ತಮ್ಮ ಜೀವನದ ಕಹಿ ಘಟನೆ ಬಿಚ್ಚಿಟ್ಟ ಸಂಸದ KH ಮುನಿಯಪ್ಪ

By Web DeskFirst Published Jan 28, 2019, 9:02 AM IST
Highlights

ಸಂಸದ ಕೆ.ಎಚ್. ಮುನಿಯಪ್ಪ ತಮ್ಮ ಜೀವನದ ಕಹಿ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ. ಎರಡು ಘಟನೆಗಳು ತಮಗೆ ಅತ್ಯಂತ ನೋವನ್ನುಂಟು ಮಾಡಿವೆ ಎಂದು ಹೇಳಿದ್ದಾರೆ. 

ಬೆಂಗಳೂರು :  ಬಾಬು ಜಗಜೀವನರಾಂ ಪ್ರಧಾನಿಯಾಗುವುದು ಹಾಗೂ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗುವುದು ತಪ್ಪಿದ್ದು ತಮ್ಮ ಬದುಕಿನ ಕಹಿ ಘಟನೆಗಳು ಎಂದು ಕೋಲಾರ ಸಂಸದ ಕೆ.ಎಚ್‌.ಮುನಿಯಪ್ಪ ಹೇಳಿದ್ದಾರೆ.

ಜಗಜೀವನರಾಂ ಅವರಿಗೆ ಪ್ರಧಾನಿಯಾಗುವ ಅವಕಾಶ ಇತ್ತಾದರೂ ಕೆಲವರು ಉದ್ದೇಶಪೂರ್ವಕವಾಗಿ ತಪ್ಪಿಸಿದರು. ಅದೇ ರೀತಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ 89 ಸ್ಥಾನ ಬಂದಿದ್ದಾಗ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶವಿತ್ತು. ಆದರೆ ಹೈಕಮಾಂಡ್‌ ಅವಕಾಶ ಕೊಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಆದಿ ಜಾಂಬವ ಜಾಗೃತಿ’ ಪಾಕ್ಷಿಕ ಪತ್ರಿಕೆ ಭಾನುವಾರ ಆಯೋಜಿಸಿದ್ದ ‘ಜಾಂಬವರ ಅಂಗಳದಲ್ಲಿ ಜಾಂಬವನ ಕಥೆ-ವ್ಯಥೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕು ಬೋರ್ಡ್‌ ಸದಸ್ಯನಾಗಿ ನಂತರ ವಿವಿಧ ಹಂತಗಳಲ್ಲಿ ಬೆಳೆದು ಏಳು ಬಾರಿ ಸಂಸದನಾಗಿ ಕೇಂದ್ರ ಸಚಿವನಾಗುವ ಮಟ್ಟಕ್ಕೆ ಬೆಳೆದಿದ್ದೇನೆ. ಇದಕ್ಕೆ ಕೇವಲ ನನ್ನದೊಂದೇ ಸಮುದಾಯ ಕಾರಣವಲ್ಲ. ಜಿಲ್ಲೆಯ ಎಲ್ಲ ಸಮುದಾಯಗಳ ಸಹಕಾರದಿಂದ ಇದು ಸಾಧ್ಯವಾಯಿತು. ಹಾಗಾಗಿ ನಾನು ನನ್ನ ಸಮುದಾಯಕ್ಕೆ ಶೇ.10ರಷ್ಟುಕೆಲಸ ಮಾಡಿದರೆ ಉಳಿದ ಸಮುದಾಯಗಳಿಗೆ ಶೇ.90ರಷ್ಟುಕೆಲಸ ಮಾಡುತ್ತೇನೆ. ಒಂದು ಜಾತಿ ಇರಿಸಿಕೊಂಡು ರಾಜಕಾರಣ ಮಾಡಲು ಸಾಧ್ಯವಿಲ್ಲ. ಎಲ್ಲ ಜಾತಿಗಳ ಪ್ರೀತಿ, ವಿಶ್ವಾಸ ಗಳಿಸಿದರೆ ಮಾತ್ರ ರಾಜಕೀಯದಲ್ಲಿ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಾಲೆಳೆಯುವ ಪ್ರವೃತ್ತಿ ಬಿಡಿ:

ಹಿರಿಯೂರಿನ ಜಾಂಬವ ಸಮುದಾಯ ಸಂಸ್ಥಾನದ ಪೀಠಾಧ್ಯಕ್ಷ ಷಡಕ್ಷರಿ ಮುನಿ ಸ್ವಾಮೀಜಿ ಮಾತನಾಡಿ, ಆದಿ ಜಾಂಬವರು ಮೊದಲು ತಮ್ಮ ಜನರನ್ನು ಪ್ರೀತಿಸೋದನ್ನು ಕಲಿಯಬೇಕು. ಸಮುದಾಯದ ಅರಿವು, ಅಸ್ತಿತ್ವ, ಅಸ್ಮಿತೆ ಬಗ್ಗೆ ತಿಳಿದುಕೊಳ್ಳಬೇಕು. ಕಾಲೆಳೆಯುವ ಪ್ರವೃತ್ತಿ ಬಿಡಬೇಕು. ಹೊಗಳಿಕೆ, ಮೆಚ್ಚುಗೆ ಮಾತುಗಳಿಂದ ಯಾವುದೇ ಪ್ರಯೋಜನವಿಲ್ಲ. ದೊಡ್ಡ ಸಮುದಾಯವಿದ್ದರೂ ಶಕ್ತಿಹೀನರಾಗಿದ್ದೀರಿ. ಮೊದಲು ಒಗ್ಗಟ್ಟಾಗಿರುವುದನ್ನು ಕಲಿಯಿರಿ. ನಂತರ ಕೆ.ಎಚ್‌.ಮುನಿಯಪ್ಪ ಅವರನ್ನು ಮುಖ್ಯಮಂತ್ರಿ, ಪ್ರಧಾನಿ ಮಾಡುವುದರ ಬಗ್ಗೆ ಯೋಚಿಸಿ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ವಿಚಾರವಾದಿ ಪ್ರೊ.ಚಂದ್ರಶೇಖರ ಪಾಟೀಲ ಮಾತನಾಡಿ, ವಾಸ್ತವದಲ್ಲಿ ಇಂದು ಸಮ ಸಮಾಜವಿಲ್ಲ. ತಾರತಮ್ಯ ಹಾಗೂ ಸಾಮಾಜಿಕ ಅಂತರಗಳು ಸಾಕಷ್ಟಿವೆ. ಪ್ರಜ್ಞಾಪೂರ್ವಕವಾಗಿ ಈ ಅಂತರಗಳನ್ನು ಕಾಯ್ದುಕೊಳ್ಳಲಾಗಿದೆ. ಅಂತರವಿದ್ದಾಗ ಅಸಮಾನತೆ, ಶೋಷಣೆ, ದಬ್ಬಾಳಿಕೆ ಇದ್ದೇ ಇರುತ್ತದೆ. ಇದಕ್ಕೆ ಅವಕಾಶ ನೀಡಬಾರದು ಎಂದರು. ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ, ಸಂಸದ ಬಿ.ಎನ್‌.ಚಂದ್ರಪ್ಪ, ಹೈಕೋರ್ಟ್‌ ವಕೀಲ ಸಿರಾಜಿನ್‌ ಬಾಷಾ, ಕೆ.ಎಚ್‌.ಮುನಿಯಪ್ಪ ಪತ್ನಿ ನಾಗರತ್ನಮ್ಮ, ಗಂಗಾಧರ್‌ ಮತ್ತಿತರರು ಉಪಸ್ಥಿತರಿದ್ದರು.

click me!