
ಬೆಂಗಳೂರು (ನ.11) : ಕಾಶಿ ಯಾತ್ರೆ ರೈಲಿಗೆ ಚಾಲನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ನಾಡಿನ ಪ್ರಸಿದ್ಧ ಕರಕುಶಲ ಕಲೆಯಾಗಿರುವ ಕೊಪ್ಪಳ ಜಿಲ್ಲೆಯ ಕಿನ್ನಾಳದ ಸ್ಮರಣಿಕೆಯೊಂದನ್ನು ನೀಡಲಾಗಿದೆ. ರಾಜ್ಯ ರಾಜಧಾನಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು, ವಂದೇ ಭಾರತ್ ಮತ್ತು ಕನ್ನಡಿಗರ ಕಾಶಿ ಯಾತ್ರೆ ರೈಲುಗಳಿಗೆ ಚಾಲನೆ, ಕನಕದಾಸ ಪ್ರತಿಮೆಗೆ ವಂದನೆ ಹಾಗೂ ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು.
ಈ ವೇಳೆ ಬೆಂಗಳೂರು-ಮೈಸೂರು-ಚನ್ನೈಗೆ ಸಾಗುವ ವಂದೇ ಭಾರತ್ (Vande Bharath) ರೈಲು ಮತ್ತು ಕಾಶಿ ಯಾತ್ರೆಗೆ ಕನ್ನಡಿಗರನ್ನು ಕರೆದೊಯ್ಯಲು ಸಿದ್ಧವಾಗಿರುವ ರೈಲುಗಳಿಗೆ ಚಾಲನೆ ನೀಡಿದರು. ಈ ವೇಳೆ ಹಾಜರಿದ್ದ ಮುಜರಾಯಿ, ಹಜ್ ಮತ್ತು ವಕ್ಫ ಸಚಿವೆ ಶಶಿಕಲಾ ಜೊಲ್ಲೆ ಅವರು ಕಿನ್ನಾಳದಲ್ಲಿ ರಚಿಸಲಾದ 'ಕಾಮಧೇನು ಕಲ್ಪವೃಕ್ಷ' (Kamadhenu Kalpavrukhsa) ಮೂರ್ತಿಯನ್ನು ಸ್ಮರಣಿಕೆಯಾಗಿ ನೀಡಿದರು. ದೇಶದ ಪ್ರಸಿದ್ಧ ಕರಕುಶಲ ಕಲೆಗಳಲ್ಲಿ ಒಂದಾಗಿರುವ ಕಿನ್ನಾಳದ ಕಲಾಕೃತಿ ನಮ್ಮ ನಾಡಿನ ಹೆಮ್ಮೆಯಾಗಿದೆ. ಈ ಉಡುಗೊರೆ ನೀಡುವ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಕಾನೂನು ಮತ್ತು ಸಂಸದೀಯ, ಗಣಿ ಮತ್ತು ಕಲ್ಲಿದ್ದಿಲು ಸಚಿವ ಪ್ರಹ್ಲಾದ್ ಜೋಷಿ, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಇತರರಿದ್ದರು.
ವಿಜಯನಗರ ಸಾಮ್ರಾಜ್ಯದಿಂದ ಬಂದಿರುವ ಕಲೆ:
ಕಿನ್ನಾಳ ಕರಕುಶಲ ಗೊಂಬೆಗಳು ಮತ್ತು ಇತರೆ ಮೂರ್ತಿಗಳ ತರಯಾರಿಕೆ ವಿಜಯನಗರ ಸಾಮ್ರಾಜ್ಯ (Vijayanagara Empire)ದ ಕಾಲದಿಂದಲೂ ಬೆಳೆದುಬಂದಿದೆ. ಈ ಕಲೆಯನ್ನು ಕೊಪ್ಪಳ ಜಿಲ್ಲೆಯ ಕಿನ್ನಾಳದ ಹಲವು ಕುಟುಂಬಗಳು ಮುಂದುವರೆಸುತ್ತಾ ಬಂದಿವೆ. ಈಗ ಮೋದಿಗೆ ಕೊಡಲಾದ ಕಾಮಧೇನು ಕಲ್ಪವೃಕ್ಷ ಸ್ಮರಣಿಕೆಯನ್ನ ಕಿನ್ನಾಳ ಗ್ರಾಮದ ಕಿಶೋರ್ ಚಿತ್ರಗಾರ್ (Kishore Chitragar) ತಯಾರು ಮಾಡಿದ್ದಾರೆ. ವಿಜಯನಗರ (Vijayanagara) ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಶಶಿಕಲಾ ಜೊಲ್ಲೆ (Shashikala Jolle) ಅವರು ಕಿನ್ನಾಳದ ಕಲೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಾಗೂ ಕಲೆಯನ್ನು ಮೆಚ್ಚಿಕೊಂಡಿದ್ದರಿಂದ ಸ್ವತಃ ಕಿಶೋರ್ ಅವರಿಗೆ ಫೋನ್ ಮಾಡಿ ಸ್ಮರಣಿಕೆ ತಯಾರು ಮಾಡಲು ಹೇಳಿದ್ದರು. ಹೀಗಾಗಿ, ಕೇವಲ 7 ದಿನದಲ್ಲಿ ಈ ಸ್ಮರಣಿಕೆಯನ್ನು ಕಿಶೋರ್ ಚಿತ್ರಗಾರ್ ರಚಿಸಿದ್ದಾರೆ. ಇವರೊಂದಿಗೆ ಗಣೇಶ ಚಿತ್ರಗಾರ್, ರಾಘವೇಂದ್ರ ಚಿತ್ರಗಾರ್ ಕೂಡ ಸ್ಮರಣಿಕೆ ತಯಾರಿಸಲು ಸಾಥ್ ನೀಡಿದ್ದಾರೆ.
ಕಿನ್ನಾಳ ಕರಕುಶಲ ಕಲೆ:
ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಕಿನ್ನಾಳವು ಕರಕುಶಲ ಕಲೆಗಳ ಪ್ರವರ್ಧಮಾನ ಕೇಂದ್ರವಾಗಿದ್ದು, ಇಲ್ಲಿ ಅತ್ಯಂತ ಸೊಗಸಾದ ಮರದ ಕೆತ್ತನೆಗಳನ್ನು ಮಾಡುತ್ತಾ ಬರಲಾಗಿದೆ. ಹಂಪಿ (Hampi)ಯ ಪಂಪಾಪತೇಶ್ವರ ದೇವಾಲಯದಲ್ಲಿರುವ (Pampapateshwara Temple)ಮರದ ರಥದಲ್ಲಿ ಕೆತ್ತಲಾದ ಪ್ರಸಿದ್ಧವಾದ ಮ್ಯೂರಲ್ ವರ್ಣಚಿತ್ರಗಳು ಇವುಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಕಿನ್ನಾಳದ ಕುಶಲಕರ್ಮಿಗಳ ಪೂರ್ವಜರು ಕಲೆಯಲ್ಲಿ ನಿಪುಣರೆಂದು ರುಜುವಾತಾಗಿದೆ. 2007 ರಿಂದ ಸ್ಥಳೀಯ ವಿದ್ಯಾರ್ಥಿಗಳು ಮತ್ತು ಕುಶಲಕರ್ಮಿಗಳು ಕಿನ್ನಾಳ ಆಟಿಕೆಗಳ ಪುನಶ್ಚೇತನ ಮಾಡುವ ಪ್ರಯತ್ನದ ಫಲವಾಗಿ ಇಂದು ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಿನ್ನಾಳ ಕಲಾಕೃತಿಗಳ ಮಾರಾಟ ಆಗುತ್ತಿವೆ.
ತಯಾರಿಕೆ ಹೇಗೆ? :
ಕಿನ್ನಾಳದಲ್ಲಿ ಗೊಂಬೆಗಳನ್ನು ತಯಾರಿಸಲು ಹಗುರ ಮರವನ್ನು ಬಳಸುತ್ತಾರೆ. ಮರದ ಆಟಿಕೆಗಳ ವಿವಿಧ ಭಾಗಗಳಲ್ಲಿ ಹುಣಿಸೆಯ ಬೀಜ ಮತ್ತು ಉರುಟು ಕಲ್ಲುಗಳನ್ನು ಬಳಸಲಾಗುತ್ತದೆ. ಸೆಣಬಿನ ಚಿಂದಿಗಳಿಂದ, ನೆನೆಸಿಡಲಾದ ತುಂಡುಗಳಾಗಿ, ಬೆಳ್ಳಿಯ ಬಣ್ಣದ ಒಣಗಿದ ಪುಡಿಯ, ಮತ್ತು ಮರದ ಧೂಳು ಮತ್ತು ಹುಣಿಸೆ ಹಣ್ಣಿನ ಬೀಜದ ಪೇಸ್ಟ್ ಮಿಶ್ರಣದಿಂದ ಕಿಟ್ಟ ತಯಾರಿಸಲಾಗುತ್ತದೆ. ಬೆಣಚುಕಲ್ಲಿನ ಪುಡಿಯನ್ನು ದ್ರವ ರೂಪದ ಅಂಟಿನೊಂದಿಗೆ ಮಿಶ್ರಣ ಮಾಡಿ ಚಿತ್ರದಲ್ಲಿನ ದೇಹದ ಮೇಲೆ ಅಲಂಕಾರ ಮತ್ತು ಆಭರಣದಂತೆ ಎದ್ದು ತೋರುವಂತೆ ಬಳಸಲಾಗುತ್ತದೆ.
15 ಸಾವಿರ ರೂ.ಗೆ ಕಾಶಿ ಯಾತ್ರೆ:
ಒಟ್ಟಾರೆ ಎಂಟು ದಿನಗಳ ಕಾಶಿ ದರ್ಶನದ ಯಾತ್ರೆಗೆ ಹೊರಡುವ ಈ ರೈಲು ವಾರಣಾಸಿ, ಪ್ರಯಾಗ್ ರಾಜ್, ಅಯೋಧ್ಯಾ ಮುಂತಾದ ಪವಿತ್ರ ಸ್ಥಳಗಳಿಗೆ ಯಾತ್ರಿಕರನ್ನು ಕರೆದೊಯ್ಯುತ್ತದೆ. ಮುಜರಾಯಿ ಇಲಾಖೆ ಭಾರತ ಸರ್ಕಾರದ ಸಹಯೋಗದಲ್ಲಿ ಕಾಶಿ ದರ್ಶನ ಯಾತ್ರೆ ಆಯೋಜಿಸಲಾಗಿದೆ. ಈ ಯಾತ್ರೆಗೆ ಒಟ್ಟು ವೆಚ್ಚ 20 ಸಾವಿರ ರೂ. ಇದ್ದು, ಇದರಲ್ಲಿ ಸರ್ಕಾರ 5 ಸಾವಿರ ರೂ ಸಹಾಯಧನ ನೀಡುತ್ತಿದೆ. ಪ್ರವಾಸದಲ್ಲಿ ಆಹಾರ, ವಸತಿ ಹಾಗೂ ಇನ್ನಿತರ ಸೌಕರ್ಯಗಳನ್ನು ಯಾತ್ರಿಕರಿಗೆ ಕಲ್ಪಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ