌಷ್ಟಿಕ ಆಹಾರ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಸೂಕ್ತ ಮಾತ್ರೆ, ಔಷಧಿ ನೀಡಲಾಗುತ್ತಿದೆ.

 

ಕರ್ನಾಟಕದ ಶೇ.40ರಷ್ಟು ಅಂಗನವಾಡಿಗೆ ಸ್ವಂತ ಕಟ್ಟಡ ಇಲ್ಲ..!

ಅಂಗನವಾಡಿ ಕೇಂದ್ರಗಳಿಗೆ ಕಳೆದ ಫೆಬ್ರವರಿಯಿಂದ ಈ ವರೆಗೂ ಕೆಎಂಎಫ್‌ನಿಂದ ಹಾಲಿನ ಪೌಡರ್‌ ಪೂರೈಕೆಯಾಗಿಲ್ಲ. ನಮ್ಮ ಇಲಾಖೆಯಿಂದ ಕೆಎಂಎಫ್‌ಗೆ ನೀಡುವ ಎಲ್ಲ ಹಣವನ್ನು ಪಾವತಿ ಮಾಡಿದ್ದೇವೆ. ಆದರೂ ಹಾಲಿನ ಪೌಡರ್‌ ನೀಡುತ್ತಿಲ್ಲ. ಈ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚಿಸುವ ಜತೆಗೆ, ಪತ್ರ ವ್ಯವಹಾರ ಮಾಡಿದ್ದೇವೆ. ಹಾಲಿನ ಉತ್ಪಾದನೆ ಕಡಿಮೆ ಇದೆ. ಆದರಿಂದ ಪೌಡರ್‌ ಪೂರೈಕೆ ಇಲ್ಲ. ಅಲ್ಲಿಂದ ಪೌಡರ್‌ ಬಂದರೆ ನಾವು ಕೊಡುತ್ತೇವೆ ಎಂದು ಕೆಎಂಎಫ್‌ ಅಧಿಕಾರಿಗಳು ಹೇಳುತ್ತಾರೆ.

ಅವಿನಾಶ ಲಿಂಗ ಎಸ್‌. ಕೊಟಕಿಂಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಹೂವಿನಹಡಗಲಿ

ಪ್ರಾಥಮಿಕ ಶಾಲೆಯಲ್ಲಿನ ಅಂಗನವಾಡಿ ಕೇಂದ್ರಗಳ ಮಕ್ಕಳು, ಸರ್ಕಾರಿ ಶಾಲಾ ಮಕ್ಕಳಿಗೆ ಹಾಲು ವಿತರಣೆಯ ಸಂದರ್ಭದಲ್ಲಿ, ಸಣ್ಣ ಮಕ್ಕಳು ನಮಗೂ ಹಾಲು ಕೊಡಿ ಎಂದು ಲೋಟ ಹಿಡಿದುಕೊಂಡು ನಿಲ್ಲುತ್ತಾರೆ. ಆದರೆ ಅಂಗನವಾಡಿ ಮಕ್ಕಳಿಗೆ ಹಾಲು ಸಿಗುತ್ತಿಲ್ಲ. ಕೂಡಲೇ ಸರ್ಕಾರ ಅಂಗನವಾಡಿ ಕೇಂದ್ರಗಳಿಗೂ ಹಾಲಿನ ಪೌಡರ್‌ ಪೂರೈಕೆ ಮಾಡಬೇಕು.

ಶಾಂತರಾಜ್‌ ಜೈನ್‌ ಸಿಪಿಐ ಜಿಲ್ಲಾ ಸಂಚಾಲಕ, ಹೂವಿನಹಡಗಲಿ

click me!