
ಬೆಂಗಳೂರು (ಅ.29): ‘ಗಂಧದಗುಡಿ’ ಸಿನಿಮಾ ಟೈಟಲ್ ಅನ್ನು ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಮುದ್ರಿಸುವ ಮೂಲಕ ನಂದಿನಿ ಹಾಲಿನ ಬ್ರಾಂಡ್ ಅಂಬಾಸಿಡರ್ ಆಗಿದ್ದ ಪವರ್ ಸ್ಟಾರ್ ಡಾ.ಪುನೀತ್ ರಾಜ್‌ಕುಮಾರ್ ಅವರಿಗೆ ಕೆಎಂಎಫ್ ಗೌರವ ಸಮರ್ಪಿಸಿದೆ. ಅ.29ಕ್ಕೆ ಡಾ.ಪುನೀತ್ ರಾಜ್‌ಕುಮಾರ್ ಅವರು ನಿಧನರಾಗಿ ಒಂದು ವರ್ಷ ಪೂರ್ಣಗೊಳ್ಳುತ್ತಿದೆ. ಜೊತೆಗೆ ರಾಜ್ಯ ಸರ್ಕಾರ ನ.1ರಂದು ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಸಿದ್ಧತೆ ನಡೆಸುತ್ತಿದೆ.
ಈ ನಡುವೆಯೇ ಗಂಧದಗುಡಿ ಚಲನಚಿತ್ರ ತೆರೆಗೆ ಬಂದಿದ್ದು ಕೆಎಂಎಫ್ 15 ದಿನಗಳ ಕಾಲ ನಂದಿನಿ ಹಾಲಿನ ಪ್ಯಾಕೇಟ್ ಮೇಲೆ ‘ಗಂಧದಗುಡಿ- ಜರ್ನಿ ಆಫ್ ಎ ಟ್ರೂ ಹಿರೋ’ ಸಿನಿಮಾ ಟೈಟಲ್ ಮುದ್ರಿಸಿ ಪುನೀತ್ ಅವರಿಗೆ ಗೌರವ ಸಲ್ಲಿಸುತ್ತಿರುವುದಾಗಿ ಕೆಎಂಎಫ್ ತಿಳಿಸಿದೆ. ಡಾ.ಪುನೀತ್ ರಾಜ್‌ಕುಮಾರ್ ಅವರು ನಂದಿನಿ ಹಾಲಿನ ಬ್ರಾಂಡ್ ಅಂಬಾಸಿಡರ್ ಆಗಿ ರೈತರ ಸಹಾಯಕ್ಕೆ ಕೈಜೋಡಿಸಿದ್ದರು.
ಗಂಧದ ಗುಡಿಯಿಂದಾಗಿ ಮರೆಯಲಾಗದ ಟ್ರೆಕ್ಕಿಂಗ್ ಮಾಡಿದೆ: ಅಶ್ವಿನಿ ಪುನೀತ್ ರಾಜ್‌ಕುಮಾರ್
ನಿಮಿಷಾಂಭ ದೇವಿಗೆ ಅಶ್ವಿನಿ ವಿಶೇಷ ಪೂಜೆ: ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆ ಚಿತ್ರ ‘ಗಂಧದಗುಡಿ’ ಬಿಡುಗಡೆ ಹಿನ್ನೆಲೆಯಲ್ಲಿ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಶುಕ್ರವಾರ ಪಟ್ಟಣದ ಗಂಜಾಂನ ಶ್ರೀನಿಮಿಷಾಂಭ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಬೆಳಗ್ಗೆ 8.30ಕ್ಕೆ ನಿಮಿಷಾಂಭ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ‘ಗಂಧದಗುಡಿ’ ಚಿತ್ರ ಯಶಸ್ವಿಯಾಗಲೆಂದು ಪ್ರಾರ್ಥನೆ ಸಲ್ಲಿಸಿದರು. ದೇವಾಲಯದ ಮುಖ್ಯ ಅರ್ಚಕ ಸೂರ್ಯನಾರಾಯಣ ಭಟ್ ಸಂಕಲ್ಪ ಪೂಜೆ, ಅಭಿಷೇಕ ನೆರವೇರಿಸಿ ನಂತರ ಪ್ರಸಾದ ವಿನಿಯೋಗ ನಡೆಸಿದರು. ಪೂಜೆ ಸಲ್ಲಿಕೆ ವೇಳೆ ‘ಗಂಧದಗುಡಿ’ ಚಿತ್ರದ ನಿರ್ದೇಶಕ ಅಮೋಘ ವರ್ಷ ಸಹ ಹಾಜರಿದ್ದು ಶ್ರೀ ನಿಮಿಷಾಂಭ ದೇವಿಯ ದರ್ಶನ ಪಡೆದರು.
ನಂತರ ಅಮೋಘ ವರ್ಷ ಮಾತನಾಡಿ, ಅಭಿಮಾನಿಗಳಿಗೆ ಪುನೀತ್ ರಾಜ್‌ಕುಮಾರ್ ಬಿಟ್ಟು ಹೋಗಿರುವ ಕೊನೆ ಕಥೆ ‘ಗಂಧದಗುಡಿ’. ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅನೇಕ ಸಂದೇಶ ನೀಡಿದ್ದಾರೆ. ಅಭಿಮಾನಿಗಳಿಗಾಗಿಯೇ ಮಾಡಿರುವ ಸಿನಿಮಾ ಇದಾಗಿದೆ. ಚಿತ್ರ ನೋಡಿ ಹಾರೈಸುವಂತೆ ಕೋರಿದರು. ಅಪ್ಪು ಜರ್ನಿ ಶುರುವಾಗಿದ್ದು ನ.29ರಂದು. 2 ವರ್ಷ ಆಯ್ತು ನಮ್ಮಿಬ್ಬರ ಜರ್ನಿ ಆರಂಭವಾಗಿ. ಇದು ಅಭಿಮಾನಿಗಳ ಸಿನಿಮಾ. ಅವರು ಸಿನಿಮಾ ನೋಡಿ ಪ್ರೀತಿ ಕೊಟ್ಟರೆ ಇನ್ನೇನು ಬೇಡ. ಅವರು ಹೇಳಿ ಕೊಟ್ಟಿದ್ದನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಅಪ್ಪು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಅಂದು ಅಪ್ಪು, ಇಂದು ಅಶ್ವಿನಿ: ‘ಗಂಧದಗುಡಿ’ ಸಿನಿಮಾ ನಿರ್ಧಾರ ಮಾಡಿದ್ದ ದಿನ ಚಿತ್ರನಟ ಪುನೀತ್ ನಿಮಿಷಾಂಭ ದರ್ಶನ ಮಾಡಿದ್ದರು. ಸಿನಿಮಾ ಬಿಡುಗಡೆಯಾದ ದಿನ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ನಿಮಿಷಾಂಭ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ನಿಮಿಷಾಂಭ ದೇವಾಲಯಕ್ಕೂ ಪುನೀತ್‌ಗೂ ಅವಿನಾಭಾವ ಸಂಬಂಧ ನೆನದ ಪ್ರಧಾನ ಅರ್ಚಕ ಸೂರ್ಯ ನಾರಾಯಣ ಭಟ್, ಪುನೀತ್ ಹಲವು ದಶಕಗಳಿಂದ ನಿಮಿಷಾಂಭ ದೇಗುಲಕ್ಕೆ ಬರುತ್ತಿದ್ದರು. ತಂದೆ ಡಾ.ರಾಜ್‌ಕುಮಾರ್ ಅಪಹರಣ ಆಗಿದ್ದ ವೇಳೆ ತಾಯಿ ಜೊತೆ ಬಂದು ಹರಕೆ ಕಟ್ಟಿಕೊಂಡಿದ್ದರು. ಪಾರ್ವತಮ್ಮ ಕೂಡ ತಾಳಿ ಹುಂಡಿಗೆ ಹಾಕಿ ಪ್ರಾರ್ಥಿಸಿದ್ದರು ಎಂದು ಸ್ಮರಿಸಿದರು.
Gandhada Gudi ಅಪ್ಪು ಕನಸಿನ ದೃಶ್ಯ ಪಯಣ: ಅಮೋಘವರ್ಷ
ಪ್ರತಿ ಚಿತ್ರ ಬಿಡುಗಡೆ ವೇಳೆ ತಾಯಿ ದರ್ಶನ ಪಡೆಯುವುದು ಪುನೀತ್ ಅಭ್ಯಾಸ. ‘ಗಂಧದಗುಡಿ’ ಸಿನಿಮಾ ನಿರ್ಧಾರ ಮಾಡುವ ದಿನವೂ ಪುನೀತ್‌ರಿಂದ ದೇವಿ ದರ್ಶನ ಮಾಡಿದ್ದರು. ಆದರೆ, ಸಿನಿಮಾ ಬಿಡುಗಡೆ ದಿನ ಅವರಿಲ್ಲ ಅನ್ನೋದು ನಿಜಕ್ಕೂ ಬೇಸರ ತರಿಸಿದೆ. ಪುನೀತ್ ಪತ್ನಿ ದೇವಿ ದರ್ಶನ ಪಡೆದು ಸಿನಿಮಾ ಯಶಸ್ಸಿಗೆ ಪ್ರಾರ್ಥಿಸಿದ್ದಾರೆ. ಸಿನಿಮಾ ಯಶಸ್ಸು ಕಾಣದಲಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ