ಹಾಲಿನ ದರ ಹೆಚ್ಚಳ ಮಾಡುವಂತೆ ಕಳೆದ 8 ತಿಂಗಳುಗಳ ಹಿಂದೆಯೇ ಕೆಎಂಎಫ್ ವತಿಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರೂ ಈವರೆಗೆ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಈ ಹಿನ್ನೆಲೆ ಕೆಎಂಎಫ್ ಸ್ವತ: ದರ ಹೆಚ್ಚಳಕ್ಕೆ ನಿರ್ಧಾರ ಮಾಡಿದೆ ಎಂದು ಹೇಳಲಾಗಿದೆ.
ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಬರೆ ಬೀಳಲಿದೆ. ರಾಜ್ಯ ಸರ್ಕಾರದ ಮೀನಾಮೇಷದ ಮಧ್ಯೆಯೇ ಹಾಲಿನ ದರ ಹೆಚ್ಚಳಕ್ಕೆ (Milk Price Rise) ಕೆಎಂಎಫ್ (KMF) ನಿರ್ಧಾರ ಮಾಡಿದೆ ಎಂದು ಹೇಳಲಾಗಿದೆ. ಸರ್ಕಾರದ ಒಪ್ಪಿಗೆ ಕೇಳದೆ ಕರ್ನಾಟಕ ಹಾಲು ಮಹಾಮಂಡಳಿ (Karnataka MIlk Federation) ದರ ಏರಿಸೇ ಬಿಡುತ್ತಾ ಎಂಬ ಮಾತುಗಳು ಕೇಳಿಬರುತ್ತಿದೆ. ಪ್ರತಿ ಲೀಟರ್‌ಗೆ ಹಾಲಿನ ದರವನ್ನು 3 ರೂ. ಏರಿಕೆ ಮಾಡಲು ಕೆಎಂಎಫ್ ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತಿದೆ. ಸಂಕಷ್ಟದಲ್ಲಿರುವ ರೈತರಿಗೆ ಸಹಕರಿಸುವ ನಿಟ್ಟಿನಲ್ಲಿ ಹಾಲಿನ ದರ ಏರಿಕೆಗೆ ಸರ್ಕಾರಕ್ಕೆ ಕೆಎಂಎಫ್ ಈ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿತ್ತು.
ಕಳೆದ 8 ತಿಂಗಳ ಹಿಂದೆಯೇ ಹಾಲಿನ ದರವನ್ನು 5 ರೂ. ಏರಿಸುವಂತೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಪ್ರಸ್ತಾವನೆ ಇಡಲಾಗಿತ್ತು. ಆದರೆ, ಈವರೆಗೂ ಸರ್ಕಾರದಿಂದ ಯಾವುದೇ ಉತ್ತರ ಸಿಗದ ಹಿನ್ನೆಲೆ ಹಾಲು ಮಹಾಮಂಡಳಿಯ 14 ಒಕ್ಕೂಟಗಳಿಂದ ಹಾಲಿನ ದರವನ್ನು 3 ರೂ. ಹೆಚ್ಚಳಕ್ಕೆ ನಿರ್ಧಾರ ಮಾಡಿದೆ ಎನ್ನಲಾಗಿದೆ. ಈ ಬಗ್ಗೆ ಇಂದು ದೆಹಲಿಯಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಹಾಲು ಮಹಾಮಂಡಳಿಯಿಂದ ಮಹತ್ವದ ಸಭೆ ನಡೆಯುತ್ತಿದ್ದು, ಸಭೆಯ ಬಳಿಕ ದರ ಏರಿಕೆ ಘೋಷಣೆ ಮಾಡುವ ಸಾಧ್ಯತೆ ಇದೆ. ಕಳೆದ ಮೂರು ವರ್ಷದ ಹಿಂದೆ 2 ರೂಪಾಯಿ ಏರಿಕೆಯಾಗಿತ್ತು.
ಇದನ್ನು ಓದಿ: Milk Price Hike: ಸರ್ಕಾರದ ಒಪ್ಪಿಗೆ ಕೇಳದೆ ಹಾಲಿನ ದರ 3 ಹೆಚ್ಚಳ?
ಪ್ರತಿ ಬಾರಿಯೂ ಕೆಎಂಎಫ್ ರಾಜ್ಯ ಸರ್ಕಾರದ ಅನುಮತಿ ಪಡೆದೇ ಹಾಲಿನ ದರ ಹೆಚ್ಚಳ ಮಾಡುತ್ತಿತ್ತು. ಆರ್ಥಿಕವಾಗಿ ಹಾಗೂ ಹಲವು ಯೋಜನೆಗಳೊಂದಿಗೆ ಸರ್ಕಾರದ ಜತೆ ಸಹಭಾಗಿತ್ವ ಇರುವುದರಿಂದ ರಾಜ್ಯ ಸರ್ಕಾರದ ಸಮ್ಮತಿ ಇಲ್ಲದೆ ಹಾಲಿನ ದರಗಳ ಬಗ್ಗೆ ಕೆಎಂಎಫ್ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ, ಪ್ರಸ್ತುತ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಳ, ಅತಿವೃಷ್ಟಿಯಿಂದ ರೈತರಿಗೆ ಉಂಟಾಗಿರುವ ತೀವ್ರ ಸಂಕಷ್ಟದಿಂದಾಗಿ ಹಾಲಿನ ದರ ಹೆಚ್ಚಳ ಅನಿವಾರ್ಯವಾಗಿದೆ. ಸರ್ಕಾರವು ದರ ಹೆಚ್ಚಳಕ್ಕೆ ಮೀನಾಮೇಷ ಎಣಿಸುತ್ತಿರುವುದರಿಂದ ತನಗೆ ಇರುವ ಅಧಿಕಾರವನ್ನು ಬಳಸಿಕೊಂಡು ಕೆಎಂಎಫ್‌ನಿಂದಲೇ ದರ ಹೆಚ್ಚಳ ಮಾಡಲು ಆದೇಶ ಮಾಡಬೇಕು. ಒಕ್ಕೂಟಗಳಿಗೆ ಈ ಅಧಿಕಾರ ಇರುವುದರಿಂದ ವಿಳಂಬ ಮಾಡಬಾರದು ಎಂದು ಸಭೆಯಲ್ಲಿ ತೀರ್ಮಾನವಾಗಿದ್ದು, ಎಲ್ಲರ ಒತ್ತಾಯದ ಮೇರೆಗೆ ಈ ಬಗ್ಗೆ ನಿರ್ಣಯವನ್ನೂ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.