Milk Price Hike: ಸರ್ಕಾರದ ಒಪ್ಪಿಗೆ ಕೇಳದೆ ಹಾಲಿನ ದರ 3 ಹೆಚ್ಚಳ?

By Kannadaprabha News  |  First Published Sep 12, 2022, 5:44 AM IST

ಹಾಲಿನ ದರ ಹೆಚ್ಚಳ ಮಾಡುವಂತೆ ಕಳೆದ 8 ತಿಂಗಳುಗಳಿಂದ ಕೆಎಂಎಫ್‌ ವತಿಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರೂ ಸರ್ಕಾರ ಸ್ಪಂದಿಸಿಲ್ಲ


ಬೆಂಗಳೂರು(ಸೆ.12): ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಲು ಹಾಗೂ ಸಂಕಷ್ಟದಲ್ಲಿರುವ ರೈತರ ಆರ್ಥಿಕಾಭಿವೃದ್ಧಿಗೆ ಸಹಕರಿಸಲು ಪ್ರತಿ ಲೀಟರ್‌ ನಂದಿನಿ ಹಾಲಿನ ದರವನ್ನು 3 ರು. ಹೆಚ್ಚಳ ಮಾಡಲು ಕೆಎಂಎಫ್‌ ನಿರ್ಧಾರ ಮಾಡಿದೆ.
ಹಾಲಿನ ದರ ಹೆಚ್ಚಳ ಮಾಡುವಂತೆ ಕಳೆದ 8 ತಿಂಗಳುಗಳಿಂದ ಕೆಎಂಎಫ್‌ ವತಿಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಮತ್ತೊಂದೆಡೆ ರೈತರು ಹಾಗೂ ಕೆಎಂಎಫ್‌ನ ಜಿಲ್ಲಾ ಹಾಲು ಒಕ್ಕೂಟಗಳಿಂದ ಹಾಲಿನ ದರ ಹೆಚ್ಚಳಕ್ಕೆ ಒತ್ತಡ ಹೆಚ್ಚಾಗಿದೆ. ಹೀಗಾಗಿ ಕೆಎಂಎಫ್‌ಗೆ ಇರುವ ಅಧಿಕಾರ ಬಳಸಿಕೊಂಡು ತಾನೇ ಹಾಲಿನ ದರ ಹೆಚ್ಚಳ ಮಾಡಲು ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆದ ಕೆಎಂಎಫ್‌ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಂಡಿದ್ದು, ಕೆಎಂಎಫ್‌ನ ಎಲ್ಲ 14 ಜಿಲ್ಲಾ ಹಾಲು ಒಕ್ಕೂಟಗಳು ಹಾಲಿನ ದರ ಹೆಚ್ಚಳ ಮಾಡುವುದಕ್ಕೆ ಬೆಂಬಲ ವ್ಯಕ್ತಪಡಿಸಿವೆ ಎಂದು ತಿಳಿದು ಬಂದಿದೆ.

Tap to resize

Latest Videos

Milk Price Hike: ಅಮುಲ್, ಮದರ್‌ ಡೈರಿ ಹಾಲಿನ ದರ ಹೆಚ್ಚಳ: ನಾಳೆಯಿಂದಲೇ ಪರಿಷ್ಕೃತ ದರ ಜಾರಿ

ಪ್ರತಿ ಬಾರಿಯೂ ಕೆಎಂಎಫ್‌ ರಾಜ್ಯ ಸರ್ಕಾರದ ಅನುಮತಿ ಪಡೆದೇ ಹಾಲಿನ ದರ ಹೆಚ್ಚಳ ಮಾಡುತ್ತಿತ್ತು. ಆರ್ಥಿಕವಾಗಿ ಹಾಗೂ ಹಲವು ಯೋಜನೆಗಳೊಂದಿಗೆ ಸರ್ಕಾರದ ಜತೆ ಸಹಭಾಗಿತ್ವ ಇರುವುದರಿಂದ ರಾಜ್ಯ ಸರ್ಕಾರದ ಸಮ್ಮತಿ ಇಲ್ಲದೆ ಹಾಲಿನ ದರಗಳ ಬಗ್ಗೆ ಕೆಎಂಎಫ್‌ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ.

ಆದರೆ, ಪ್ರಸ್ತುತ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಳ, ಅತಿವೃಷ್ಟಿಯಿಂದ ರೈತರಿಗೆ ಉಂಟಾಗಿರುವ ತೀವ್ರ ಸಂಕಷ್ಟದಿಂದಾಗಿ ಹಾಲಿನ ದರ ಹೆಚ್ಚಳ ಅನಿವಾರ್ಯವಾಗಿದೆ. ಸರ್ಕಾರವು ದರ ಹೆಚ್ಚಳಕ್ಕೆ ಮೀನಮೇಷ ಎಣಿಸುತ್ತಿರುವುದರಿಂದ ತನಗೆ ಇರುವ ಅಧಿಕಾರವನ್ನು ಬಳಸಿಕೊಂಡು ಕೆಎಂಎಫ್‌ನಿಂದಲೇ ದರ ಹೆಚ್ಚಳ ಮಾಡಲು ಆದೇಶ ಮಾಡಬೇಕು. ಒಕ್ಕೂಟಗಳಿಗೆ ಈ ಅಧಿಕಾರ ಇರುವುದರಿಂದ ವಿಳಂಬ ಮಾಡಬಾರದು ಎಂದು ಸಭೆಯಲ್ಲಿ ತೀರ್ಮಾನವಾಗಿದ್ದು, ಎಲ್ಲರ ಒತ್ತಾಯದ ಮೇರೆಗೆ ಈ ಬಗ್ಗೆ ನಿರ್ಣಯವನ್ನೂ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

Milk Price Hike: ಕೆಎಂಎಫ್‌ನಿಂದ ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಕೆ!

ದರ ಹೆಚ್ಚಳದ ಹಣ ರೈತರಿಗೆ ವರ್ಗ:

ಹಾಲಿನ ದರ ಹೆಚ್ಚಳ ಮಾಡುವಂತೆ ಕಳೆದ 8 ತಿಂಗಳುಗಳಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುತ್ತಿದೆ. ಈ ಬಗ್ಗೆ ಎಷ್ಟುಬಾರಿ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿಕೊಂಡರೂ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ಅಂತಿಮವಾಗಿ ಒಕ್ಕೂಟದ ವತಿಯಿಂದಲೇ ಪ್ರತಿ ಲೀಟರ್‌ಗೆ 3 ರು. ಹೆಚ್ಚಳ ಮಾಡಿ, ಈ ಹಣವನ್ನು ರೈತರಿಗೆ ವರ್ಗಾಯಿಸಲು ನಿರ್ಧರಿಸಲಾಗಿದೆ.

ಇದು ಸಾಧ್ಯವೇ?
- ಪ್ರತಿ ಬಾರಿಯೂ ಸರ್ಕಾರದ ಅನುಮತಿ ಪಡೆದೇ ದರ ಏರಿಸುತ್ತಿದ್ದ ಕೆಎಂಎಫ್‌
- ಈ ಬಾರಿ ದರ ಹೆಚ್ಚಳಕ್ಕೆ 8 ತಿಂಗಳಿನಿಂದ ಕೇಳುತ್ತಿದ್ದರೂ ಸರ್ಕಾರದ ಉತ್ತರವಿಲ್ಲ
- ಹೀಗಾಗಿ ತನಗಿರುವ ಅಧಿಕಾರ ಬಳಸಿ ದರ ಏರಿಕೆಗೆ ಕೆಎಂಎಫ್‌ನಿಂದ ನಿರ್ಧಾರ
- ದರ ಏರಿಕೆಗೆ ಎಲ್ಲ 14 ಒಕ್ಕೂಟಗಳ ಬೆಂಬಲ: ಏರಿಸಿದ 3 ರು. ರೈತರಿಗೆ ವರ್ಗ
 

click me!